ಬಳ್ಳಾರಿ: ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯದಿಂದ ಇದೇ ಆ. 1ರಿಂದ 10 ದಿನಗಳ ಕಾಲ ಕುಡಿವ ನೀರಿನ ಉದ್ದೇಶಕ್ಕಾಗಿ ಎಲ್ಎಲ್ಸಿ ಕಾಲುವೆಗೆ ನೀರು ಬಿಡಲಾಗುತ್ತಿದ್ದು ರೈತರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಕೋರಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಜಲಾಶಯದಿಂದ ಎಲ್ಎಲ್ಸಿ ಕಾಲುವೆಗೆ ನೀರು ಬಿಡುವ ಕುರಿತು ಕರೆಯಲಾಗಿದ್ದ ಪೂರ್ವಸಿದ್ಧತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ತುಂಗಾಭದ್ರಾ ಜಲಾಶಯದಲ್ಲಿ ಪ್ರತಿ ವರ್ಷದ ಜುಲೈ ತಿಂಗಳಲ್ಲಿ 45 ಟಿಎಂಸಿ ನೀರು ಸಂಗ್ರಹ ಇರಬೇಕಿತ್ತು. ಆದರೆ, ಇದೀಗ ಜಲಾಶಯದಲ್ಲಿ ಕೇವಲ 19 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಅದು ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ಬಳಸಲು ಸಾಧ್ಯವಿದ್ದು, ಇದನ್ನು ನಮ್ಮ ರೈತ ಸಮುದಾಯ ಅರ್ಥಮಾಡಿಕೊಂಡು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದರು.
ಕುಡಿಯುವ ನೀರಿನ ಉದ್ದೇಶಕ್ಕಾಗಿ ತುಂಗಾಭದ್ರಾ ಜಲಾಶಯದಿಂದ ಎಲ್ಎಲ್ಸಿ ಕಾಲುವೆಗೆ ಆ. 1ರಿಂದ 10 ದಿನಗಳ ಕಾಲ ನೀರು ಹರಿಸಲು ತೀರ್ಮಾನಿಸಲಾಗಿದೆ. ನೀರು ಬಿಟ್ಟ ಸಂದರ್ಭದಲ್ಲಿ ಯಾವುದೇ ರೀತಿಯಿಂದ ನೀರನ್ನು ವ್ಯರ್ಥವಾಗಿ ಪೋಲಾಗದ ರೀತಿಯಲ್ಲಿ ಸಂಗ್ರಹ ಮಾಡಿಕೊಳ್ಳುವ ನಿಟ್ಟಿನಲ್ಲಿ ಮುಂದಾಗಬೇಕು. ಪಂಪಿಂಗ್ ಸಾಮರ್ಥ್ಯ ಸೇರಿದಂತೆ ಇನ್ನಿತರೆ ವ್ಯವಸ್ಥೆಗಳನ್ನು ಗ್ರಾಮೀಣ ಕುಡಿಯುವ ನೀರು ಸರಬರಾಜು ಎಂಜಿನಿಯರುಗಳು, ತಹಶೀಲ್ದಾರ್‌ರು, ತಾಪಂ ಇಒ, ಪಪಂ ಮುಖ್ಯಾಧಿಕಾರಿಗಳು, ಪಾಲಿಕೆ ಆಯುಕ್ತರು ಮಾಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ರೈತ ಮುಖಂಡರಿಗೆ ಸ್ಪಷ್ಟಪಡಿಸಿ: ಈಗ ಬಿಡುಗಡೆ ಮಾಡಲಾಗುತ್ತಿರುವ ನೀರು ಕೇವಲ ಕುಡಿಯುವ ನೀರಿನ ಉದ್ದೇಶಕ್ಕೆ ಎಂಬುದನ್ನು ಅಧಿಕಾರಿಗಳು ರೈತ ಮುಖಂಡರು ಮತ್ತು ವಿವಿಧ ಸಂಘ-ಸಂಸ್ಥೆಗಳ ಮುಖಂಡರ ಸಭೆ ಕರೆದು ಸ್ಪಷ್ಟಪಡಿಸಬೇಕು. ಜತೆಗೆ ಜಲಾಶಯದಲ್ಲಿ ನೀರಿನ ಸ್ಥಿತಿ ಕುರಿತು ರೈತರಿಗೆ ತಿಳಿಸಿ, ಪರ್ಯಾಯ ಬೆಳೆಗಳತ್ತ ಚಿತ್ತ ಹರಿಸುವಂತೆ ಸಲಹೆ ನೀಡಬೇಕು. ಈ ನಿಟ್ಟಿನಲ್ಲಿ ಉಪವಿಭಾಗಾಕಾರಿಗಳು ಸಹ ಸಭೆ ನಡೆಸಬೇಕು. ಆ. 1ರೊಳಗಾಗಿ ಎಲ್ಲ ಸಭೆಗಳು ನಡೆಯಬೇಕು ಎಂದು ತಿಳಿಸಿದರು.
ಅಹಿತಕರ ಘಟನೆಗಳಾಗದಂತೆ ಬಂದೋಬಸ್ತ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ. ಬಾಬಾ ಮಾತನಾಡಿ, ತುಂಗಭದ್ರಾ ಜಲಾಶಯದಿಂದ ಕುಡಿಯುವ ಸಲುವಾಗಿ ನೀರನ್ನು ಹರಿಸಲಾಗುತ್ತಿದೆ. ಇದನ್ನು ರೈತರು ಅರ್ಥ ಮಾಡಿಕೊಳ್ಳಬೇಕು ನಮ್ಮೊಂದಿಗೆ ಸಹಕರಿಸಬೇಕು. ನೀರು ಹರಿಸಿದ ವೇಳೆ ಕಾಲುವೆ ಬಳಿ ಯಾವುದೇ ಅಹಿತಕರ ಘಟನೆಗಳಾಗದಂತೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗುವುದು ಎಂದು ತಿಳಿಸಿದರು.
ನೀರು ಬಿಟ್ಟ ಸಂದರ್ಭದಲ್ಲಿ ಕಾಲುವೆ ಬಳಿ ಕಳೆದ ವರ್ಷ ಎಲ್ಲೆಲ್ಲಿ ಸಮಸ್ಯೆಯಾಗಿದೆ ಮತ್ತು ಈ ವರ್ಷ ಎಲ್ಲೆಲ್ಲಿ ಸಮಸ್ಯೆಯಾಗುವ ಸಾಧ್ಯತೆ ಇದೆ ಎಂಬುದರ ವಿವರವನ್ನು ಒದಗಿಸಿ. ಅಲ್ಲೆಲ್ಲಾ ನಮ್ಮ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಹಾಗೂ ಅಗತ್ಯ ಸಿಬ್ಬಂದಿಯನ್ನು ಆ. 1ರಿಂದ 14ರವರೆಗೆ ನಿಯೋಜಿಸಲಾಗುವುದು ಮತ್ತು ಸೂಕ್ಷ್ಮವಾಗಿ ಮಾನಿಟರ್ ಮಾಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಜಿಪಂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೆ.ನಿತೀಶ್, ಸಹಾಯಕ ಆಯುಕ್ತ ರಮೇಶ್ ಕೋನರೆಡ್ಡಿ ಮಾತನಾಡಿದರು. ಸಭೆಯಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಈಶ್ವರ್‌ಕುಮಾರ್, ಹೊಸಪೇಟೆ ಸಹಾಯಕ ಆಯುಕ್ತ ಪಿ.ಎನ್. ಲೋಕೇಶ್, ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಸರಬರಾಜು ಎಂಜಿನಿಯರುಗಳು ಸೇರಿದಂತೆ ಅನೇಕರು ಇದ್ದರು.