ಬಳ್ಳಾರಿ: ಜಿಂದಾಲ್ ಸಂಸ್ಥೆಗೆ 3667 ಎಕರೆ ಜಮೀನು ಪರಭಾರೆ ವಿಷಯದಲ್ಲಿ ಪರ-ವಿರೋಧ ಮಾತನಾಡುತ್ತಿರುವ ಹಾಲಿ, ಮಾಜಿ ಶಾಸಕರು ಜಿಂದಾಲ್ನಿಂದ ಕಿಕ್‌ಬ್ಯಾಕ್ ಪಡೆದು ರೈತರನ್ನು ಮಧ್ಯದಲ್ಲೇ ಬಿಡದೆ ನ್ಯಾಯ ದೊರೆಯುವವರೆಗೂ ಹೋರಾಟ ಮುಂದುವರಿಸಬೇಕು. ಪರಭಾರೆ ಮಾಡುತ್ತಿರುವ ಜಮೀನಿನ ಮೂಲ ರೈತರಿಗೆ ಎಕರೆಗೆ 30-35 ಲಕ್ಷ ರೂ. ಪರಿಹಾರ ಕೊಡಿಸಬೇಕು ಎಂದು ಕಾಂಗ್ರೆಸ್ ಮತ್ತು ರೈತ ಮುಖಂಡ ಕುಡಿತಿನಿ ಶ್ರೀನಿವಾಸ್ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್ ಸಂಸ್ಥೆಗೆ ಜಮೀನು ಪರಭಾರೆ ಮಾಡುವ ವಿಷಯಕ್ಕೆ ಸಂಬಂಧಿಸಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಪರವಾಗಿ ಮಾತನಾಡಿದ್ದಾರೆ. ವಿಜಯನಗರ ಶಾಸಕ ಆನಂದ್‌ಸಿಂಗ್, ಮಾಜಿ ಶಾಸಕ ಅನಿಲ್ ಲಾಡ್ ವಿರೋಧ ವ್ಯಕ್ತಪಡಿಸಿದ್ದಾರೆ. ಇಷ್ಟು ವರ್ಷಗಳ ಕಾಲ ರೈತರ ಬಗ್ಗೆ ಕಾಳಜಿ ವಹಿಸದ ಹಾಲಿ-ಮಾಜಿ ಶಾಸಕರು ಈಗ ರೈತರ ಬಗ್ಗೆ ಹೋರಾಟ ಮಾಡುವುದಾಗಿ ಮುಂದೆ ಬರುತ್ತಿರುವುದು ಅನುಮಾನ ಮೂಡಿಸಿದೆ ಎಂದರು.
ಇವರು ರೈತರ ಪರವಾಗಿ ಹೋರಾಟ ಮಾಡಲು ಪ್ರಾಮಾಣಿಕವಾಗಿ ಮುಂದೆ ಬಂದಿದ್ದೇ ಆದಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಆಣೆ-ಪ್ರಮಾಣ ಮಾಡಿ ಹೋರಾಟಕ್ಕಿಳಿಯಲಿ. ನಾವು ಸಹ ಬೆಂಬಲಿಸುತ್ತೇವೆ. ಆದರೆ, ಹಾಲಿ-ಮಾಜಿ ಶಾಸಕರು ಪರ-ವಿರೋಧ ಹೇಳಿಕೆ ನೀಡಿ ಜಿಂದಾಲ್ ಸಂಸ್ಥೆಯಿಂದ ಕಿಕ್ ಬ್ಯಾಕ್ ಪಡೆದು ರೈತರನ್ನು ಅರ್ಧಕ್ಕೆ ನಡು ನೀರಲ್ಲಿ ಬಿಟ್ಟು ಹೋಗಬಾರದು. ರೈತರಿಗೆ ನ್ಯಾಯ ದೊರೆಯುವವರೆಗೂ ಹೋರಾಟ ಮುಂದುವರಿಸಬೇಕು ಎಂದು ಒತ್ತಾಯಿಸಿದರು.
ಜಿಂದಾಲ್ ಸಂಸ್ಥೆಗೆ ನೀಡಲಾಗಿರುವ ಜಮೀನಿನ ಪೈಕಿ 870 ಎಕರೆ ಜಮೀನಿನ ಮಾಲೀಕರಿಗೆ ಇಂದಿಗೂ ಸಮರ್ಪಕ ಪರಿಹಾರ ಲಭಿಸಿಲ್ಲ. ಪರಿಹಾರ ವಿತರಿಸುವಲ್ಲೂ ತಾರತಮ್ಯವೆಸಗಲಾಗುತ್ತಿದೆ. ಸ್ಥಳೀಯ ಜನಪ್ರತಿನಿಧಿಗಳು ಸಹ ಸಂಸ್ಥೆಯ ಬೆಂಬಲಕ್ಕೆ ನಿಂತ ಕಾರಣ ಈ ತಾರತಮ್ಯ ಮುಂದುವರಿಯುತ್ತಿದೆ. ಜಿಂದಾಲ್ ಸಂಸ್ಥೆ ಸಂಡೂರು ತಾಲೂಕು ಚಿಕಂತಾಪುರ ಗ್ರಾಮದ ಬಳಿ ಸ್ವಾಧೀನ ಪಡಿಸಿಕೊಂಡಿರುವ ಜಮೀನಿಗೆ ಎಕರೆಗೆ 23 ಲಕ್ಷ ರೂ. ಪರಿಹಾರ ನೀಡಲಾಗಿದೆ. ಇದಕ್ಕೆ ಸಂಡೂರು ಶಾಸಕ, ಸಚಿವ ಈ.ತುಕಾರಾಂ ಅವರ ಬೆಂಬಲವಿದೆ. ಅದೇ ರೀತಿ ರಾಷ್ಟ್ರೀಯ ಹೆದ್ದಾರಿಗೆ ಸ್ವಾಧೀನ ಪಡಿಸಿಕೊಂಡಿರುವ ಜಮೀನಿನ ಪರಿಹಾರ ನೀಡುವಲ್ಲೂ ತಾರತಮ್ಯ ಮಾಡಲಾಗಿದೆ. ಎನ್‌ಎ ಆಗಿರುವ ಎಕರೆ ಜಮೀನಿಗೆ 1.10 ಕೋಟಿ ರೂ. ಪರಿಹಾರ ನೀಡಿದರೆ, ಕೇವಲ 80 ಸೆಂಟ್ಸ್ ಜಮೀನಿಗೆ 2.24 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ. ಸ್ಥಳೀಯ ಶಾಸಕರು, ಸಚಿವರ ಅಭಯವುಳ್ಳ ಫಲಾನುಭವಿಗಳಿಗೆ ದುಪ್ಪಟ್ಟು ಪರಿಹಾರ ನೀಡುವ ಜಿಂದಾಲ್ ಸಂಸ್ಥೆ ಏನೂ ಇಲ್ಲದ ಫಲಾನುಭವಿಗಳಿಗೆ ಅತ್ಯಂತ ಕಡಿಮೆ ಪರಿಹಾರ ನೀಡಿದೆ ಎಂದು ಆರೋಪಿಸಿದರು.
ಮಿತ್ತಲ್, ಬ್ರಹ್ಮಿಣಿ, ಎನ್‌ಎಂಡಿಸಿಯಲ್ಲೂ ತಾರತಮ್ಯ: ತಾಲೂಕಿನ ಕುಡಿತಿನಿ, ವೇಣಿವೀರಾಪುರ, ಹರಗಿನಡೋಣಿ, ಜಾನೆಕುಂಟೆ ಗ್ರಾಮಗಳ ನಡುವೆ 10 ಸಾವಿರಕ್ಕೂ ಹೆಚ್ಚು ಜಮೀನನ್ನು ಆರ್ಸೆಲ್ಲಾರ್ ಮಿತ್ತಲ್, ಬ್ರಾಹ್ಮಿಣಿ, ಎನ್‌ಎಂಡಿಸಿ ಸಂಸ್ಥೆಗಳು ಕೆಐಎಡಿಬಿ ಮೂಲಕ ಖರೀದಿಸಿದೆ. 2010 ಆಗಸ್ಟ್ 10 ರಂದು ಜಮೀನು ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಿದ ಸರ್ಕಾರ ಎಕರೆಗೆ 8,12 ಲಕ್ಷ ರೂ. ಬೆಲೆ ನಿಗದಿಪಡಿಸಿ ಮಿತ್ತಲ್ ಕಂಪನಿಗೆ 4865 ಎಕರೆ ಜಮೀನು ನೀಡಿದೆ. ಅದೇ ರೀತಿ 2010 ಮೇ 22 ರಂದು ಅಧಿಸೂಚನೆ ಹೊರಡಿಸಿದ್ದ ಸರ್ಕಾರ ಕೇವಲ 5,6 ಲಕ್ಷ ರೂ. ಬೆಲೆ ನಿಗದಿಪಡಿಸಿ ಬ್ರಹ್ಮಿಣಿ ಕಂಪನಿಗೆ 4761 ಎಕರೆ ಜಮೀನು ನೀಡಲಾಗಿದೆ. ಇನ್ನು 2011ರಲ್ಲಿ ಮತ್ತೂಂದು ಅಧಿಸೂಚನೆ ಹೊರಡಿಸಿದ್ದು, 2880 ಎಕರೆ ಜಮೀನನ್ನು ಎಕರೆಗೆ 23 ಲಕ್ಷ ರೂ. ಬೆಲೆ ನಿಗದಿಪಡಿಸಿ ಎನ್‌ಎಂಡಿಸಿಗೆ ಕೊಡಿಸಲಾಗಿದೆ. ವಿಧಾನಪರಿಷ್ ಸದಸ್ಯ ಕೆ.ಸಿ. ಕೊಂಡಯ್ಯನವರೇ ಈ ಬೆಲೆ ನಿಗದಿಪಡಿಸಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಹೀಗಾಗಿ ರೈತರಿಗೆ ಪರಿಹಾರ ನೀಡುವಲ್ಲಿ ತಾರತಮ್ಯ ನಡೆದಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ವೆಂಕಟೇಶ್, ಕೃಷ್ಣಪ್ಪ, ಸುನೀಲ್ಕುಮಾರ್ ಸೇರಿದಂತೆ ಕುಡಿತಿನಿ, ವೇಣಿವೀರಾಪುರ, ಹರಗಿನಡೋಣಿ, ಜಾನೆಕುಂಟೆ ಸೇರಿದಂತೆ ವಿವಿಧ ಗ್ರಾಮಗಳ ರೈತರು ಇದ್ದರು.