ಬಳ್ಳಾರಿ: ಮೂಲತಃ ಕಾಂಗ್ರೆಸ್‌ನವರಾಗಿದ್ದ ಬಳ್ಳಾರಿ ಲೋಕಸಭೆ ಕ್ಷೇತ್ರದ ನೂತನ ಸಂಸದ ವೈ.ದೇವೇಂದ್ರಪ್ಪ ಕಾಂಗ್ರೆಸ್ ಪಕ್ಷದ ಟಿಕೆಟ್ಗಾಗಿ ಹಲವು ಬಾರಿ ಪ್ರಯತ್ನ ನಡೆಸಿ ಸುಸ್ತಾಗಿದ್ದರು. ಕೊನೆಗೂ ಮೊದಲ ಬಾರಿಗೆ ಬಿಜೆಪಿ ಕದತಟ್ಟಿದ ದೇವೇಂದ್ರಪ್ಪ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ, ಜಿಲ್ಲೆಯ 13ನೇ ಸಂಸದರಾಗಿ ಸಂಸತ್ ಪ್ರವೇಶಿಸಿದ್ದಾರೆ.
ಮೂಲತಃ ಹರಪನಹಳ್ಳಿ ತಾಲೂಕಿನ ಅರಸಿಕೇರಿಯವರಾದ ದೇವೇಂದ್ರಪ್ಪ, 1997ರಲ್ಲಿ ಬಳ್ಳಾರಿ ಜಿಲ್ಲಾ ಪರಿಷತ್ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇದಾದ ಬಳಿಕ ಕಾಂಗ್ರೆಸ್ ಪಕ್ಷದಿಂದಲೇ ಒಮ್ಮೆ ವಿಧಾನಸಭೆ ಪ್ರವೇಶಕ್ಕೆ ಪ್ರಯತ್ನಿಸಿದ್ದರಾದರೂ, ವಿಫಲವಾಗಿದ್ದರು. ಬಳಿಕ ಕಾಂಗ್ರೆಸ್ ಪಕ್ಷದ ಟಿಕೆಟ್ಗಾಗಿ ಹಲವು ಬಾರಿ ಪ್ರಯತ್ನ ನಡೆಸಿ ಸುಸ್ತಾಗಿದ್ದ ದೇವೇಂದ್ರಪ್ಪರಿಗೆ 2008ರಲ್ಲಿ ಆಪರೇಷನ್ ಕಮಲದ ಮೂಲಕ ಎಸ್.ವಿ.ರಾಮಚಂದ್ರಪ್ಪ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಇವರ ತೆರವಿನಿಂದಾಗಿ 2010ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿ 27 ಸಾವಿರಕ್ಕೂ ಹೆಚ್ಚು ಮತಗಳನ್ನು ಗಳಿಸಿ, ಪರಾಭವಗೊಂಡಿದ್ದರು.
ಮರಳಿ ಯತ್ನವ ಮಾಡು ಎಂಬ ಮಾತಿನಂತೆ 2013ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಪುನಃ ಟಿಕೆಟ್ ಕೇಳಿದ್ದರು. ಆಗ ಬಿಜೆಪಿಯಲ್ಲಿದ್ದ ಎಚ್.ಪಿ.ರಾಜೇಶ್, ಕಾಂಗ್ರೆಸ್ ಸೇರಿದ್ದರಿಂದ ಕಾಂಗ್ರೆಸ್ ರಾಜ್ಯ ಮುಖಂಡರು ಆಗ ಟಿಕೆಟ್ ಆಕಾಂಕ್ಷಿಯಾಗಿದ್ದ ದೇವೇಂದ್ರಪ್ಪ ಬದಲಿಗೆ ರಾಜೇಶ್ ಅವರಿಗೆ ಟಿಕೆಟ್ ನೀಡಿದ್ದರು. ಹೀಗೆ ಟಿಕೆಟ್ ಕೇಳಿದ ಪ್ರತಿಬಾರಿಯೂ ನಿರ್ಲಕ್ಷ್ಯ ತೋರಿದ ರಾಜ್ಯ ಮುಖಂಡರ ನಿರ್ಣಯಕ್ಕೆ ಬೇಸತ್ತಿದ್ದ ದೇವೇಂದ್ರಪ್ಪ, ಶಾಸಕ ಶ್ರೀರಾಮುಲು ರಾಜೀನಾಮೆಯಿಂದಾಗಿ ತೆರವಾಗಿದ್ದ ಬಳ್ಳಾರಿ ಲೋಕಸಭೆ ಕ್ಷೇತ್ರದ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಪುನಃ ಕಾಂಗ್ರೆಸ್ ಪಕ್ಷದಿಮದ ಟಿಕೆಟ್ ಕೇಳಿದ್ದರು. ಆದರೆ ಅವರಿಗೆ ನಿರಾಸೆ ಕಾದಿತ್ತು. ಕಾಂಗ್ರೆಸ್ ವಿ.ಎಸ್.ಉಗ್ರಪ್ಪರನ್ನು ಕರೆತಂದು ನಿಲ್ಲಿಸಿ ಗೆಲ್ಲಿಸಿತು. ಅದಾದ ಬಳಿಕ 2019ರ ಲೋಕಸಭೆ ಚುನಾವಣೆಯಲ್ಲಿ ದೇವೇಂದ್ರಪ್ಪ ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಲು ಪುನಃ ಕಾಂಗ್ರೆಟ್ ಟಿಕೆಟ್ ಕೇಳಿದರೂ, ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಮನವಿ ಮಾಡಿದರೂ ಟಿಕೆಟ್ ನೀಡಲಿಲ್ಲ. ಆಗಲೂ ಹಾಲಿ ಸಂಸದ ಉಗ್ರಪ್ಪರನ್ನೇ ಕಣಕ್ಕಿಳಿಸಿತು.
ಇದರಿಂದ ಬೇಸತ್ತಿದ್ದ ದೇವೇಂದ್ರಪ್ಪ, ಬಿಜೆಪಿ ಬಾಗಿಲು ತಟ್ಟಿದರು. ಹೊಸ ಮುಖದ ಹುಡುಕಾಟದಲ್ಲಿದ್ದ ಬಿಜೆಪಿ ದೇವೇಂದ್ರಪ್ಪರನ್ನು ಪಕ್ಷಕ್ಕೆ ಸೇರಿಸಿಕೊಂಡು ಕಣಕ್ಕಿಳಿಸಲು ತಿರ್ಮಾನಿಸಿತು. ದೇವೇಂದ್ರಪ್ಪ ಬೆನ್ನಿಗೆ ನಿಂತ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ಶ್ರೀರಾಮುಲು ಟಕೆಟ್ ಕೊಡಿಸುವುದರ ಜತೆಗೆ ಚುನಾವಣೆಯ ಸಂಪೂರ್ಣ ಜವಾಬ್ದಾರಿ ಹೊತ್ತು ಕ್ಷೇತ್ರಾದ್ಯಂತ ಪ್ರಚಾರ ಕೈಗೊಂಡರು. ಪರಿಣಾಮ ಮೊದಲ ಯತ್ನದಲ್ಲೇ ದೇವೇಂದ್ರಪ್ಪ 55,707 ಮತಗಳ ಅಂತರದಲ್ಲಿ ಗೆದ್ದು ಲೋಕಸಭೆ ಪ್ರವೇಶಿಸಿದ್ದಾರೆ.
ದೇವೇಂದ್ರಪ್ಪ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಾಗ ಪ್ರಚಾರಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಎಲ್ಲಾ ನಾಯಕರು ದೇವೇಂದ್ರಪ್ಪ ಹೆಚ್ಚು ಓದಿಲ್ಲ, ಲೋಕಸಭೆಗೆ ಹೋಗಿ ಏನು ಮಾತಾಡುತ್ತಾರೆ? ಎಂದೆಲ್ಲಾ ಟೀಕಿಸಿದ್ದರು. ಆದರೆ, ಪ್ರತಿಪಕ್ಷ ಮುಖಂಡರ ಈ ಎಲ್ಲ ಆರೋಪಗಳಿಗೆ, ಹಳ್ಳಿಸೊಗಡಿನ ದೇವೇಂದ್ರಪ್ಪ ತನ್ನದೇ ಧಾಟಿಯಲ್ಲಿ ಪ್ರತ್ಯುತ್ತರ ನೀಡಿದರು. ಜತೆಗೆ ಬಿಜೆಪಿ ನಾಯಕರು ದೇವೇಂದ್ರಪ್ಪ ಪರ ಪ್ರಚಾರ ಮಾಡಿದ್ದು ಜಿಲ್ಲೆಯ ಮತದಾರರರನ್ನು ಸೆಳೆಯಿತು. ಇದೇ ಕಾರಣಕ್ಕೆ ಕೇವಲ 7 ತಿಂಗಳ ಹಿಂದೆ 2.43 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿದ್ದ ಕಾಂಗ್ರೆಸ್‌ನ ಉಗ್ರಪ್ಪರನ್ನು ಸಾರ್ವತ್ರಿಕ ಚುನಾವಣೆಯಲ್ಲಿ ಸೋಲಿಸಿ, ಬಿಜೆಪಿಯ ವೈ.ದೇವೇಂದ್ರಪ್ಪರನ್ನು ಗೆಲ್ಲಿಸಿ ಸಂಸತ್‌ಗೆ ಕಳುಹಿಸಿಕೊಟ್ಟಿದ್ದಾರೆ. ಪಕ್ಷಕ್ಕಾಗಿ ದುಡಿದು ಚುನಾವಣೆಗೆ ಸ್ಪರ್ಧಿಸುವ ಇಂಗಿತದಿಂದ ಪದೇ ಪದೇ ಟಿಕೆಟ್ ಕೇಳಿದ್ದ ದೇವೇಂದ್ರಪ್ಪಕ್ಕೆ ಕಾಂಗ್ರೆಸ್ ನಿರಾಸೆ ಮೂಡಿಸುತ್ತಿತ್ತು. ಆದರೆ ಬಿಜೆಪಿ ಇದರ ಲಾಭ ಪಡೆಯಿತು. ಪಕ್ಷಕ್ಕೆ ಆಗಮಿಸುತ್ತಿದ್ದಂತೆ ದೇವೇಂದ್ರಪ್ಪ ಅವರಿಗೆ ಟಿಕೆಟ್ ನೀಡಿ ರಾಜಕೀಯ ತಂತ್ರಗಾರಿಕೆ ಮೂಲಕ ಅವರನ್ನು ಗೆಲ್ಲಿಸುವಲ್ಲೂ ಯಶಸ್ವಿಯಾಗಿದೆ. ಈ ಮೂಲಕ ವಿಧಾನಸಭೆ ಅಥವಾ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಬೇಕೆಂಬ ದೇವೇಂದ್ರಪ್ಪ ಆಸೆ ಕೊನೆಗೂ ಈಡೇರಿದಂತಾಗಿದೆ. ಬಿಜೆಪಿ ಮತ್ತೂಮ್ಮೆ ಜಿಲ್ಲೆಯಲ್ಲಿ ಅಧಿಪತ್ಯ ಸಾಧಿಸುವಲ್ಲೂ ಗೆದ್ದಿದೆ.