Advertisement

ಕನಕದುರ್ಗಮ್ಮ ದೇವಸ್ಥಾನದಲ್ಲಿ ಅನಧಿಕೃತ ಹುಂಡಿಗಳ ಹಾವಳಿ

05:34 PM May 03, 2019 | Naveen |

ಬಳ್ಳಾರಿ: ನಗರದ ಕನಕದುರ್ಗಮ್ಮ ದೇವಸ್ಥಾನದಲ್ಲಿ ಅನಧಿಕೃತ ಹುಂಡಿಗಳ ಹಾವಳಿ ಹೆಚ್ಚುತ್ತಿದ್ದು, ದೇವಸ್ಥಾನದ ವಾರ್ಷಿಕ ಲಕ್ಷಾಂತರ ರೂ. ಅದಾಯಕ್ಕೆ ಕೊಕ್ಕೆ ಬೀಳುತ್ತಿದೆ ಎಂದು ಕರ್ನಾಟಕ ಜನಸೈನ್ಯ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಕೆ.ಎರ್ರಿಸ್ವಾಮಿ ಆರೋಪಿಸಿದರು.

Advertisement

ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕನಕದುರ್ಗಮ್ಮ ದೇವಸ್ಥಾನಕ್ಕೆ ವಾರ್ಷಿಕವಾಗಿ ಅಂದಾಜು ಎರಡೂವರೆ ಕೋಟಿ ರೂ. ಆದಾಯವಿದೆ. ಆದರೆ, ಅನಧಿಕೃತ ಹುಂಡಿಗಳ ಹಾವಳಿಯಿಂದಾಗಿ ಈ ಆದಾಯಕ್ಕೆ ಕೊಕ್ಕೆ ಬೀಳುತ್ತಿದೆ. ಹಿಂದೂ ಧಾರ್ಮಿಕ ದತ್ತಿಯಿಂದ ಪ್ರತಿ ಮೂರು ತಿಂಗಳಿಗೊಮ್ಮೆ ದೇವಸ್ಥಾನದ ಮೂರು ಕಡೆ ಕಾಣಿಕೆ ಹುಂಡಿಗಳನ್ನು ಅಳವಡಿಸಲಾಗುತ್ತದೆ. ಈ ಹುಂಡಿಗಳು ಭರ್ತಿಯಾಗದಿದ್ದರೂ, ದೇವಸ್ಥಾನದಲ್ಲಿನ ಅರ್ಚಕರು, ಧರ್ಮಕರ್ತರು ಅನಧಿಕೃತವಾಗಿ ಹುಂಡಿಗಳನ್ನು ಅಳವಡಿಸುತ್ತಾರೆ. ಇದರಿಂದ ಸುಮಾರು 70 ರಿಂದ 80 ಲಕ್ಷ ರೂ. ಆದಾಯ ಕಡಿತವಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ, ಸಂಬಂಧಪಟ್ಟ ಇಲಾಖೆಯ ಸಹಾಯಕ ಆಯುಕ್ತರಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ಕೂಡಲೇ ಕ್ರಮ ಕೈಗೊಳ್ಳದಿದ್ದಲ್ಲಿ ಮೇ.11 ರಂದು ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಇನ್ನು ದೇವಸ್ಥಾನಕ್ಕೆ ಬರುವ ಕಾಣಿಕೆ ರೂಪದಲ್ಲಿ ಬರುವ ಚಿನ್ನಾಭರಣ, ಸೀರೆಗಳಿಗೆ ಲೆಕ್ಕವೇ ಇಲ್ಲ. ಭಕ್ತರು ರಶೀದಿ ಹಾಕಿಸಿ ಪೂಜಾರಿಗಳಿಗೆ ನೀಡುವ ಚಿನ್ನಾಭರಣಗಳಿಗೆ ಅರ್ಚಕರು ಪೂಜೆ ಮಾಡಲ್ಲ. ರಶೀದಿ ಹಾಕದೇ ನೇರವಾಗಿ ಅರ್ಚಕರ ಕೈಗೆ ನೀಡುವ ಚಿನ್ನಾಭರಣಗಳಿಗೆ ಲೆಕ್ಕವೇ ಇರಲ್ಲ. ಸ್ವತಃ ಮುಜರಾಯಿ ಸಚಿವರೇ ದೇವಸ್ಥಾನಕ್ಕೆ ಭೇಟಿ ನೀಡಿದ್ದಾಗ ಕೊಟ್ಟಿದ್ದ 5 ಗ್ರಾಂ ಚಿನ್ನಕ್ಕೆ ರಶೀದಿ ಹಾಕಿಲ್ಲ. ಇನ್ನು ದೇವಸ್ಥಾನದ ಇತಿಹಾಸದಲ್ಲಿ ಹೂವು, ಹಣ್ಣು, ಟೆಂಗಿನಕಾಯಿ ಮಾರುವ ಮಳಿಗೆಗಳಿಗೆ ಹರಾಜು ಪ್ರಕ್ರಿಯೆಯೇ ನಡೆಸಿಲ್ಲ. ಅವುಗಳನ್ನು ಧರ್ಮಕರ್ತರು, ಅರ್ಚಕರ ಸಂಬಂಧಿಕರೇ ನಡೆಸುತ್ತಿದ್ದಾರೆ ಎಂದು ದೇವಸ್ಥಾನದ ಅರ್ಚಕರು, ಧರ್ಮಕರ್ತರ ವಿರುದ್ಧ ಗಂಭೀರವಾಗಿ ಆರೋಪಿಸಿದರು.

ದೇವಸ್ಥಾನದ ಈ ವ್ಯವಸ್ಥೆ ಕುರಿತು ಮುಜರಾಯಿ ಇಲಾಖೆ ಸಚಿವರು, ಜಿಲ್ಲಾಧಿಕಾರಿ, ಇತರೆ ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ. ಆದರೆ, ಇಲ್ಲಿಯವರೆಗೆ ಯಾರೂ ಸಹ ಕ್ರಮಕ್ಕೆ ಮುಂದಾಗಿಲ್ಲ. ಮಾ.20ರಂದು ಕಾಣಿಕೆ ಹುಂಡಿ ಎಣಿಕೆ ಕಾರ್ಯ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿತ್ತು. ಆದರೆ, ಇಲ್ಲಿಯವರೆಗೆ ಈ ಕಾರ್ಯ ನಡೆದಿಲ್ಲ ಎಂದು ಅವರು ಆರೋಪಿಸಿದರು. ದೇವಸ್ಥಾನದ ಅಕ್ರಮಗಳಲ್ಲಿ ವಿವಿಧ ಹಂತದ ಅಕಾರಿಗಳು ಶಾಮೀಲಾಗಿರುವ ಅನುಮಾನವಿದೆ. ಇನ್ನಾದರೂ ಎಚ್ಚೆತ್ತುಕೊಂಡು ಇಲಾಖೆಯ ಉನ್ನತ ಅಧಿಕಾರಿಗಳು ತಕ್ಷಣ ಸೂಕ್ತ ಕ್ರಮ ವಹಿಸಬೇಕು. ಇಲ್ಲವಾದರೆ ಮೇ.11ರಂದು ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ಅವರು ಎಚ್ಚರಿಸಿದರು.

ಕನ್ನಡಪರ ಸಂಘಟನೆಗಳ ಮುಖಂಡ ಚನ್ನಬಸವರಾಜ ಮಾತನಾಡಿ, ದೇವಸ್ಥಾನದಲ್ಲಿ ನೇಮಕವಾಗಿರುವ ಧರ್ಮಕರ್ತರು, ಅರ್ಚಕರಿಗೆ ಯಾವುದೇ ಅಧಿಕೃತ ಆದೇಶವಿಲ್ಲ. ಇಲಾಖೆಯ ನಿಯಮದ ಪ್ರಕಾರ ಒಬ್ಬರೇ ಅರ್ಚಕರು, ಧರ್ಮಕರ್ತರಾಗಿ ಕಾರ್ಯನಿರ್ವಹಿಸುವಂತಿಲ್ಲ. ಆದರೆ, ದೇವಸ್ಥಾನದಲ್ಲಿ ಧರ್ಮಕರ್ತರಾದ ಪಿ.ಗಾದೆಪ್ಪ ಅವರೇ ಅರ್ಚಕರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಕುರಿತು ನ್ಯಾಯಾಲಯದಲ್ಲೂ ಸಾಕಷ್ಟು ಪ್ರಕರಣಗಳು ನಡೆಯುತ್ತಿವೆ ಎಂದು ಆರೋಪಿಸಿದರು.

Advertisement

ಜನಸೈನ್ಯ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಬಿ. ಹೊನ್ನೂರಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಕೆ.ಎಸ್‌.ಅಶೋಕ್‌ಕುಮಾರ್‌, ಕೆಂಚಯ್ಯ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next