Advertisement

ಸುಡು ಬಿಸಿಲ ಮಧ್ಯೆಯೂ ಮತದಾರರ ಉತ್ಸಾಹ

01:15 PM Apr 24, 2019 | Naveen |

ಹರಪನಹಳ್ಳಿ: ದಾವಣಗೆರೆ ಲೋಕಸಭಾ ಚುನಾವಣೆಗೆ ಹರಪನಹಳ್ಳಿ ತಾಲೂಕಿನಲ್ಲಿ ಮಂಗಳವಾರ ಶಾಂತಿಯುತ ಮತದಾನ ನಡೆಯಿತು. ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ಮತದಾರರು ಮತಗಟ್ಟೆಗಳಿಗೆ ಆಗಮಿಸಿ ಮತ ಚಲಾಯಿಸಿದರು. ಕೆಲವು ಮತಗಟ್ಟೆಗಳಲ್ಲಿ ಮಂದಗತಿಯಲ್ಲಿ ಮತದಾನ ನಡೆದರೆ, ಮತ್ತೆ ಕೆಲವು ಕಡೆಗಳಲ್ಲಿ ಬಿರುಸಿನ ಮತ ಚಲಾವಣೆ ನಡೆಯಿತು.

Advertisement

ಸುಡು ಬಿಸಿಲಿನ ಅಬ್ಬರದ ಮಧ್ಯೆಯೂ, ಪಟ್ಟಣ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಮತ ಚಲಾವಣೆಗೆ ಜನ ಉತ್ಸಾಹದಿಂದ ಬಂದಿದ್ದರು. ಯುವಕ, ಯುವತಿಯರು ಮತ್ತು ಮಹಿಳೆಯರು ಮಾತ್ರವಲ್ಲದೆ, ಇಳಿವಯಸ್ಸಿನ ಹಿರಿಯರು, ಅಂಗವಿಕಲರು ತಮ್ಮ ಹಕ್ಕು ಚಲಾಯಿಸಿ ಗಮನ ಸೆಳೆದರು. ನಡೆಯಲು ಬಾರದಿದ್ದರೂ ಮತ ಚಲಾಯಿಸಲೇಬೇಕೆಂಬ ತವಕದಿಂದ ಹಿರಿಯರು ಮತಗಟ್ಟೆಗೆ ಕಾಲಿಟ್ಟಿದ್ದು ವಿಶೇಷವಾಗಿತ್ತು. ಅವರನ್ನು ವ್ಹೀಲ್ಚೇರ್‌ಗಳ ನೆರವಿನಿಂದ ಮತಗಟ್ಟೆಯೊಳಗೆ ಅವರನ್ನು ಕರೆದೊಯ್ದ ಮತದಾನ ಮಾಡಿಸಲಾಯಿತು.

ಸುಮಾರು 9 ಗಂಟೆಯವರೆಗೆ ಮತದಾನ ವಿಳಂಬಗತಿಯಲ್ಲಿ ಸಾಗಿತು. ನಂತರ ಮಧ್ಯಾಹ್ನ 12 ಗಂಟೆಯವರೆಗೆ ಬಿರುಸಾಗಿ ನಡೆದು, ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಬಿಸಿಲಿನ ತಾಪ ಹೆಚ್ಚಾದ್ದರಿಂದ ಮಧ್ಯಾಹ್ನ 3 ಗಂಟೆಯವರೆಗೆ ನಿಧಾನಗತಿಯಲ್ಲಿ ನಡೆದ ಮತದಾನವು ಸಂಜೆ 4 ರಿಂದ 6 ಗಂಟೆವರೆಗೆ ಬಿರುಸಿನಿಂದ ಕೂಡಿತ್ತು. ಸಂಜೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಮತ ಚಲಾಯಿಸಿದರು. ಬೆಳಗ್ಗೆ 9 ಗಂಟೆ ವೇಳೆಗೆ ಜಿಲ್ಲೆಯಲ್ಲಿ ಶೇ.6.63ರಷ್ಟು ಮತದಾನವಾಗಿತ್ತು. 1 ಗಂಟೆಗೆ ಶೇ.38.98ರಷ್ಟು ಮತದಾನವಾಗಿ ಏರಿಕೆ ಕಂಡಿತು. ಮಧ್ಯಾಹ್ನ 3 ಗಂಟೆಗೆ ಶೇ.53.60 ರಷ್ಟು, ಸಂಜೆ5 ಗಂಟೆ ವೇಳೆಗೆ ಶೇ.69.44 ರಷ್ಟು ಮತದಾನವಾಗಿತ್ತು.

ಪಟ್ಟಣದ ವಾಲ್ಮೀಕಿ ನಗರದ ಮತಗಟ್ಟೆ ಸಂಖ್ಯೆ 127ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಲಿರುವ ವಧು-ವರರು ಪುರಸಭೆ ಮಾಜಿ ಅಧ್ಯಕ್ಷ ಎಚ್.ಕೆ.ಹಾಲೇಶ್‌ ಅವರೊಂದಿಗೆ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದರು. ವಧು-ವರರು ಪಟ್ಟಣದ ವಾಲ್ಮೀಕಿ ನಗರದ ನಿವಾಸಿಗಳಾಗಿದ್ದು, ಬುಧವಾರ ಮಾಂಗಲ್ಯಧಾರಣೆ ನಡೆಯಲಿದ್ದು, ಮಂಗಳವಾರ ಹರಿಷಿಣ ಶಾಸ್ತ್ರ ಮುಗಿಸಿಕೊಂಡು ಇಬ್ಬರೂ ಹಕ್ಕು ಚಲಾಯಿಸುವ ಮೂಲಕ ತಮ್ಮ ಕರ್ತವ್ಯ ಮೆರೆದರು. ಪಟ್ಟಣದ ಉಪ್ಪಾರಗೇರಿ ಮತ್ತು ನಂದಿಬೇವೂರು ಗ್ರಾಮದಲ್ಲಿ ತೆರೆಯಲಾಗಿದ್ದ ಸಖೀ ಮತಗಟ್ಟೆಯಲ್ಲಿ ಮಹಿಳೆಯರು ಉತ್ಸಾಹದಿಂದ ಮತ ಚಲಾಯಿಸಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು.

ಪಟ್ಟಣದ ಮತಗಟ್ಟೆ ಸಂಖ್ಯೆ-116ರಲ್ಲಿ ಬೆಳಗ್ಗೆ 10 ಗಂಟೆಗೆ ತೆಗ್ಗಿನಮಠ ಸಂಸ್ಥಾನದ ಪೀಠಾಧ್ಯಕ್ಷ ವರಸದ್ಯೋಜಾತ ಸ್ವಾಮೀಜಿ, ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯ, ನೀಲಗುಂದ ಗ್ರಾಮದ ಮತಗಟ್ಟೆಯಲ್ಲಿ ಬೆಳಗ್ಗೆ 7ಗಂಟೆಗೆ ಗುಡ್ಡದ ವಿರಕ್ತ ಮಠದ ಚನ್ನಬಸವ ಶಿವಯೋಗಿ ಸ್ವಾಮೀಜಿ, ಅರಸೀಕೆರೆ ಗ್ರಾಮದ ಮತಗಟ್ಟೆಯಲ್ಲಿ ಕೋಲುಶಾಂತೇಶ್ವರ ಮಠದ ಶಾಂತಲಿಂಗ ದೇಶಿಕೇಂದ್ರ ಸ್ವಾಮೀಜಿ, ತೆಲಿಗಿ ಗ್ರಾಮದ ಸಿದ್ದರೂಢ ಮಠದ ಪುಣಾನಂದ ಸ್ವಾಮೀಜಿ, ಕೂಲಹಳ್ಳಿ ಪಟ್ಟದ ಚಿನ್ಮಯಿ ಸ್ವಾಮೀಜಿ ಮತದಾನ ಮಾಡಿದರು. ಜೆಡಿಎಸ್‌ ಪಕ್ಷದ ಮುಖಂಡ ಎನ್‌.ಕೊಟ್ರೇಶ್‌ ತಿಮಲಾಪುರ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಬೆಣ್ಣೆಹಳ್ಳಿ ಮತಗಟ್ಟೆಯಲ್ಲಿ ತಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ ಮತ ಚಲಾಯಿಸಿದರು. ಸ್ಥಳೀಯ ಶಾಸಕ ಜಿ.ಕರುಣಾಕರರೆಡ್ಡಿ ಅವರು ಕ್ಷೇತ್ರದಲ್ಲಿ ಮತದಾನ ಹಕ್ಕು ಹೊಂದಿಲ್ಲ. ಅವರು ಬಳ್ಳಾರಿ ಕ್ಷೇತ್ರದಲ್ಲಿ ಮತದಾನ ಮಾಡಿದ್ದಾರೆ.

Advertisement

ಮತಗಟ್ಟೆ ಸಂಖ್ಯೆ 241, 159, 85, 132, 190, 104, 88, 208, 248 ಕೇಂದ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭಗೊಳ್ಳುವ ಪೂರ್ವದಲ್ಲಿ ವಿದ್ಯುನ್ಮಾನ ಯಂತ್ರಗಳಲ್ಲಿ ಕೆಲವೊಂದು ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಕೆಲವಡೆ ಮೇಷಿನ್‌ ಬದಲಾವಣೆ ಮಾಡಲಾಗಿದೆ. ಇಂಗಳಗುಂದಿ ಗ್ರಾಮದಲ್ಲಿ 3 ಮತಗಳು ಚಲಾವಣೆಗೊಂಡ ಸಂದರ್ಭದಲ್ಲಿ ಬಿಇಎಲ್ ಇಂಜಿನಿಯರ್‌ ತೆರಳಿ ಮೇಷಿನ್‌ ಸರಿಪಡಿಸಿದರು. ಕರೇಕಾನಹಳ್ಳಿ ಮತ್ತು ತಿಮ್ಮಲಾಪುರ ಗ್ರಾಮದಲ್ಲಿ ಮತದಾನ ಬಹಿಷ್ಕಾರದ ನಡುವೆಯೂ ಶಾಂತಿಯುತ ಮತದಾನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next