Advertisement

ಗಣಿನಾಡಲ್ಲಿ ಗೆದ್ದು ಬೀಗಿದ ದೇವೇಂದ್ರಪ್ಪ

11:33 AM May 24, 2019 | Naveen |

ಬಳ್ಳಾರಿ: ಗಣಿನಾಡು ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ ಪ್ರತಿಸ್ಪರ್ಧಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ವಿರುದ್ಧ 54,304 ಮತಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದ್ದು, ಉಪ ಚುನಾವಣೆಯಲ್ಲಿ ಗೆದ್ದಿದ್ದ ದಾಖಲೆ ವೀರ ಉಗ್ರಪ್ಪರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಭಾರೀ ಮುಖಭಂಗವಾಗಿದೆ.

Advertisement

ಕಳೆದ ಉಪ ಚುನಾವಣೆಯಲ್ಲಿ ಆರಂಭದಿಂದಲೂ ಪ್ರತಿ ಸುತ್ತಿನ ಮತಗಳ ಎಣಿಕೆಯಲ್ಲೂ ಮುನ್ನಡೆ ಸಾಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪರಿಗೆ ಸಾರ್ವತ್ರಿಕ ಚುನಾವಣೆಯಲ್ಲಿ ಆರಂಭದಲ್ಲೇ ಹಿನ್ನಡೆ ಅನುಭವಿಸಿದರು. ಆರಂಭದ ಅಂಚೆ ಮತಗಳ ಎಣಿಕೆಯಲ್ಲಿ ಉಗ್ರಪ್ಪರಿಗೆ 3080, ಬಿಜೆಪಿಯ ವೈ.ದೇವೇಂದ್ರಪ್ಪರಿಗೆ 4579 ಮತಗಳು ಲಭಿಸಿದ್ದು, 1499 ಮತಗಳ ಮುನ್ನಡೆ ಸಾಧಿಸಿದ್ದರು. ನಂತರ ಆರಂಭವಾದ ವಿದ್ಯುನ್ಮಾನ ಮತಗಳ ಎಣಿಕೆಯಲ್ಲೂ ದೇವೇಂದ್ರಪ್ಪ ಅಲ್ಪ ಪ್ರಮಾಣದ ಮತಗಳ ಮುನ್ನಡೆಯ ನಾಗಾಲೋಟ ಮುಂದುವರಿಸಿದರು. ಮೊದಲ ಸುತ್ತಿನಲ್ಲಿ 34,770 ಮತಗಳನ್ನು ಪಡೆದ ದೇವೇಂದ್ರಪ್ಪ, 33,220 ಮತ ಗಳಿಸಿದ ಉಗ್ರಪ್ಪರಿಗಿಂತ 1,550 ಮತಗಳ ಮುನ್ನಡೆಯಾದರು. ಎರಡನೇ ಸುತ್ತಿನಿಂದ ಸತತ ಆರು ಸುತ್ತುಗಳವರೆಗೆ ಪ್ರತಿ ಸುತ್ತಿನಲ್ಲೂ ಹೆಚ್ಚು ಮತಗಳನ್ನು ಗಳಿಸುವ ಮೂಲಕ ಮುನ್ನಡೆ ಕಾಯ್ದುಕೊಂಡಿದ್ದ ದೇವೇಂದ್ರಪ್ಪ, 7ನೇ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದರು. ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪ 746 ಮತಗಳ ಮುನ್ನಡೆ ಸಾಧಿಸಿದರು. ಇನ್ನು ಮುಂದೆ ಉಗ್ರಪ್ಪನವರೇ ಮುನ್ನಡೆ ಸಾಧಿಸಿ ಅಂತಿಮವಾಗಿ ಜಯ ಗಳಿಸಲಿದ್ದಾರೆ ಎಂಬ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ 8ನೇ ಸುತ್ತಿನಲ್ಲಿ ಬಿಜೆಪಿಯ ದೇವೇಂದ್ರಪ್ಪ ಪುನಃ ಮುನ್ನಡೆಯಾಗಿ ಶಾಕ್‌ ನೀಡಿದರು. 8ನೇ ಸುತ್ತಿನಲ್ಲಿ ಕಾಂಗ್ರೆಸ್‌ನ ಉಗ್ರಪ್ಪಗೆ 2,67,749 ಮತಗಳ ಲಭಿಸಿದ್ದು, ಬಿಜೆಪಿಯ ದೇವೇಂದ್ರಪ್ಪರಿಗೆ 2,71,651 ಮತಗಳು ಲಭಿಸಿ, 3902 ಮತಗಳ ಮುನ್ನಡೆ ಸಾಧಿಸಿದರು.

ಇನ್ನು 9ನೇ ಸುತ್ತಿನಿಂದ ದೇವೇಂದ್ರಪ್ಪ ಎಲ್ಲೂ ಹಿಂತಿರುಗಿ ನೋಡಿದ್ದೇ ಇಲ್ಲ. 9ನೇ ಸುತ್ತಿನಲ್ಲಿ 9937 ಇದ್ದ ಅಂತರ 10ನೇ ಸುತ್ತಿಗೆ 14,529ಕ್ಕೆ, 11ನೇ ಸುತ್ತಿಗೆ 21,099, 12ನೇ ಸುತ್ತಿಗೆ 28,899 ಮತಗಳಿಗೆ ಏರಿಕೆಯಾಯಿತು. ಬಿಜೆಪಿಯ ಅಂತರ ಹೆಚ್ಚುತ್ತಿದ್ದಂತೆ ಕಮಲ ಪಾಳೆಯದಲ್ಲಿ ಗೆಲುವಿನ ನಗೆ ಬೀರಿದರೆ, ಸೋಲನ್ನು ಖಚಿತಪಡಿಸಿಕೊಂಡ ಕಾಂಗ್ರೆಸ್‌ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಎಣಿಕೆ ಕೇಂದ್ರದಿಂದ ಹೊರನಡೆದರು. ಪ್ರತಿ ಸುತ್ತಿನಲ್ಲಿ ಕಾಂಗ್ರೆಸ್‌ಗಿಂತ ಬಿಜೆಪಿ ಪಕ್ಷಕ್ಕೆ ಸರಾಸರಿ 4 ಸಾವಿರಕ್ಕೂ ಹೆಚ್ಚು ಮತಗಳು ಲಭಿಸುತ್ತಿದ್ದುದು ಬಿಜೆಪಿ ಅಂತರ ಕುಸಿಯದಿರಲು ಕಾರಣವಾಯಿತು. ಅಂತಿಮವಾಗಿ 19 ಸುತ್ತುಗಳ ಮುಕ್ತಾಯಕ್ಕೆ ಕಾಂಗ್ರೆಸ್‌ನ ವಿ.ಎಸ್‌.ಉಗ್ರಪ್ಪರಿಗೆ 5,60,681 ಮತಗಳು, ಬಿಜೆಪಿಯ ದೇವೇಂದ್ರಪ್ಪಗೆ 6,16,388 ಮತಗಳು ಲಭಿಸಿ 55,707 ಮತಗಳ ಅಂತರದಿಂದ ಭರ್ಜರಿ ಜಯ ದಾಖಲಿಸಿದರು. ಕೇವಲ 7 ತಿಂಗಳ ಮಟ್ಟಿಗೆ ಕಾಂಗ್ರೆಸ್‌ ವಶದಲ್ಲಿದ್ದ ಜಿಲ್ಲೆಯ ಲೋಕಸಭೆ ಕ್ಷೇತ್ರದ ಮೇಲೆ ಪುನಃ ಕಮಲ ಅರಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next