Advertisement

ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆಗೆ ಪ್ರತ್ಯೇಕ “ಓದಿನ ಮನೆ’

04:20 PM Jan 02, 2020 | Naveen |

ಬಳ್ಳಾರಿ: ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶಕ್ಕೆ ವಿಶೇಷ ಮುತುವರ್ಜಿ
ವಹಿಸಿರುವ ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ ಅವರು ಇದಕ್ಕಾಗಿಯೇ ವಿಶೇಷ ಮತ್ತು ವಿನೂತನ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಪ್ರತಿ ಪ್ರೌಢಶಾಲೆಯಲ್ಲಿ “ಓದಿನ ಮನೆ’ ಹೆಸರಲ್ಲಿ ಕೊಠಡಿಯೊಂದನ್ನು ಕಾಯ್ದಿರಿಸಲಾಗಿದ್ದು, ಈ ಮೂಲಕ ಎಸ್ಸೆಸ್ಸೆಲ್ಸಿ ಫಲಿತಾಂಶದ ಸುಧಾರಣೆಗೆ ಮುಂದಾಗಿದ್ದಾರೆ.

Advertisement

ಜಿಲ್ಲೆಯಲ್ಲಿರುವ 225 ಸರ್ಕಾರಿ ಪ್ರೌಢಶಾಲೆಗಳಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಅಧ್ಯಯನ ನಡೆಸುವುದಕ್ಕಾಗಿಯೇ ಒಂದು ಕೊಠಡಿ ಕಾಯ್ದಿರಿಸಲಾಗಿದ್ದು, ಆ ಕೊಠಡಿಗೆ ಅಗತ್ಯ ಬೆಳಕಿನ ವ್ಯವಸ್ಥೆ, ಕುಡಿಯುವ ನೀರು ಹಾಗೂ ಪ್ರತಿ ವಾರಕ್ಕೆ ಇಬ್ಬರು ವಿಷಯ ಶಿಕ್ಷಕರಂತೆ ಎಲ್ಲ ವಿಷಯ ಶಿಕ್ಷಕರನ್ನು ನಿಯೋಜಿಸಿ ವಿದ್ಯಾರ್ಥಿಗಳ ಅಧ್ಯಯನಕ್ಕೆ ಒತ್ತು ನೀಡಿಸಲಾಗುತ್ತಿದೆ.

ಜಿಲ್ಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ (ಬಾಲಕರಿಗೆ ಮಾತ್ರ) ತಮ್ಮ ಮನೆಗಳಲ್ಲಿ ಓದಲು ಅನಾನುಕೂಲವಿದ್ದಲ್ಲಿ ಸಂಜೆ 6ರಿಂದ ರಾತ್ರಿ 9ರವರೆಗೆ ಪ್ರತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿರುವ ಕೊಠಡಿಯಲ್ಲಿ ಅಧ್ಯಯನ ಮಾಡಬಹುದುದಾಗಿದೆ. ಇದನ್ನು ಹೊಸವರ್ಷದ ದಿನವಾದ ಜ.1ರಿಂದಲೇ ಜಿಲ್ಲೆಯಾದ್ಯಂತ ಎಲ್ಲ ಸರ್ಕಾರಿ ಪ್ರೌಢಶಾಲೆಗಳಲ್ಲಿ ಆರಂಭಿಸಲಾಗುತ್ತಿದೆ. ಪ್ರೌಢಶಾಲೆಗಳು ಗ್ರಾಮದ ಹೊರಗಡೆ ಇದ್ದಲ್ಲಿ ಗ್ರಾಮದ ಒಳಗಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಒಂದು ಕೊಠಡಿಯಲ್ಲಿ ಈ “ಓದಿನ ಮನೆ’ ಆರಂಭಿಸಲಾಗುತ್ತಿದೆ.

ಈ ಕುರಿತಂತೆ ಈಗಾಗಲೇ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಬಿಇಒಗಳ ಮುಖಾಂತರ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ತಿಳಿಸಿದ್ದಾರೆ.

ಪಾಲಕ-ಪೋಷಕರ ಸಹಮತಿ ಇದ್ದಲ್ಲಿ ಅವರ ವಿದ್ಯಾರ್ಥಿನಿ (ಬಾಲಕಿಯರನ್ನು)ಯರನ್ನು ಸಹ ಈ ಅಧ್ಯಯನ ಕೊಠಡಿಗೆ ಕಳುಹಿಸಬಹುದಾಗಿದೆ ಎಂದ ಅವರು, ಈಗಾಗಲೇ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಈಗಾಗಲೇ ಸರ್ಕಾರಿ ಪ್ರೌಢಶಾಲೆಗಳಲ್ಲಿ ವಿಶೇಷ ತರಗತಿಗಳು, ವಿಶೇಷ ಪರೀಕ್ಷೆ ಸೇರಿದಂತೆ ನಾನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ವಿವರಿಸಿದ್ದಾರೆ.

Advertisement

ಸಂಜೆಯ ಸಮಯದಲ್ಲಿ ಕೆಲವರ ಮನೆಗಳಲ್ಲಿ ವಿದ್ಯುತ್‌ ಸಮಸ್ಯೆ ಹಾಗೂ ಇನ್ನಿತರ ಸಮಸ್ಯೆಗಳು ಒಂದೆಡೆಯಾದರೆ ಮತ್ತೂಂದೆಡೆ ಧಾರಾವಾಹಿಗಳ ಕಿರಿಕಿರಿ ಮತ್ತೂಂದೆಡೆ; ಹೀಗಾಗಿ ಮಕ್ಕಳು ಸಂಜೆಯ ಹೊತ್ತು ಅಧ್ಯಯನ ಮಾಡಲು ಅನಾನುಕೂಲ ಉಂಟಾಗುತ್ತಿದೆ. ಆದ ಕಾರಣ ಅವರ ಶಾಲೆಗಳಲ್ಲಿಯೇ ಅಧ್ಯಯನಕ್ಕಾಗಿ ಈ ಓದಿನ ಮನೆ ನೆಪದಲ್ಲಿ ಕೊಠಡಿ ಸ್ಥಾಪಿಸುವುದರ ಮೂಲಕ ಅನುಕೂಲ ಮಾಡಿಕೊಡಲು ನಿರ್ಧರಿಸಲಾಗಿದೆ. ಈ ಓದಿನ ಮನೆಗಳು ಎಸ್ಸೆಸ್ಸೆಲ್ಸಿ ಪರೀಕ್ಷೆಯವರೆಗೆ ನಡೆಯಲಿವೆ ಎಂದು ತಿಳಿಸಿದ್ದಾರೆ.

ಕ್ಷೇತ್ರ ಶಿಕ್ಷಣಾ ಧಿಕಾರಿಗಳು ಈ ಓದಿನ ಮನೆ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಕುರಿತು ತಮ್ಮ ವ್ಯಾಪ್ತಿಯ ಶಾಲೆಗಳ ಮುಖ್ಯಗುರುಗಳಿಗೆ ಹಾಗೂ ಶಿಕ್ಷಕರಿಗೆ ಸೂಚಿಸಬೇಕು ಎಂದು ಹೇಳಿದ್ದಾರೆ. ಈ ಎಲ್ಲ ಕ್ರಮಗಳಿಂದಾಗಿ ಬಳ್ಳಾರಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ ಈ ಬಾರಿ ಮತ್ತಷ್ಟು ಸುಧಾರಣೆಯಾಗಲಿದೆ ಎಂಬ ಆಶಾಭಾವವನ್ನು ಅವರು ವ್ಯಕ್ತಪಡಿಸುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next