ಬಳ್ಳಾರಿ: ಲೋಕಸಭೆ ಸಾರ್ವತ್ರಿಕ ಚುನಾವಣೆ ಅಬ್ಬರ ಮುಗಿದು ಬರೋಬ್ಬರಿ ತಿಂಗಳ ಬಳಿಕ ಮೇ 23 ರಂದು ಫಲಿತಾಂಶ ಹೊರಬೀಳಲಿದ್ದು, ಇದಕ್ಕಾಗಿ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರ ಕಾತುರ ಹೆಚ್ಚುತ್ತಿದೆ. ಒಂದೆಡೆ ಮತಗಳಿಕೆ ಲೆಕ್ಕಾಚಾರ ನಡೆದಿದ್ದರೆ ಮತ್ತೂಂದೆಡೆ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರಲ್ಲಿ ಬೆಟ್ಟಿಂಗ್ ಸದ್ದಿಲ್ಲದೇ ನಡೆಯುತ್ತಿದೆ. ಅಂತರ ಕಡಿಮೆಯಾದರೂ ಗೆಲುವು ನಮ್ಮದೇ ಎಂದು ಕಾಂಗ್ರೆಸ್‌ನವರು ಬೀಗುತ್ತಿದ್ದರೆ, ಅಲ್ಪ ಮತಗಳ ಅಂತರದಿಂದಾದರೂ ಗೆದ್ದೇ ಗೆಲ್ಲುತ್ತೇವೆ ಎಂಬ ವಿಶ್ವಾಸ ಬಿಜೆಪಿ ಕಾರ್ಯಕರ್ತರದ್ದಾಗಿದೆ. ಗೆಲುವಿನ ನಿರೀಕ್ಷೆಯಲ್ಲಿರುವ ಉಭಯ ಪಕ್ಷಗಳ ಕಾರ್ಯಕರ್ತರು ಬಾಜಿ ಕಟ್ಟುವಲ್ಲಿ ಮಾತ್ರ ಹಿಂದೆ ಬಿದ್ದಿಲ್ಲ.
ಬಳ್ಳಾರಿ ಮೀಸಲು ಲೋಕಸಭೆ ಕ್ಷೇತ್ರದ ಕಣದಲ್ಲಿ ಒಟ್ಟು 11 ಜನ ಸ್ಪರ್ಧಿಸಿದ್ದು, ಕಾಂಗ್ರೆಸ್ ಪಕ್ಷದ ಹಾಲಿ ಸಂಸದ ವಿ.ಎಸ್.ಉಗ್ರಪ್ಪ, ಬಿಜೆಪಿಯ ವೈ.ದೇವೇಂದ್ರಪ್ಪ000 ನಡುವೆಯೇ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಮತದಾನ ಪ್ರಕ್ರಿಯೆಯೂ ಬಿರುಸಿನಿಂದ ನಡೆದಿದ್ದು, ಮತ ಎಣಿಕೆಗೆ ಕೇವಲ ಐದು ದಿನಗಳು ಮಾತ್ರ ಬಾಕಿ ಉಳಿದಿವೆ. 2004 ಮತ್ತು 2009ರ ಬಳ್ಳಾರಿ ಲೋಕಸಭೆ ಫಲಿತಾಂಶದಷ್ಟೇ 2019ರ ಫಲಿತಾಂಶವೂ ಕುತೂಹಲ ಮೂಡಿಸಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಮಧ್ಯೆ ಪೈಪೋಟಿ ಇರುವುದರಿಂದ ಎರಡೂ ಪಕ್ಷದ ಕಾರ್ಯಕರ್ತರು ಸದ್ದಿಲ್ಲದೇ ತಮ್ಮ ಅಭ್ಯರ್ಥಿ ಪರ ಬಾಜಿ ಕಟ್ಟುತ್ತಿದ್ದಾರೆ. ಲಕ್ಷಾಂತರ ರೂ. ಬೆಟ್ಟಿಂಗ್ ಕಟ್ಟುತ್ತಿರುವ ಕಾರ್ಯಕರ್ತರು ಮೊಬೈಲ್ಗಳಲ್ಲೇ ಡೀಲ್ ಮಾಡಿಕೊಳ್ಳುತ್ತಿದ್ದು, ಬೆಟ್ಟಿಂಗ್ ದಂಧೆಗೆ ಹೈಟೆಕ್ ಸ್ಪರ್ಶ ನೀಡಿದ್ದಾರೆ.
ಕುತೂಹಲ ಮೂಡಿಸಿದ್ದ ಫಲಿತಾಂಶ; ಬಳ್ಳಾರಿ ಜಿಲ್ಲೆ 1952 ರಿಂದಲೂ ಕಾಂಗ್ರೆಸ್ ಭದ್ರಕೋಟೆ. 1952 ರಿಂದ 1999ರ ಲೋಕಸಭೆ ಸಾರ್ವತ್ರಿಕ ಚುನಾವಣೆ, 2000 ಉಪ ಚುನಾವಣೆವರೆಗೆ ಸತತ 14 ಬಾರಿ ಜಯಗಳಿಸಿದ್ದ ಕಾಂಗ್ರೆಸ್ ನಂತರ 14 ವರ್ಷಗಳ ಕಾಲ ಜಿಲ್ಲೆಯಲ್ಲಿ ವನವಾಸ ಆರಂಭಿಸಿತು. 1999ರಲ್ಲಿ ಬಳ್ಳಾರಿಯಿಂದ ಸ್ಪರ್ಧಿಸಿದ್ದ ಸೋನಿಯಾಗಾಂಧಿ-ಸುಷ್ಮಾಸ್ವರಾಜ್ ನಡುವೆ ನಡೆದ ಹೈವೋಲ್ಟೇಜ್ ಚುನಾವಣೆಯಿಂದಾಗಿ ಜಿಲ್ಲೆಯಲ್ಲಿನ ಕಾಂಗ್ರೆಸ್ ಭದ್ರಕೋಟೆ ಅಲುಗಾಡಿತ್ತು. ಚುನಾವಣೆಯಲ್ಲಿ ನಿರೀಕ್ಷೆಯಂತೆ ಸೋನಿಯಾಗಾಂಧಿ ಜಯಗಳಿಸಿದ್ದರೂ, ಜಿಲ್ಲೆಯಲ್ಲಿ ಬಿಜೆಪಿ ನೆಲೆಯೂರಲು ಕಾರಣವಾಯಿತು. ಅಲ್ಲದೇ, 2004ರ ಲೋಕಸಭೆ ಚುನಾವಣೆಯಲ್ಲೂ ಬಳ್ಳಾರಿಯಿಂದ ಕಾಂಗ್ರೆಸ್ ಗೆಲ್ಲಲಿದೆ ಎಂಬ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಮುಖಂಡರು, ರಾಜಕೀಯ ಮಂದಿಗೆ ಫಲಿತಾಂಶ ಶಾಕ್ ನೀಡಿತು. ಮೊದಲ ಬಾರಿಗೆ ಜಯಗಳಿಸುವ ಮೂಲಕ ಕಾಂಗ್ರೆಸ್ ಗೆಲುವಿನ ನಾಗಾಲೋಟಕ್ಕೆ ಬಿಜೆಪಿ ಬ್ರೇಕ್ ಹಾಕಿತು. ಕಾಂಗ್ರೆಸ್ ನೆಚ್ಚಿಕೊಂಡು ಬೆಟ್ಟಿಂಗ್, ಬಾಜಿ ಕಟ್ಟಿದ್ದವರು ಹಣ ಕಳೆದುಕೊಂಡು ‘ಕೈ’ ಸುಟ್ಟುಕೊಂಡಿದ್ದರು.
ಗೆದ್ದು ಸೋತಿದ್ದ ಎನ್‌ವೈಎಚ್; 2004ರಲ್ಲಿ ಮೊದಲ ಬಾರಿಗೆ ಜಿಲ್ಲೆಯಲ್ಲಿ ಜಯಗಳಿಸಿದ್ದ ಕಮಲ ಪಕ್ಷಕ್ಕೆ 2009ರ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಮತದಾರರು ಶಾಕ್ ನೀಡಿದರು. ಆಗ ಜಿಲ್ಲೆಯಲ್ಲಿ ಬಿಜೆಪಿಯ 8 ಶಾಸಕರು, ಬಳ್ಳಾರಿ ಪಾಲಿಕೆ, ಸ್ಥಳೀಯ ಸಂಸ್ಥೆಗಳೆಲ್ಲವೂ ಬಿಜೆಪಿ ತೆಕ್ಕೆಯಲ್ಲಿದ್ದರೂ, ಲೋಕಸಭೆ ಚುನಾವಣೆ ಫಲಿತಾಂಶ ಮಾತ್ರ ತೀವ್ರ ಕುತೂಹಲದೊಂದಿಗೆ ಅಚ್ಚರಿಯನ್ನೂ ಮೂಡಿಸಿತ್ತು. ಅಂದಿನ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಪರವಾಗಿ ಸಾಕಷ್ಟು ಜನರು ಲಕ್ಷಾಂತರ ರೂ. ಬೆಟ್ಟಿಂಗ್ ಕಟ್ಟಿದ್ದರು. ಒಟ್ಟು 18 ಸುತ್ತುಗಳ ಎಣಿಕೆ ಕಾರ್ಯದಲ್ಲಿ 16ನೇ ಸುತ್ತಿನಲ್ಲೂ ಕಾಂಗ್ರೆಸ್‌ನ ಎನ್.ವೈ. ಹನುಮಂತಪ್ಪ ಮುನ್ನಡೆ ಕಾಯ್ದುಕೊಂಡಿದ್ದರು. ಇದು ಎನ್.ವೈ.ಹನುಮಂತಪ್ಪ ಗೆಲುವು ಖಚಿತ ಎನ್ನುವಷ್ಟರಲ್ಲೇ ಕೊನೆಯ ಎರಡು ಸುತ್ತಿನಲ್ಲಿ ಬಿಜೆಪಿಯ ಜೆ.ಶಾಂತಾ 2043 ಮತಗಳ ಅಂತರದಿಂದ ಜಯಗಳಿಸುವ ಮೂಲಕ ಅಚ್ಚರಿ ಮೂಡಿಸಿದರು.
ಲಾಭ-ನಷ್ಟದ ನಿರ್ಣಯ ಮೇ 23ಕ್ಕೆ 2014ರ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಪುನಃ ಸ್ಪರ್ಧಿಸಿದ್ದ ಎನ್.ವೈ.ಹನುಮಂತಪ್ಪ ವಿರುದ್ಧ ಬಿಜೆಪಿಯ ಬಿ.ಶ್ರೀರಾಮುಲು ಅನಾಯಾಸವಾಗಿ ಜಯಗಳಿಸಿದ್ದರಾದರೂ, 2019ರ ಲೋಕಸಭೆ ಚುನಾವಣೆಯ ಫಲಿತಾಂಶ ಕುತೂಹಲ ಮೂಡಿಸಿದೆ. ಇತ್ತೀಚೆಗಷ್ಟೇ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ವಿ.ಎಸ್.ಉಗ್ರಪ್ಪ 2.43 ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಇದೀಗ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಅಷ್ಟು ಪ್ರಮಾಣದಲ್ಲಿ ಅಂತರ ಲಭಿಸದಿದ್ದರೂ, ಲಕ್ಷ ಅಥವಾ 50 ಸಾವಿರ ಮತಗಳ ಅಂತರದಲ್ಲಾದರೂ ಗೆಲುವು ಖಚಿತ ಎಂದು ಕಾಂಗ್ರೆಸ್‌ನವರು ಬೀಗುತ್ತಿದ್ದಾರೆ. ಅದೇ ರೀತಿ ಬಿಜೆಪಿಯ ವೈ.ದೇವೇಂದ್ರಪ್ಪ, ಕನಿಷ್ಠ 10 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲ್ಲೋದು ಖಚಿತ ಎಂಬ ವಿಶ್ವಾಸ ಬಿಜೆಪಿ ಕಾರ್ಯಕರ್ತರದ್ದಾಗಿದೆ. ಗೆಲುವಿನ ವಿಶ್ವಾಸದಲ್ಲಿರುವ ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ಬೆಟ್ಟಿಂಗ್ ನಡೆಯುತ್ತಿದೆ. ಬೆಟ್ಟಿಂಗ್ ಕಟ್ಟುವಲ್ಲಿ ‘ಕೈ’ನವರೇ ಒಂದಷ್ಟು ಮೇಲುಗೈ ಸಾಧಿಸಿದ್ದಾರೆ ಎನ್ನಲಾಗುತ್ತಿದ್ದು, ಸೋಲು-ಗೆಲುವಿನ ಲಾಭ-ನಷ್ಟಗಳ ಬಗ್ಗೆ ಮೇ 23ರ ಫಲಿತಾಂಶದಿಂದ ಸ್ಪಷ್ಟವಾಗಲಿದೆ.
ವೆಂಕೋಬಿ ಸಂಗನಕಲ್ಲು