ಹರಪನಹಳ್ಳಿ: ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬಕ್ಕೆ ಮಾಸಿಕ 6,000 ಧನಸಹಾಯ ನೀಡುವ ನ್ಯಾಯ್ ಯೋಜನೆ ಆರಂಭಿಸುವುದಾಗಿ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವ ಕಾಂಗ್ರೆಸ್ ಪಕ್ಷ ತಾಲೂಕಿನ ಹಲವಾರು ಪ್ರತಿ ಕುಟುಂಬಗಳಿಗೆ ವೈಯಕ್ತಿಕವಾಗಿ ಪತ್ರ ಬರೆದು ಯೋಜನೆ ಬಗ್ಗೆ ಮಾಹಿತಿ ನೀಡಿದೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ ಅವರ ಸಹಿ ಇರುವ ಈ ಪತ್ರವು ಕನಿಷ್ಠ ಆದಾಯ ಖಾತರಿಯ ಈ ಯೋಜನೆಯ ಬಗ್ಗೆ ಮಾಹಿತಿಯನ್ನು ಒಳಗೊಂಡಿದೆ.
ಪತ್ರದಲ್ಲಿ ಇರುವುದು: ಬಡವರು, ಕಾರ್ಮಿಕರು, ರೈತರು, ಸಣ್ಣ ವ್ಯಾಪಾರಿಗಳು, ಮಧ್ಯಮ ವರ್ಗದವರು ಹಾಗೂ ವ್ಯಾಪಾರಸ್ಥರು ಈ ದೇಶ ಕಟ್ಟುತ್ತಾರೆ. ಆದರೆ ಕಳೆದ ಐದು ವರ್ಷಗಳಿಂದ ಈ ಎಲ್ಲ ವರ್ಗದ ದನಿಗಳನ್ನು ಅದುಮಿ ಕೇವಲ 15-20 ಉದ್ಯೋಗಪತಿಗಳಿಗಾಗಿ ಮಾತ್ರ ಮೋದಿ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಈ ಸರ್ಕಾರದ ನೀತಿಗಳಲ್ಲಿ ರೈತನ ಪರಿಶ್ರಮಕ್ಕೆ ಬೆಲೆ, ಯುವಕರಿಗೆ ನೌಕರಿ, ಬಡವರಿಗೆ ಆದಾಯ, ಕಾರ್ಮಿಕರ ದಿನಗೂಲಿ ಮತ್ತು ಸಣ್ಣ ವ್ಯಾಪಾರಿಗಳ ಜೀವನೋಪಾಯದ ಬಗ್ಗೆ ಯಾವುದೇ ಮಾತು ಇಲ್ಲ. ವಿಪರೀತ್ಯವೆಂಬಂತೆ ಅನಾಣ್ಯೀಕರಣ ಮತ್ತು ಗಬ್ಬರ್‌ಸಿಂಗ್ ತೆರಿಗೆಗಳಿಂದ ಭಾರತೀಯರ ಹೊಟ್ಟೆ ಮೇಲೆ ಹೊಡೆದಿದ್ದಾರೆ. ದೇಶದ ವ್ಯಾಪಾರ, ಜೀನೋಪಾಯ ಮತ್ತು ಉದ್ಯೋಗ ಹಾಳು ಮಾಡಲಾಗಿದೆ, ಅದ್ದರಿಂದ ಈಗ ನ್ಯಾಯ ಸಿಗುತ್ತದೆ.
ಕಾಂಗ್ರೆಸ್ ಪಕ್ಷವು ಭಾರತವನ್ನು ಎರಡು ಮಾಡಲು ಬಿಡುವುದಿಲ್ಲ. ಈ ದೇಶದ ಮೇಲೆ ಬಡವರಿಗೆ, ರೈತರಿಗೆ, ಕಾರ್ಮಿಕರಿಗೆ ಮತ್ತು ವ್ಯಾಪಾರಸ್ಥರಿಗೆ ಸಮಾನವಾದ ಹಕ್ಕಿದೆ. ಮೋದಿಜಿಯವರು ಜನತೆಯಿಂದ ಕಿತ್ತುಕೊಳ್ಳುವುದರಲ್ಲಿ ನಂಬಿಕೆ ಇಡುತ್ತಾರೆ. ಆದರೆ ನಮ್ಮ ವಿಶ್ವಾಸ ಜನತೆಗೆ ನ್ಯಾಯ ಒದಗಿಸುವುದಾಗಿದೆ.
ನಾವು ಜನರನ್ನು ಸರ್ಕಾರದ ಬೊಕ್ಕಸದ ಭಾಗೀದಾರರನ್ನಾಗಿ ಮಾಡುತ್ತೇವೆ. ಕಳೆದ 5 ವರ್ಷಗಳಲ್ಲಿ ಜನರ ಮೇಲಾಗಿರುವ ದೌರ್ಜನ್ಯ. ಅನ್ಯಾಯ ಹೋಗಲಾಡಿಸಿ ಅವರ ಸಮ್ಮಾನವನ್ನು ಹಿಂತಿಗಿಸುವುದಾಗಿದೆ. ಈಗ ನ್ಯಾಯ ಸಿಗುತ್ತದೆ.
ಕಾಂಗ್ರೆಸ್ ಪಕ್ಷವು ನ್ಯಾಯ ಯೋಜನೆಯನ್ನು ತಂದಿದೆ. ನ್ಯಾಯ ಅಂದರೆ ಕನಿಷ್ಠ ತೆರಿಗೆ ಯೋಜನೆ. ನ್ಯಾಯ ಯೋಜನೆಯಡಿ ದೇಶದ ಅತಿ ಬಡ ಕುಟುಂಬದ ಮಹಿಳೆಯರ ಖಾತೆಯಲ್ಲಿ ಪ್ರತಿ ವರ್ಷವೂ 72,000 ರೂ.ಗಳನ್ನು ಜಮೆ ಮಾಡಿಸುತ್ತದೆ. ಈ ಕೆಲಸವನ್ನು ಯಾವುದೇ ಹೊಸ ತೆರಿಗೆಯನ್ನು ಹಾಕದೇ ಮಾಡಲಾಗುವುದು. ಆದ್ದರಿಂದ ಈಗ ನ್ಯಾಯ ಸಿಗುತ್ತದೆ. ಅಣ್ಣ, ತಂಗಿಯರೇ ಮತ್ತು ಯುವ ಸ್ನೇಹಿತರೇ ಈ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರವನ್ನು ರಚಿಸಿ ದೆಶಕ್ಕೆ ನ್ಯಾಯವನ್ನು ಒದಗಿಸಿ, ಬನ್ನಿ ಎಲ್ಲರೂ ಸೇರಿ ಒಂದು ಉತ್ತಮ ಭಾರತ ಕಟ್ಟೋಣ, ಬಡತನ ತೊಲಗಿಸೋಣ. 72 ಸಾವಿರ ರೂ. ಪಡೆಯೋಣ ಎಂಬ ಒಕ್ಕಣಿಕೆ ಈ ಪತ್ರದಲ್ಲಿದೆ.
ಪ್ರತಿ ಮತಗಟ್ಟೆ ವ್ಯಾಪ್ತಿಯ ಬಡ ಕುಟುಂಬಗಳ ವಿಳಾಸ ಸಂಗ್ರಹಿಸಲಾಗಿತ್ತು. ಅಲ್ಲದೇ ಮೊಬೈಲ್ನಲ್ಲಿ ನೋಂದಣಿ ಮಾಡಿಸಲಾಗಿತ್ತು. ಮೊಬೈಲ್ಗೆ ಒಂದು ಸಂದೇಶ ಬಂದಿರುತ್ತದೆ. ಅದರಲ್ಲಿ ತಮ್ಮ ಮೊಬೈಲ್ ಸಂಖ್ಯೆ ಹಾಕಿದ್ದಲ್ಲಿ ರಾಹುಲ್ ಗಾಂಧಿ ಬರೆದಿರುವ ಪತ್ರ ಡೌನ್‌ಲೋಡ್ ಆಗುತ್ತದೆ.
• ಎಲ್.ಮಂಜ್ಯನಾಯ್ಕ,
ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥ