Advertisement

ವಾಹನಗಳಲ್ಲಿ ಕಾರ್ಮಿಕರ ಸಾಗಣೆ ಅಪರಾಧ

04:53 PM Jun 17, 2019 | Naveen |

ಬಳ್ಳಾರಿ: ಕಾರ್ಮಿಕರನ್ನು ಸರಕು ಸಾಗಣೆ ವಾಹನಗಳಲ್ಲಿ ಸಾಗಿಸುವುದು ಅಪರಾಧ. ಇಂತಹ ವಾಹನಗಳಲ್ಲಿ ಪ್ರಯಾಣಿಸುವುದರಿಂದ ತಮ್ಮ ಜೀವಕ್ಕೆ ತಾವೇ ಕುತ್ತು ತಂದುಕೊಳ್ಳಲಿದ್ದೀರಿ ಎಂದು ಹಿರಿಯ ಸಿವಿಲ್ ನ್ಯಾಯಾಧಿಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರ್ಜುನ್‌ ಎಸ್‌.ಮಲ್ಲೂರ್‌ ಹೇಳಿದರು.

Advertisement

ಇಲ್ಲಿನ ಪಾರ್ವತಿ ನಗರದಲ್ಲಿರುವ ಹೊಸ ಜಿಲ್ಲಾ ನ್ಯಾಯಾಲಯದ ಸಂಕೀರ್ಣ ನಿರ್ಮಾಣದ ಆವರಣದಲ್ಲಿ ಕಾರ್ಮಿಕ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆ ಮತ್ತು ಕೆಎಂವಿ ಪ್ರಾಜೆಕ್ಟ್ ಲಿಮಿಟೆಡ್‌ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರಕು ಸಾಗಣೆ ಮತ್ತು ಕನ್ಸ್ಟ್ರಕ್ಷನ್‌ ವಾಹನಗಳಲ್ಲಿ ಕಾರ್ಮಿಕರನ್ನು ಕರೆದೊಯ್ಯುವುದನ್ನು ತಡೆಗಟ್ಟುವ ಬಗ್ಗೆ ನಿರ್ಮಾಣದ ಸುರಕ್ಷತಾ ಕ್ರಮಗಳ, ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ ಬಗ್ಗೆ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಾಹನಗಳು ಅಪಘಾತಕ್ಕೀಡಾದಾಗ ವಿಮೆ ಪಡೆದುಕೊಳ್ಳಲು ಆ ವಾಹನಗಳು ವಿಮಾ ವ್ಯಾಪ್ತಿಗೆ ಒಳಪಟ್ಟರೆ ಸಾಧ್ಯವಾಗುತ್ತದೆ. ಪ್ರಸ್ತುತ ದಿನಗಳಲ್ಲಿ ಕಟ್ಟಡ ಕಾಮಗಾರಿಗಳು ವೇಗವಾಗಿ ನಡೆಯುತ್ತಿದ್ದು, ಮರಳು, ಉಪಕರಣಗಳನ್ನು ಸಾಗಿಸುತ್ತಿದ್ದ ಲಾರಿಗಳಲ್ಲಿ ಕಾರ್ಮಿಕರನ್ನು ಸಾಗಿಸಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಅವಘಡಗಳಾದರೆ ಪರಿಹಾರ ಪಡೆಯಲು ಸಾಧ್ಯವಿಲ್ಲ. ಕಾರ್ಮಿಕರನ್ನು ಕರೆತರಲು ಪ್ರತ್ಯೇಕ ವಾಹನಗಳ ವ್ಯವಸ್ಥೆ ಮಾಡಿದರೆ, ಕಾರ್ಮಿಕರ ಸಾವು ನೋವುಗಳನ್ನು ತಡೆಗಟ್ಟಬಹುದು ಎಂದು ಹೇಳಿದರು.

ಕೆಲಸದ ಸ್ಥಳಗಳಲ್ಲಿ ಕಾರ್ಮಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಜತೆಗೆ ಬಾಲ ಕಾರ್ಮಿಕ ಪದ್ಧತಿ ತಡೆಯಬೇಕು. ಮಕ್ಕಳು ಆಡುವ ವಯಸ್ಸಿನಲ್ಲಿ ಅವರಿಂದ ಆದಾಯ ಬಯಸಬಾರದು. ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಕೆಲಸದ ಬದಲು ಶಿಕ್ಷಣ ಕೊಡಿಸಬೇಕು. ಅಂದಾಗ ಮಾತ್ರ ಸಶಕ್ತ ಭಾರತ ನಿರ್ಮಾಣವಾಗಲು ಸಾಧ್ಯ ಎಂದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಚಂದ್ರಶೇಖರ್‌ ಎನ್‌. ಐಲಿ ಮಾತನಾಡಿ, ಕಾರ್ಮಿಕರು ಕೆಲಸದ ಸ್ಥಳಗಳಲ್ಲಿ ಅಗತ್ಯ ಸುರಕ್ಷತಾ ಕ್ರಮ ಅಳವಡಿಸಿಕೊಳ್ಳಬೇಕು. ಮಕ್ಕಳಿಗೆ ಕೆಲಸದ ಬದಲಿಗೆ ಗುಣಮಟ್ಟದ ಶಿಕ್ಷಣ ಒದಗಿಸಿ ಉನ್ನತ ಹುದ್ದೆಗೇರಿಸಬೇಕು. ಕಟ್ಟಡ ಕಾರ್ಮಿಕರು ಕಡ್ಡಾಯವಾಗಿ ಇಲಾಖೆಯಲ್ಲಿ ಹೆಸರನ್ನು ನೋಂದಾಯಿಸಿ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಹೇಳಿದ ಅವರು ತಮಗೆ ಇಲಾಖೆಯಿಂದ ನೀಡಲಾಗುತ್ತಿರುವ ಸೌಲಭ್ಯಗಳ ವಿವರವನ್ನು ತಿಳಿಸಿದರು.

Advertisement

ಕೆಎಂವಿ ಪ್ರಾಜೆಕ್ಟ್ ಲಿಂ., ನ ಡೆಪ್ಯೂಟಿ ಪ್ರಾಜೆಕ್ಟ್ ಮ್ಯಾನೇಜರ್‌ ರುದ್ರಪ್ರಸಾದ್‌ ಅಧ್ಯಕ್ಷತೆ ವಹಿಸಿದ್ದರು. ಕಾರ್ಮಿಕ ನಿರೀಕ್ಷಕ ಎಂ.ರವಿದಾಸ್‌, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ರಾಮಲಿಂಗಪ್ಪ ಬಿ.ಕೆ, ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆಯ ಯೋಜನಾ ನಿರ್ದೇಶಕ ಎ.ಮೌನೇಶ, ಯೋಜನೆಯ ಕ್ಷೇತ್ರಾಧಿಕಾರಿ ಪಿ.ಎಂ.ಈಶ್ವರಯ್ಯ, ಕೆ.ಎಂ.ವಿ. ಪ್ರಾಜೆಕ್ಟ್ ಲಿಂ., ನ ವ್ಯವಸ್ಥಾಪಕ ಸತ್ಯನಾರಾಯಣ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next