ಬಳ್ಳಾರಿ: ಜಿಲ್ಲೆಯ ಕೊಟ್ಟೂರು, ಕುಡತಿನಿ ಪಟ್ಟಣ ಪಂಚಾಯಿತಿಗೆ ಕಳೆದ ಆ.31ರಂದು ಚುನಾವಣೆ ನಡೆದಿದ್ದು, ರಾಜ್ಯ ಸರ್ಕಾರ ಪ್ರಕಟಿಸಿದ್ದ ಮೀಸಲಾತಿ ಪ್ರಶ್ನಿಸಿ ಸ್ಥಳೀಯರು ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದಾರೆ. ಏಕಸದಸ್ಯ ಪೀಠದಲ್ಲಿ ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದು, ವಿಚಾರಣೆ ನಡೆಯುತ್ತಿದೆ.
ಕಳೆದ ಆಗಸ್ಟ್ 31 ರಂದು ಸ್ಥಳೀಯ ಸಂಸ್ಥೆಗಳಿಗೆ ರಾಜ್ಯಾದ್ಯಂತ ನಡೆದ ಚುನಾವಣೆಯಲ್ಲಿ ಬಳ್ಳಾರಿ ಜಿಲ್ಲೆಯ ಕೊಟ್ಟೂರು ಮತ್ತು ಹೊಸದಾಗಿ ಮೇಲ್ದರ್ಜೆಗೇರಿದ್ದ ಕುಡತಿನಿ ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆಯಿತು. ಫಲಿತಾಂಶ ಹೊರಬಿದ್ದ ಸೆ.3 ರಂದು ಮಧ್ಯಾಹ್ನವೇ ಪೌರಾಡಳಿತ ನಿರ್ದೇಶನಾಲಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪ್ರಕಟಿಸಿತು. ಕೊಟ್ಟೂರು ಪಪಂನಲ್ಲಿ ಅಧ್ಯಕ್ಷ ಸ್ಥಾನ 3ಎ, ಉಪಾಧ್ಯಕ್ಷ ಸ್ಥಾನ 2ಎ ಮಹಿಳೆ ಕುಡತಿನಿ ಪಪಂ ಅಧ್ಯಕ್ಷ ಸ್ಥಾನವನ್ನು ಎಸ್‌ಸಿ ಮಹಿಳೆ, ಉಪಾಧ್ಯಕ್ಷ ಸ್ಥಾನವನ್ನು ಎಸ್‌ಟಿ ಮಹಿಳೆಗೆ ಮೀಸಲಿರಿಸಿ ಆದೇಶ ಹೊರಡಿಸಿತು. ಇದನ್ನು ಪ್ರಶ್ನಿಸಿ ಕೊಟ್ಟೂರು ಪಪಂನ 20ನೇ ವಾರ್ಡ್ ಸದಸ್ಯೆ ರೇಖಾ ರಮೇಶ ಮತ್ತು ಕುಡತಿನಿ ಪಪಂನ 6ನೇ ವಾರ್ಡ್ ಸದಸ್ಯೆ ಗೀತಾ ನಾಗರಾಜ ಅವರು ಧಾರವಾಡ ಹೈಕೋರ್ಟ್‌ನ ಏಕಸದಸ್ಯ ಪೀಠಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಈವರೆಗೂ ಐದಾರು ವಿಚಾರಣೆಗಳು ನಡೆದರೂ ಇತ್ಯರ್ಥವಾಗಿಲ್ಲ.
ಕೊಟ್ಟೂರು ಪಪಂ ಸಮಸ್ಯೆ ಏನು?: ದಶಕದ ಹಿಂದೆ ವಿಧಾನಸಭೆ ಕ್ಷೇತ್ರವೂ ಆಗಿದ್ದ ಕೊಟ್ಟೂರು ಪಪಂನಲ್ಲಿ ಮೀಸಲಾತಿ ಆರಂಭವಾದಾಗಿನಿಂದಲೂ ಒಮ್ಮೆಯೂ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿಟ್ಟಿಲ್ಲ. ಮೀಸಲಾತಿಯಿಂದಾಗಿ ಪಪಂ ಚುನಾವಣೆಯಲ್ಲಿ ಗೆದ್ದಿದ್ದ ಎಲ್ಲ ಸಮುದಾಯದವರೂ ಅಧ್ಯಕ್ಷರಾಗಿದ್ದಾರೆ. ಪರಿಶಿಷ್ಟ ಜಾತಿ ಮಹಿಳೆಗೆ ಮಾತ್ರ ಈವರೆಗೂ ಒಮ್ಮೆಯೂ ಮೀಸಲಿರಿಸಲ್ಲ. ಈ ಬಾರಿಯೂ ಅಧ್ಯಕ್ಷ ಸ್ಥಾನ 3ಎ, ಉಪಾಧ್ಯಕ್ಷ ಸ್ಥಾನ 2ಎಗೆ ಮೀಸಲಿರಿಸಲಾಗಿದೆ. ಹಾಗಾಗಿ ಅಧ್ಯಕ್ಷ ಸ್ಥಾನವನ್ನು ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿರಿಸಬೇಕು ಎಂದು ಧಾರವಾಡ ಹೈಕೋರ್ಟ್‌ನ ಏಕಸದಸ್ಯ ಪೀಠಕ್ಕೆ ಕಳೆದ ಸೆ.9 ರಂದು ರಿಟ್ ಅರ್ಜಿ ಸಲ್ಲಿಸಲಾಗಿದ್ದು, ಸೆ.11 ರಂದು ಕೋರ್ಟ್ ತಡೆಯಾಜ್ಞೆ ನೀಡಿತು. ಅಲ್ಲದೇ, ಉಪಾಧ್ಯಕ್ಷ ಸ್ಥಾನವನ್ನು ಸಾಮಾನ್ಯ ಮಹಿಳೆಗೆ ಮೀಸಲಿರಿಸುವಂತೆಯೂ ಸ್ಥಳೀಯರೊಬ್ಬರು ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯ, ಈಗಾಗಲೇ ವಿಚಾರಣೆಗೆಂದು 8-10 ಬಾರಿ ದಿನಾಂಕ ನಿಗದಿಗೊಳಿಸಿ, 5-6 ಬಾರಿ ವಿಚಾರಣೆ ನಡೆಸಿದೆ. ಅಲ್ಲದೇ, ಈಚೆಗೆ ಬೆಂಗಳೂರು ಹೈಕೋರ್ಟ್‌ನ ಏಕಸದಸ್ಯ ಪೀಠದಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಎಲ್ಲ ಅರ್ಜಿಗಳನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಧಾರವಾಡ ಹೈಕೋರ್ಟ್‌ನ ಏಕಸದಸ್ಯ ಪೀಠದ ನ್ಯಾಯಾಧೀಶರು ದ್ವಿಸದಸ್ಯ ಪೀಠಕ್ಕೆ ರಿಟ್ ಸಲ್ಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ತಿಂಗಳೊಳಗಾಗಿ ದ್ವಿಸದಸ್ಯ ಪೀಠಕ್ಕೆ ರಿಟ್ ಅರ್ಜಿ ಸಲ್ಲಿಸಲಾಗಿದೆ ಎನ್ನುತ್ತಾರೆ ರಿಟ್ ಅರ್ಜಿ ಸಲ್ಲಿಸಿದ ಪಪಂ ಸದಸ್ಯೆ ರೇಖಾ ರಮೇಶ್.
ಕುಡತಿನಿಯಲ್ಲು ನನೆಗುದಿಗೆ ಬಿದ್ದ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ: ಇನ್ನು ಕುಡತಿನಿ ಪಟ್ಟಣ ಪಂಚಾಯಿತಿಯಲ್ಲೂ ಮೀಸಲಾತಿ ಬದಲಾವಣೆಗಾಗಿ ಕೋರ್ಟ್ ಮೊರೆ ಹೋಗಿದ್ದ ಹಿನ್ನೆಲೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನನೆಗುದಿಗೆ ಬಿದ್ದಿದೆ. ಹೊಸದಾಗಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ್ದ ಕುಡತಿನಿಯು ಮೊದಲ ಬಾರಿಗೆ ಚುನಾವಣೆ ಎದುರಿಸಿದೆ. ಪಪಂನ ವಾರ್ಡ್‌ಗಳು ಸೇರಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿರಿಸಿ 2016ರಲ್ಲೇ ಮೀಸಲಾತಿ ಪ್ರಕಟಿಸಲಾಗಿದೆ. ಪಪಂ ಚುನಾವಣೆಯನ್ನು 2016ರ ಮೀಸಲಾತಿಯಂತೆ ನಡೆಸಲಾಯಿತಾದರೂ, ಫಲಿತಾಂಶ ಹೊರಬಿದ್ದ ಸೆ.3 ರಂದು ಮಧ್ಯಾಹ್ನವೇ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿ ಪೌರಾಡಳಿತ ನಿರ್ದೇಶನಾಲಯ ಆದೇಶ ಹೊರಡಿಸಿತು.
ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚ್ಚಿನ ಸ್ಥಾನಗಳಿಸಿದರೂ ಅಧ್ಯಕ್ಷ ಸ್ಥಾನದ ಮೀಸಲು ಅಭ್ಯರ್ಥಿಗಳು ಇಲ್ಲ. ಬಿಜೆಪಿಯಲ್ಲಿ ಮೂವರು ಸದಸ್ಯರು ಇದ್ದಾರೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ 6ನೇ ವಾರ್ಡ್‌ನ ಗೀತಾ ನಾಗರಾಜ್ ಅವರು ಧಾರವಾಡ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿತ್ತು. ಏಕ ಸದಸ್ಯ ಪೀಠದಲ್ಲಿ ಅರ್ಜಿ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ ಕಳೆದ ಜ.3 ರಂದು ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ. ಜ.10 ರಂದು ಅಧ್ಯಕ್ಷ ಸ್ಥಾನಕ್ಕೆ ತಡೆಯಾಜ್ಞೆ ನೀಡಿದ್ದು, ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಬಹುದು ಎಂದು ಸೂಚಿಸಿದೆ. ಈಗಾಗಲೇ ಹಲವು ವಿಚಾರಣೆ ನಡೆಸಿದೆಯಾದರೂ ಈವರೆಗೂ ಸಮಸ್ಯೆ ಇತ್ಯರ್ಥವಾಗಿಲ್ಲ ಎನ್ನುತ್ತಾರೆ ಕುಡತಿನಿ ಮುಖಂಡ ವೆಂಕಟರಮಣಬಾಬು.
ಚುನಾವಣೆ ನಡೆದು ಐದು ತಿಂಗಳು ಕಳೆದರೂ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಸಮಸ್ಯೆಯಿಂದಾಗಿ ಪಪಂ ಸದಸ್ಯರಿಗೆ ಅಧಿಕಾರ ಅನುಭವಿಸದಂತಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರಬೇಕಾದರೆ ಹೈಕೋರ್ಟ್‌ನಲ್ಲಿ ಮೀಸಲಾತಿ ಸಮಸ್ಯೆ ಇತ್ಯರ್ಥವಾಗಬೇಕಾಗಿದೆ.
ವೆಂಕೋಬಿ ಸಂಗನಕಲ್ಲು