Advertisement

ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ಗುರಿ

12:00 PM May 27, 2019 | Naveen |

ವೆಂಕೋಬಿ ಸಂಗನಕಲ್ಲು
ಬಳ್ಳಾರಿ:
ವಿಧಾನಸಭೆ ಪ್ರವೇಶಿಸಬೇಕೆಂಬ ಮಹದಾಸೆಯಿಂದ ಹಲವು ಬಾರಿ ಕಾಂಗ್ರೆಸ್‌ನಿಂದ ಟಿಕೆಟ್ ಕೇಳಿ ಸುಸ್ತಾಗಿದ್ದ ಹರಪನಹಳ್ಳಿಯ ವೈ.ದೇವೇಂದ್ರಪ್ಪ, ಕೊನೆಗೆ ಬಿಜೆಪಿ ಕದತಟ್ಟಿ ಟಿಕೆಟ್ ಪಡೆದು ಚುನಾವಣೆಯಲ್ಲಿ ಗೆಲ್ಲುವ ಮೂಲಕ ಮೊದಲ ಯತ್ನದಲ್ಲೇ ಸಂಸದರಾಗಿ ಆಯ್ಕೆಯಾಗಿದ್ದಾರೆ. ಉಪಚುನಾವಣೆಯಲ್ಲಿ ದಾಖಲೆ ಬರೆದಿದ್ದ ಮೈತ್ರಿ ಅಭ್ಯರ್ಥಿ ವಿ.ಎಸ್‌. ಉಗ್ರಪ್ಪರಿಗೆ ಈ ಚುನಾವಣೆಯಲ್ಲಿ ಸೋಲಿನ ರುಚಿ ತೋರಿಸಿ ಜಿಲ್ಲೆಯ ಲಕ್ಷಾಂತರ ಮತದಾರರ ಮನ ಗೆದ್ದಿದ್ದಾರೆ. ಮೊದಲ ಬಾರಿಗೆ ಸಂಸತ್‌ ಪ್ರವೇಶಿಸಿರುವ ಅವರು, ಮುಂದಿನ ಐದು ವರ್ಷಗಳಲ್ಲಿ ಜಿಲ್ಲೆಯ ಅಭಿವೃದ್ಧಿ ಬಗ್ಗೆ ತಮ್ಮ ಚಿಂತನೆಗಳ ಕುರಿತು ‘ಉದಯವಾಣಿ’ಯೊಂದಿಗೆ ಮಾತನಾಡಿದ್ದಾರೆ.

Advertisement

ಜಿಲ್ಲೆಯ ಅಭಿವೃದ್ಧಿಗೆ ನಿಮ್ಮ ಮೊದಲ ಆದ್ಯತೆ ಏನು?
ಜಿಲ್ಲೆಯ ಪ್ರತಿ ಗ್ರಾಮಗಳಿಗೆ ಸಮರ್ಪಕವಾಗಿ ಕುಡಿವ ನೀರು ಪೂರೈಸಲು ಕೆರೆಗಳಿಗೆ ನೀರು ತುಂಬಿಸುವುದೇ ಮೊದಲ ಆದ್ಯತೆಯಾಗಿದೆ. 1995-96ರಲ್ಲಿ ಬಳ್ಳಾರಿ ಜಿಲ್ಲಾ ಪರಿಷತ್‌ಗೆ ನಾನು ಉಪಾಧ್ಯಕ್ಷನಾಗಿದ್ದಾಗ ರಾಜ್ಯದಲ್ಲೇ ಬಳ್ಳಾರಿ ಜಿಲ್ಲೆ ಪ್ರಥಮ ಸ್ಥಾನದಲ್ಲಿತ್ತು. ಆಗ ಕೇಂದ್ರ ಸರ್ಕಾರ ಸನ್ಮಾನ ಮಾಡಿ ಪ್ರಶಸ್ತಿ ನೀಡಿತ್ತು. ಈಗಲೂ ಅದೇ ಗುರಿಯನ್ನು ಹೊಂದಿ ಕೆಲಸ ಮಾಡುವ ಮೂಲಕ ಜಿಲ್ಲೆಯನ್ನು ಪ್ರಗತಿಯತ್ತ ಕೊಂಡೊಯ್ಯುವ ಕೆಲಸ ಮಾಡುವೆ.

ನಂತರದ ಆದ್ಯತೆಗಳೇನು?
ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲೆಯ ಜನರೊಂದಿಗೆ ಚರ್ಚಿಸಿ, ಸಮಸ್ಯೆಗಳ ಪಟ್ಟಿ ಸಿದ್ಧಪಡಿಸಲಾಗುವುದು. ನಂತರ ಆದ್ಯತೆಯ ಮೇರೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು. ಇದರೊಂದಿಗೆ ತುಂಗಭದ್ರಾ ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳು ತೆಗೆದು, ರೈತರ ಬೆಳೆಗಳಿಗೆ ಸಮರ್ಪಕವಾಗಿ ನೀರು ಒದಗಿಸುವುದು. ಮೂಲ ಸೌಲಭ್ಯ ಕಲ್ಪಿಸಲು ಐದು ವರ್ಷದ ಕ್ರಿಯಾ ಯೋಜನೆ ಸಿದ್ಧಪಡಿಸಿ, ಆದ್ಯತೆ ಮೇರೆಗೆ ಅನುಷ್ಠಾನಗೊಳಿಸಲಾಗುವುದು.

ಇಲ್ಲಿನ ಇಎಸ್‌ಐ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು. ಇಲ್ಲಿನ ರೋಗಿಗಳನ್ನು ಬೆಂಗಳೂರಿಗೆ ಕೊಂಡೊಯ್ಯುವಂತೆ ವೈದ್ಯರು ಶಿಫಾರಸು ಮಾಡುವಂತಾಗಬಾರದು. ಹಾಗಾಗಿ ಇಎಸ್‌ಐ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸುವ ಮೂಲಕ ಇಲ್ಲಿನ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲಾಗುವುದು. ಇದರೊಂದಿಗೆ ಹತ್ತು ಹಲವಾರು ಸಮಸ್ಯೆಗಳನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುವುದು.

ಗೆಲುವನ್ನು ಹೇಗೆ ವಿಶ್ಲೇಷಿಸುತ್ತೀರಿ?
ಸಾರ್ವತ್ರಿಕ ಚುನಾವಣೆಯಲ್ಲಿ ಗೆಲುವಿನ ನಿರೀಕ್ಷೆಯಿಂದಲೇ ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಗೆಲುವು ಕಷ್ಟ ಎಂದೆನಿಸಿದ್ದರೆ ಸ್ಪರ್ಧೆಯನ್ನೇ ಮಾಡುತ್ತಿರಲಿಲ್ಲ. ಜಿಲ್ಲೆಯ ಮತದಾರ ಭಾರತೀಯ ಜನತಾ ಪಕ್ಷಕ್ಕೆ ಆಶೀರ್ವಾದ ಮಾಡುವ ವಿಶ್ವಾಸದಿಂದಲೇ ಸ್ಪರ್ಧಿಸಿದ್ದೆ. ಅವರ ಆಶೀರ್ವಾದದಿಂದ ಗೆದ್ದಿದ್ದೇನೆ.

Advertisement

ಮೋದಿ ಅಲೆ ಹೇಗೆ ಕೆಲಸ ಮಾಡಿದೆ?
ಸಾರ್ವತ್ರಿಕ ಚುನಾವಣೆಯಲ್ಲಿ ಅತಿ ಹೆಚ್ಚು ಕೆಲಸ ಮಾಡಿದ್ದೇ ಪ್ರಧಾನಿ ನರೇಂದ್ರ ಮೋದಿಯವರ ಅಲೆ. ಬಳ್ಳಾರಿ ಮಾತ್ರವಲ್ಲ ಇಡೀ ದೇಶದಲ್ಲೇ ಮೋದಿ ಅಲೆಯಿದೆ. ಚುನಾವಣಾ ಪ್ರಚಾರದ ವೇಳೆ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ 25 ಸಾವಿರಕ್ಕೂ ಹೆಚ್ಚು ಮತಗಳು ಕಾಂಗ್ರೆಸ್‌ಗೆ ಲೀಡ್‌ ಕೊಡಲಿವೆ ಎನ್ನಲಾಗುತ್ತಿತ್ತು. ಆಗ ನಾನು ನಗುತ್ತಲೇ ಸಂಡೂರು ಈ ಬಾರಿ ಬೂದಿ ಮುಚ್ಚಿದ ಕೆಂಡದಂತಿದ್ದು, ಇವಿಎಂ ಮತಯಂತ್ರ ತೆರೆದಾಗ ತಿಳಿಯಲಿದೆ ಎಂದು ಹೇಳಿದ್ದೆ. ಅದರಂತೆ ಬಿಜೆಪಿಗಿಂತ ಕೇವಲ 1353 ಮತಗಳಷ್ಟೇ ಕಾಂಗ್ರೆಸ್‌ಗೆ ಲೀಡ್‌ ಲಭಿಸಿದೆ. ಮಹಾಭಾರತದಲ್ಲಿ ಅರ್ಜುನನ್ನು ಗೆಲ್ಲಿಸಲು ಪಣತೊಟ್ಟಿದ್ದ ಶ್ರೀಕೃಷ್ಣನಂತೆ ಸಾರ್ವತ್ರಿಕ ಚುನಾವಣೆಯಲ್ಲಿ ಸಂಡೂರು ಯುವರಾಜ ಕಾರ್ತಿಕ್‌ ಘೋರ್ಪಡೆ ಸುಡುಬಿಸಿಲನ್ನೂ ಲೆಕ್ಕಿಸದೆ ನನ್ನೊಂದಿಗೆ ಪ್ರಚಾರ ನಡೆಸಿ ಮತದಾರರನ್ನು ಮನವೊಲಿಸಿ, ಇಷ್ಟೊಂದು ಮತಗಳು ಲಭಿಸುವಂತೆ ಮಾಡಿದ್ದು, ನಿರೀಕ್ಷೆಯಂತೆ ಮತಗಳು ಲಭಿಸಿವೆ. ನಾನು ಜಿಲ್ಲಾ ಪರಿಷತ್‌ ಉಪಾಧ್ಯಕ್ಷನಾಗಿ ಆ ಭಾಗಕ್ಕೆ ಮಾಡಿದ್ದ ಅಭಿವೃದ್ಧಿ ಕೆಲಸಗಳು ಈ ವೇಳೆ ಸಹಕಾರಿಯಾಗಿವೆ.

ಗೆಲುವಿನಲ್ಲಿ ಜಿಲ್ಲೆಯ ನಾಯಕರ ಪಾತ್ರ ಏನು?
ನನ್ನ ಗೆಲುವಿನಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಬಿ.ಶ್ರೀರಾಮುಲು ಪ್ರಮುಖ ಪಾತ್ರ ವಹಿಸಿದ್ದಾರೆ. ಚುನಾವಣೆಯಲ್ಲಿ ನನಗೆ ಟಿಕೆಟ್ ಕೊಡಿಸುವುದರ ಜತೆಗೆ ಸುಮಾರು 15 ದಿನಕ್ಕೂ ಹೆಚ್ಚು ನನ್ನೊಂದಿಗೆ ಸುಡು ಬಿಸಿಲನ್ನೂ ಲೆಕ್ಕಿಸದೆ ಇಡೀ ಕ್ಷೇತ್ರಾದ್ಯಂತ ಪ್ರಚಾರ ಮಾಡಿದ್ದಾರೆ. ಇವರೊಂದಿಗೆ ಶಾಸಕರಾದ ಜಿ.ಸೋಮಶೇಖರರೆಡ್ಡಿ, ಎನ್‌.ವೈ.ಗೋಪಾಲಕೃಷ್ಣ, ಮಾಜಿ ಸಂಸದ ಸಣ್ಣಪಕ್ಕೀರಪ್ಪ, ಮಾಜಿ ಶಾಸಕರಾದ ಟಿ.ಎಚ್.ಸುರೇಶ್‌ಬಾಬು, ನೇಮಿರಾಜ್‌ ನಾಯ್ಕ, ಚಂದ್ರಾನಾಯ್ಕ, ಪಕ್ಷದ ಕಾರ್ಯಕರ್ತರು, ಮುಖಂಡರು ನನ್ನ ಗೆಲುವಿಗೆ ಶ್ರಮಿಸಿದ್ದಾರೆ.

ಲಕ್ಷ್ಮೀ ಪುತ್ರ ಎಂದಿದ್ದಕ್ಕೆ ನಿಮ್ಮ ಪ್ರತಿಕ್ರಿಯೆ ಏನು?
ಮೈತ್ರಿ ಪಕ್ಷಗಳ ಪರಾಜಿತ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಸರಸ್ವತಿ ಪುತ್ರ ಇರಬಹುದು. ಅದನ್ನು ನಾನು ವಿರೋಧಿಸಿಲ್ಲ. ಆದರೆ, ನನಗೆ ಲಕ್ಷ್ಮೀಪುತ್ರ ಎಂಬ ಪಟ್ಟ ಕಟ್ಟಿದ್ದನ್ನು ನಾನು ಅಲ್ಲಗಳೆಯುತ್ತೇನೆ. ನಾನು ಬಳ್ಳಾರಿ ಮಗ, ಇಲ್ಲಿನ ಮಣ್ಣಿನ ಮಗ.

Advertisement

Udayavani is now on Telegram. Click here to join our channel and stay updated with the latest news.

Next