ಬಳ್ಳಾರಿ: ಹಾಸ್ಟೆಲ್ಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಡೊನೇಶನ್ ಹಾವಳಿ ನಿಯಂತ್ರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಗರದಲ್ಲಿ ಅಖೀಲ ಭಾರತ ವಿದ್ಯಾರ್ಥಿ ಫೆಡರೇಶನ್ (ಎಐಎಸ್‌ಎಫ್) ಜಿಲ್ಲಾ ಸಮಿತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿದರು.
ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಅಭಿವೃದ್ಧಿ ನೆಪದಲ್ಲಿ ದೊಡ್ಡ ಪ್ರಮಾಣದಲ್ಲಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಮೇಲಧಿಕಾರಿಗೆೆ ಸಾಕಷ್ಟು ಬಾರಿ ಗಮನ ಸೆಳೆದರೂ ಕ್ರಮವಿಲ್ಲ. ಇನ್ನಷ್ಟು ದಿನ ನಿರ್ಲಕ್ಷ್ಯವಹಿಸದೆ ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳಬೇಕು.
ವಿಶ್ವವಿದ್ಯಾಲಯದ ಕೌನ್ಸೆಲಿಂಗ್‌ನಲ್ಲಿ ಕೋಟಾದಡಿ ಮೆರಿಟ್ ವಿಧ್ಯಾರ್ಥಿಗಳು ಆಯ್ಕೆಯಾಗಿ ಖಾಸಗಿ ಸ್ನಾತಕೋತ್ತರ ಕೇಂದ್ರಗಳಲ್ಲಿ ಎಂಎ, ಎಂಕಾಂ, ಎಂಎಸ್ಸಿ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪಡೆದಿದ್ದಾರೆ. ಇಂಥ ವಿದ್ಯಾರ್ಥಿಗಳಿಗೆ ಅಭಿವೃದ್ಧಿ ಶುಲ್ಕ ಹಾಗೂ ದೇಣಿಗೆ ಹೆಸರಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳಿಂದ 15 ಸಾವಿರಕ್ಕೂ ಹೆಚ್ಚು ಹಣವನ್ನು ಪಡೆಯಲಾಗುತ್ತಿದೆ. ಇದು ತೀರಾ ಖಂಡನೀಯ. ಅಲ್ಲದೇ, ಕಾಲೇಜು ದಾಖಲಾತಿಯಲ್ಲಿ ಶೇ. 50ರಷ್ಟು ಆಡಳಿತ ಮಂಡಳಿ ಕೋಟಾ ನೀಡಿದರೂ, ವಿದ್ಯಾರ್ಥಿಗಳಿಂದ ಹೆಚ್ಚುವರಿ ಶುಲ್ಕವನ್ನು ಪಡೆಯಲಾಗುತ್ತಿದೆ. ಮೇಲಾಗಿ ಅರ್ಹ ಉಪನ್ಯಾಸಕರನ್ನೂ ನೇಮಿಸದೆ, ಯುಜಿಸಿ ನಿಯಮಗಳನ್ನು ಉಲ್ಲಂಘನೆ ಮಾಡಲಾಗುತ್ತಿದೆ. ಅಂತಹ ಕಾಲೇಜುಗಳನ್ನು ಗುರುತಿಸಿ ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು.
ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ಹಾಗೂ ವಿದ್ಯಾಸಿರಿ ಹಣ ವಿದ್ಯಾರ್ಥಿಗಳ ಖಾತೆಗೆ ಪಾವತಿಸಬೇಕು. ವಿಳಂಬ ಮಾಡಿದರೇ ವಿದ್ಯಾರ್ಥಿ ಪೋಷಕರಿಗೆ ಆರ್ಥಿಕ ಹೊರೆಯಿಂದ ಶೈಕ್ಷಣಿಕ ಚಟುವಟಿಕೆಗೆ ತೀವ್ರ ತೊಂದರೆಯಾಗಲಿದೆ. ಹಾಸ್ಟೆಲ್ಗಳಲ್ಲಿ ಹೆಚ್ಚುವರಿ ದಾಖಲಾತಿಗಳಿಗೆ ಅವಕಾಶ ಕಲ್ಪಿಸಬೇಕು ಎಂಬ ಆದೇಶ ಹೊರಡಿಸಿದ್ದರೂ ಜಿಲ್ಲೆಯ ನಾನಾ ತಾಲೂಕಿನಲ್ಲಿ ಅಧಿಕಾರಿಗಳು ನಾನಾ ನೆಪ ಹೇಳಿ ಮಕ್ಕಳಿಗೆ ವಿನಾಕಾರಣ ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು. ಖಾಸಗಿ ಪದವಿಪೂರ್ವ ಕಾಲೇಜು, ಮಹಾವಿದ್ಯಾಲಯಗಳಲ್ಲಿ ನಡೆಕ್ಷಯುತ್ತಿರುವ ಡೊನೇಶನ್ ಹಾವಳಿಗಳನ್ನು ಕೂಡಲೇ ತಡೆಗಟ್ಟಬೇಕು. ಪ್ರವಾಹ, ನೆರೆಯಿಂದ ತತ್ತರಿಸಿದ ಉತ್ತರ ಕರ್ನಾಟಕ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗೆ ಸರ್ಕಾರ ಅಗತ್ಯ ಪರಿಕರಗಳನ್ನು ಒದಗಿಸಬೇಕು. ನಿರ್ಲಕ್ಷಿಸಿದರೇ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು. ಬಳಿಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಜಿಲ್ಲಾಧ್ಯಕ್ಷ ಸಂಗನಕಲ್ಲು ಕಟ್ಟೆಬಸಪ್ಪ, ರಾಜ್ಯ ಉಪಾಧ್ಯಕ್ಷ ಮಾದಿಹಳ್ಳಿ ಮಂಜುನಾಥ್, ಕೊಟ್ರೇಶ್ ಮುಂಡರಗಿಮs್, ರವಿ, ಹುಲಿನಾಥ್, ಅಶ್ವಿನಿ, ಅನುಷಾ, ದ್ರಾಕ್ಷಾಯಿಣಿ, ಕಲ್ಪನಾ, ಶಿವಕುಮಾರ್ ಇದ್ದರು.