ಬಳ್ಳಾರಿ: ಬಳ್ಳಾರಿ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಳೆದ ಎರಡು ಚುನಾವಣೆಯಲ್ಲಿ ಬಿಜಿಯಾಗಿದ್ದ ಕಾಂಗ್ರೆಸ್-ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಮಂಗಳವಾರ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಬುಧವಾರ ಒಂದಷ್ಟು ರಿಲ್ಯಾಕ್ಸ್ ಮೂಡ್‌ಗೆ ತೆರಳಿದ್ದು, ಕುಟುಂಬ, ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ, ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಕಳೆದ ಎರಡು ತಿಂಗಳಿಂದ ಬಳ್ಳಾರಿಯ ಬಿರು ಬಿಸಲನ್ನು ಲೆಕ್ಕಿಸದೆ ಚುನಾವಣೆ ಕಣದಲ್ಲಿರುವ ಮೂಲಕ ಕ್ಷೇತ್ರಾದ್ಯಂತ ಸಂಚರಿಸಿ ಮತದಾರರನ್ನು ಸೆಳೆಯುವಲ್ಲಿ ನಿರತರಾಗಿದ್ದರು. ಚುನಾವಣೆಯಲ್ಲಿ ರಾಜ್ಯ, ರಾಷ್ಟ್ರ ಮಟ್ಟದ ನಾಯಕರು ಆಗಮಿಸಿದ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ಅಭ್ಯರ್ಥಿಗಳೆ ಲೋಕಸಭೆ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳಲ್ಲಿ ಬಿಡುವಿಲ್ಲದೆ ಸಂಚರಿಸಿ ಪ್ರಚಾರ ನಡೆಸುವ ಮೂಲಕ ಮತಯಾಚಿಸಿದ್ದರು. ಏ.23 ರಂದು ಮತದಾನ ಪ್ರಕ್ರಿಯೆ ನಡೆದ ಹಿನ್ನೆಲೆಯಲ್ಲಿ ಚುನಾವಣೆ ಚಟುವಟಿಕೆಗಳಿಗೆ ಒಂದಷ್ಟು ಬ್ರೇಕ್ ಬಿದ್ದಿದ್ದು, ಇದರಿಂದ ಚುನಾವಣಾ ಗುಂಗಿನಿಂದ ಹೊರಬಂದಿದ್ದ ಅಭ್ಯರ್ಥಿಗಳು ಒಂದಷ್ಟು ಕುಟುಂಬ ಮತ್ತು ಮನೆಗೆ ಬಂದ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರೊಂದಿಗೆ ಕಾಲ ಕಳೆದರು.
ಚುನಾವಣೆ ಹಿನ್ನೆಲೆಯಲ್ಲಿ ಪ್ರತಿದಿನ ಬೆಳಗ್ಗೆ 8 ಗಂಟೆಗೆ ಮನೆಯಿಂದ ಹೊರಟು ಪ್ರಚಾರ ಮಾಡುತ್ತಿದ್ದ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪ, ಬುಧವಾರ ಮಾತ್ರ ತುಂಬ ನಿರಾಳತೆಯಿಂದ ಇದ್ದರು. ಪತ್ನಿ, ಪುತ್ರ, ಸೊಸೆಯೊಂದಿಗೆ ಕಾಲಕಳೆದರು. ಎಂದಿನಂತೆ ಸ್ನಾನ, ಪೂಜೆ ಮುಗಿಸಿ, ಕೆಲಹೊತ್ತು ಪತ್ರಿಕೆಗಳ ಮೇಲೆ ಕಣ್ಣಾಡಿಸಿದರು. ಬಳಿಕ ಮನೆಗೆ ಆಗಮಿಸಿದ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರೊಂದಿಗೆ ಕಾಲ ಕಳೆದರು. ಚುನಾವಣೆಯ ಧಾವಂತದಲ್ಲಿ ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಹೆಚ್ಚು ಮಾತನಾಡಿಸಲು ಆಗಿರಲಿಲ್ಲ. ಮತದಾನ ಪ್ರಕ್ರಿಯೆ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಚುನಾವಣೆ ಕೆಲಸ ಕಾರ್ಯಗಳಿಗೆ ಒಂದಷ್ಟು ಬ್ರೇಕ್ ಬಿದ್ದಂತಾಗಿದ್ದು, ಈ ಹಿನ್ನೆಲೆಯಲ್ಲಿ ಮನೆಗೆ ಆಗಮಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರೊಂದಿಗೆ ಒಂದಷ್ಟು ಕಾಲ ಕಳೆಯುತ್ತಿದ್ದೇನೆ ಎಂದರು.
ಇನ್ನು ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಅವರು ಮೂಲತಃ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅರಸಿಕೆರೆ ನಿವಾಸಿಗಳಾಗಿದ್ದರೂ, ಇಲ್ಲಿನ ಬಸವೇಶ್ವರ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಎಂದಿನಂತೆ ಬುಧವಾರ ಬೆಳಗ್ಗೆ 5 ಗಂಟೆಗೆ ನಿದ್ದೆಯಿಂದ ಎದ್ದ ವೈ.ದೇವೇಂದ್ರಪ್ಪ ಕೆಲಹೊತ್ತು ಯೋಗಾಭ್ಯಾಸ, ವಾಯುವಿಹಾರ ಮಾಡಿದರು. ನಂತರ ಸ್ನಾನ ಮಾಡಿ ಮನೆಯಲ್ಲಿ ಪೂಜೆ ಮಾಡಿದರು. ಜತೆಗೆ ಬಳ್ಳಾರಿಯ ಕನಕದುರ್ಗಮ್ಮ ದೇವಸ್ಥಾನಕ್ಕೂ ಹೋಗಿ ದೇವಿಯ ದರುಶನ ಪಡೆದರು. ಅಲ್ಲಿಂದ ಸ್ನೇಹಿತರೊಂದಿಗೆ ಖಾಸಗಿ ಹೋಟೆಲ್ನಲ್ಲಿ ಬೆಳಗಿನ ಉಪಾಹಾರ ಸೇವಿಸಿ, ಪತ್ರಿಕೆಗಳ ಮೇಲೆ ಕಣ್ಣಾಡಿಸುವ ಮೂಲಕ ಚುನಾವಣೆ ಗುಂಗಿನಿಂದ ಹೊರಬಂದು ನಿರಾಳಭಾವದಿಂದ ಇದ್ದರು. ನಿವಾಸಕ್ಕೆ ಆಗಮಿಸಿದ ಪಕ್ಷದ ಕಾರ್ಯಕರ್ತರು, ಮುಖಂಡರೊಂದಿಗೆ ಏ.23ರಂದು ನಡೆದ ಮತದಾನದ ಕುರಿತು ಮಾಹಿತಿ ಪಡೆದರು. ನಾನು ಬಾಲ್ಯದಿಂದಲೇ ಬೆಳಗಿನ ಜಾವ 5 ಗಂಟೆಗೆ ನಿದ್ದೆಯಿಂದ ಏಳುವ ಅಭ್ಯಾಸವಿದೆ. ಚುನಾವಣಾ ದಿನಗಳಲ್ಲಿ ಮಧ್ಯರಾತ್ರಿ 2 ಗಂಟೆಗೆ ಮಲಗಿದರೂ, ಬೆಳಗ್ಗೆ 5ಕ್ಕೆ ಏಳುವ ಶಕ್ತಿ ದೇವರು ಕರುಣಿಸಿದ್ದಾನೆ. ಬೆಳಗಿನ ಜಾವವೇ ಯೋಗ, ವಾಯುವಿಹಾರ, ಸ್ನಾನ, ಪೂಜೆ ಮಾಡಿ, ಬೆಳಗ್ಗೆ 8-9 ಗಂಟೆಯೊಳಗೆ ಉಪಾಹಾರ ಸೇವಿಸುತ್ತೇನೆ. ನಾಳಿನ ಕೆಲಸಗಳಿಗೆ ಇಂದೇ ಯೋಜನೆ ರೂಪಿಸಿಕೊಂಡು ಅದರಂತೆ ಕೆಲಸ ಕಾರ್ಯಗಳು ಮಾಡುತ್ತೇನೆ. ಫಲಿತಾಂಶ ಹೊರ ಬೀಳಲು ಇನ್ನು ಒಂದು ತಿಂಗಳು ತಡವಾಗಲಿದ್ದು, ಈ ನಡುವೆ ಜನರ ನಡುವೆ ತೆರಳುತ್ತೇನೆ ಎಂದು ಪ್ರತಿಕ್ರಿಯಿಸಿದರು.
ಲೋಕಸಭೆ ಚುನಾವಣೆಯು ಜಾತ್ಯತೀತ ಸಿದ್ಧಾಂತವುಳ್ಳ ಕಾಂಗ್ರೆಸ್, ಮತೀಯವಾದ ಬಿಜೆಪಿ ನಡುವಿನ ಪೈಪೋಟಿಯಾಗಿದೆ. ಬಿಜೆಪಿಯವರು ಹಣವಂತರನ್ನು ಕಣಕ್ಕಿಳಿಸಿದ್ದು, ಜಿಲ್ಲೆಯ ಪ್ರಭುದ್ಧ ಮತದಾರರು, ಕಳೆದ ಐದು ತಿಂಗಳ ಅವಧಿಯಲ್ಲಿ ನಾನು ಮಾಡಿದ ಅಭಿವೃದ್ಧಿ ಕೆಲಸ, ಸಂಸತ್‌ನಲ್ಲಿ ರಾಜ್ಯ, ರಾಷ್ಟ್ರ, ಜಿಲ್ಲೆಯ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿದೇನೆ. ವಾಯ್ಸ ಆಫ್ ಬಳ್ಳಾರಿಯನ್ನಾಗಿ ಮಾಡಿದ್ದು, ಜಿಲ್ಲೆಯ ಜನರು ಇದನ್ನೆಲ್ಲ ಗಮನಿಸಿ ಚುನಾವಣೆಯಲ್ಲಿ ನನಗೆ ಮನ್ನಣೆ ನೀಡಲಿದ್ದಾರೆ. ಶೇ. ನೂರಕ್ಕೆ ನೂರರಷ್ಟು ಕಳೆದ ಉಪಚುನಾವಣೆಗಿಂತಲೂ ಹೆಚ್ಚು ಅಂತರದಿಂದ ಗೆಲುವು ಖಚಿತವಾಗಲಿದೆ.
•ವಿ.ಎಸ್.ಉಗ್ರಪ್ಪ,
ಕಾಂಗ್ರೆಸ್ ಅಭ್ಯರ್ಥಿ
ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದಾದ್ಯಂತ ಸಂಚರಿಸಿದ್ದೇನೆ. ಎಲ್ಲೆಡೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರಚಾರಕ್ಕೆಂದು ಹೋದ ಎಲ್ಲ ಕಡೆಯೂ ಯಜಮಾನ ನೀನು ಒಂದು ಲಕ್ಷಕ್ಕೂ ಹೆಚ್ಚು ಅಂತರದಿಂದ ಗೆಲ್ಲುತ್ತೀಯಾ ಎಂದು ಭರವಸೆ ನೀಡಿದ್ದಾರೆ. ಮತದಾರರ ಮಾತುಗಳಿಂದ ನನಗೂ ಲಕ್ಷ ಮತಗಳ ಅಂತರದಿಂದ ಗೆಲ್ಲುವ ವಿಶ್ವಾಸವಿದೆ.
•ವೈ.ದೇವೇಂದ್ರಪ್ಪ,
ಬಿಜೆಪಿ ಅಭ್ಯರ್ಥಿ.
•ವೆಂಕೋಬಿ ಸಂಗನಕಲ್ಲು