Advertisement

ಕೈ ಹಿಡಿದ ಕೌಲ್‌ಬಜಾರ್‌ ಮತಗಳು

12:06 PM Apr 28, 2019 | Naveen |

ಬಳ್ಳಾರಿ: ಲೋಕಸಭೆ ಸಾರ್ವತ್ರಿಕ ಚುನಾವಣೆ ಮುಗಿದಿದ್ದು, ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಸೋಲು, ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗೆ ಕಡಿಮೆ ಅಂತರದ ಗೆಲುವು ನೀಡಿದ್ದ ಈ ಕ್ಷೇತ್ರದಲ್ಲಿ ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ 30 ಸಾವಿರ ಮತಗಳ ಲೀಡ್‌ ಲಭಿಸಿತ್ತು. ಇದೀಗ ಸಾರ್ವತ್ರಿಕ ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಯಾರ ಬೆನ್ನಿಗೆ ನಿಂತಿದ್ದಾರೆ. ಯಾರ ಗೆಲುವಿಗೆ ಕಾರಣರಾಗಲಿದ್ದಾರೆ ಎಂಬ ಸೋಲು, ಗೆಲುವಿನ ಲೆಕ್ಕಾಚಾರಗಳು ಶುರುವಾಗಿವೆ.

Advertisement

ದಶಕದ ಹಿಂದೆ 2008ರಲ್ಲಿ ಕ್ಷೇತ್ರ ಮರುವಿಂಗಡಣೆಯಾದಾಗ ಬಳ್ಳಾರಿ ಮಹಾನಗರ ಪಾಲಿಕೆಯ ಕೌಲ್ಬಜಾರ್‌ ಭಾಗದ 9 ವಾರ್ಡ್‌ ಸೇರಿಸಿಕೊಂಡು ಬಳ್ಳಾರಿ ಗ್ರಾಮೀಣ ವಿಧಾನಸಭಾ ಕ್ಷೇತ್ರವನ್ನು ಹೊಸದಾಗಿ ರಚಿಸಲಾಯಿತು. ಆರಂಭದಿಂದಲೂ ಈ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದ ಮೊಳಕಾಲ್ಮುರು ಶಾಸಕ ಬಿ.ಶ್ರೀರಾಮುಲು ಒಮ್ಮೆ ಬಿಜೆಪಿ, ಎರಡು ಬಾರಿ ಬಿಎಸ್‌ಆರ್‌ ಪಕ್ಷದಿಂದ ಜಯ ಗಳಿಸುವ ಮೂಲಕ ತನ್ನ ತವರು ಕ್ಷೇತ್ರವನ್ನಾಗಿ ಪರಿವರ್ತಿಸಿಕೊಂಡಿದ್ದರು. ಆದರೆ, 2014ರಲ್ಲಿ ಗ್ರಾಮೀಣ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ ಶ್ರೀರಾಮುಲು ಲೋಕಸಭೆಗೆ ಆಯ್ಕೆಯಾದರು. ಬಳಿಕ ಗ್ರಾಮೀಣ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿ ಭದ್ರಕೋಟೆಯನ್ನು ಛಿದ್ರಗೊಳಿಸಿದ ಕಾಂಗ್ರೆಸ್‌ ಪಕ್ಷ 33 ಸಾವಿರಕ್ಕೂ ಹೆಚ್ಚು ಅಂತರದಿಂದ ಜಯಗಳಿಸಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಾವುಟ ಹಾರಿಸಿತು. ಇನ್ನು ಮುಂದೆ ಕ್ಷೇತ್ರದಲ್ಲಿ ಈ ಪರ್ವ ಹೀಗೆ ಮುಂದುವರಿಯಲಿದೆ ಎಂದುಕೊಂಡಿದ್ದ ಕಾಂಗ್ರೆಸ್‌ ಪಕ್ಷಕ್ಕೆ 2018ರ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ಶಾಕ್‌ ನೀಡಿದರು. ಶೇ.74.25 ರಷ್ಟು ಮತದಾನವಾಗಿದ್ದರೂ, ಕ್ಷೇತ್ರದ ಗ್ರಾಮೀಣ ಭಾಗವೆಲ್ಲ ಬಿಜೆಪಿಯನ್ನು ಬೆಂಬಲಿಸಿದರೆ, ಕೌಲ್ಬಜಾರ್‌ ಪ್ರದೇಶದ ಮತದಾರರು ಕಾಂಗ್ರೆಸ್‌ ‘ಕೈ’ ಹಿಡಿದಿದ್ದಾರೆ ಎಂಬುದು ಫಲಿತಾಂಶದಲ್ಲಿ ಸ್ಪಷ್ಟವಾಯಿತು. ಪರಿಣಾಮ ಕಾಂಗ್ರೆಸ್‌ ಅಭ್ಯರ್ಥಿ ನಾಗೇಂದ್ರ 2679 ಮತಗಳ ಅಂತರದಿಂದ ಪ್ರಯಾಸದ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾದರು. ಹೀಗೆ ಒಂದು ಭಾಗ ಕಾಂಗ್ರೆಸ್‌ ಮತ್ತೂಂದು ಭಾಗದಲ್ಲಿ ಬಿಜೆಪಿ ಪಕ್ಷವನ್ನು ಬೆಂಬಲಿಸುವ ಗ್ರಾಮೀಣ ಕ್ಷೇತ್ರದ ಮತದಾರರು ಸಾರ್ವತ್ರಿಕ ಚುನಾವಣೆಯಲ್ಲಿ ಯಾರಿಗೆ ಬೆಂಬಲಿಸಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ಕಳೆದ 2018ರಲ್ಲಿ ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕ್ಷೇತ್ರದ ಒಟ್ಟು ಮತಗಳ ಪೈಕಿ 1,38,835 ಮತದಾರರು ಹಕ್ಕು ಚಲಾಯಿಸಿದ್ದು, ಶೇ.63.34 ರಷ್ಟು ಮತದಾನವಾಗಿತ್ತು. ಇದರಲ್ಲಿ ಅಂದಿನ ಬಿಜೆಪಿ ಅಭ್ಯರ್ಥಿ ಜೆ.ಶಾಂತಾ ಅವರಿಗಿಂತ ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪರಿಗೆ 30262 ಮತಗಳು ಲೀಡ್‌ ಲಭಿಸಿತ್ತು. ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ 1,09639 ಪುರುಷರು, 1,14,330 ಮಹಿಳೆಯರು, 42 ಇತರೆ ಸೇರಿ ಒಟ್ಟು 2,24,011 ಮತದಾರರಿದ್ದು, ಈ ಪೈಕಿ 79113 ಪುರುಷರು, 77963 ಮಹಿಳೆಯರು, 4 ಇತರೆ ಸೇರಿ ಒಟ್ಟು 1,57,060 ಮತದಾರರು ಹಕ್ಕು ಚಲಾಯಿಸಿದ್ದು, ಶೇ.70.12 ರಷ್ಟು ಮತದಾನವಾಗಿದೆ. ಉಪಚುನಾವಣೆಗಿಂತ ಶೇ.7 ರಷ್ಟು ಮತದಾನ ಹೆಚ್ಚಳವಾಗಿದೆ. ಕಡಿಮೆ ಮತದಾನವಾದಷ್ಟು ಕಾಂಗ್ರೆಸ್‌ ಪಕ್ಷಕ್ಕೆ ವರದಾನವಾಗಲಿದೆ ಎನ್ನುವ ಕ್ಷೇತ್ರದಲ್ಲಿ ಶೇ.7 ರಷ್ಟು ಹೆಚ್ಚುವರಿ ಮತಗಳು ಯಾರ ಪಾಲಿಗೆ ವರದಾನವಾಗಲಿದೆ ಎಂಬುದು ರಾಜಕೀಯ ಮಂದಿಯ ಲೆಕ್ಕಾಚಾರವಾಗಿದೆ.

ಗ್ರಾಮೀಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೌಲ್ಬಜಾರ್‌ ಪ್ರದೇಶದಲ್ಲಿ ಮುಸ್ಲಿಂ, ಕ್ರಿಶ್ಚಿಯನ್‌, ದಲಿತ, ಕುರುಬ ಮತಗಳು ಪ್ರಮುಖವಾದರೆ, ಗ್ರಾಮೀಣ ಭಾಗದಲ್ಲಿ ವಾಲ್ಮೀಕಿ, ಲಿಂಗಾಯತ, ಇತರೆ ಮೇಲ್ವರ್ಗದ ಒಂದಷ್ಟು ಮತಗಳು ಪ್ರಮುಖವಾಗಿವೆ. ಕಳೆದ ವಿಧಾನಸಭೆ ಚುನಾವಣೆ, ಲೋಕಸಭೆ ಉಪ ಚುನಾವಣೆಯಂತೆ ಸಾರ್ವತ್ರಿಕ ಚುನಾವಣೆಯಲ್ಲೂ ಮುಸ್ಲಿಂ, ಕ್ರಿಶ್ಚಿಯನ್‌, ದಲಿತ, ಕುರುಬ ಮತಗಳು ಕಾಂಗ್ರೆಸ್‌ ‘ಕೈ’ ಹಿಡಿಯುವ ಸಾಧ್ಯತೆಯಿದೆ. ಉಪಚುನಾವಣೆಯಲ್ಲಿ ಲಿಂಗಾಯತ ಮತಗಳು ಸಹ ಕಾಂಗ್ರೆಸ್‌ ಬೆಂಬಲಕ್ಕೆ ನಿಂತಿದ್ದು, ವಾಲ್ಮೀಕಿ ಸಮುದಾಯ ಬಹುಪಾಲು ಮತ್ತು ಇತರೆ ಮೇಲ್ವರ್ಗದ ಬಹುಪಾಲು ಮತಗಳು ಬಿಜೆಪಿ ಪಾಲಾಗಲಿವೆ.

ಬಳ್ಳಾರಿ ಗ್ರಾಮೀಣ ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸುಮಾರು 20 ರಿಂದ 25 ಸಾವಿರ ಲೀಡ್‌ ದೊರೆಯಲಿದೆ. ಕ್ಷೇತ್ರದ ಕೌಲ್ಬಜಾರ್‌ ಭಾಗದ ಮತಗಳು ಕಾಂಗ್ರೆಸ್‌ಗೆ ಪ್ಲಸ್‌ ಆಗಲಿವೆ. ಇನ್ನು ರೂಪನಗುಡಿ, ಸಂಗನಕಲ್ಲು ಹೋಬಳಿಯಲ್ಲೂ ಜಿಪಂ ಸದಸ್ಯರು ಕಾಂಗ್ರೆಸ್‌ ಪಕ್ಷದವರಾಗಿದ್ದು, ಅಲ್ಲೂ ಸಹ ಕಾಂಗ್ರೆಸ್‌ ಪಕ್ಷಕ್ಕೆ ಪೂರಕವಾಗಿ ಮತಗಳು ಲಭಿಸಲಿವೆ. ಜತೆಗೆ ಕ್ಷೇತ್ರದ ಹಾಲಿ ಶಾಸಕ ಬಿ.ನಾಗೇಂದ್ರ ಅವರು ಚುನಾವಣೆಯಲ್ಲಿ ಸಕ್ರಿಯವಾಗಿ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಂಡು ಕೆಲಸ ಮಾಡಿದ್ದಾರೆ. ಹಾಗಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತಗಳು ಲಭಿಸಲಿದ್ದು, ಶೇ.100 ರಷ್ಟು ಗೆಲುವು ಖಚಿತ.
•ಮಹ್ಮದ್‌ ರಫೀಕ್‌,
ಕಾಂಗ್ರೆಸ್‌ ಜಿಲ್ಲಾ ನಗರ ಅಧ್ಯಕ್ಷರು.

Advertisement

ಬಳ್ಳಾರಿ ಲೋಕಸಭೆ ಸಾರ್ವತ್ರಿಕ ಚುನಾವಣೆ ಸಂಬಂಧಿಸಿದಂತೆ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷಕ್ಕಿಂತ ಬಿಜೆಪಿಗೆ 10 ರಿಂದ 12 ಸಾವಿರ ಮತಗಳ ಲೀಡ್‌ ದೊರೆಯಲಿದೆ. ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತೀವ್ರ ಪೈಪೋಟಿ ನೀಡಲಾಗಿತ್ತು. ಆಗ ನಮಗೆ ಕೌಲ್ಬಜಾರ್‌ನಲ್ಲಿ ಬಿಜೆಪಿಗೆ ಮೈನಸ್‌ ಆಗಿತ್ತು. ಲೋಕಸಭೆ ಉಪಚುನಾವಣೆಯಲ್ಲಿ ಜಿಲ್ಲೆಯಾದ್ಯಂತ ಬದಲಾವಣೆಯಾದ ಹಿನ್ನೆಲೆಯಲ್ಲಿ ಅದನ್ನು ಗಣನೆಗೆ ತೆಗೆದುಕೊಳ್ಳುವ ಅಗತ್ಯವಿಲ್ಲ. ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ಕಾರ್ಯಕರ್ತರು ಸಾಕಷ್ಟು ಶ್ರಮಿಸಿದ್ದು, ಬಿಜೆಪಿಗೆ ಲೀಡ್‌ ದೊರೆಯಲಿದೆ. ಬಿಜೆಪಿ ಅಭ್ಯರ್ಥಿ ಗೆಲವು ಖಚಿತ.
ಚನ್ನಬಸವನಗೌಡ ಪಾಟೀಲ,
 ಬಿಜೆಪಿ ಜಿಲ್ಲಾಧ್ಯಕ್ಷರು.

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next