Advertisement

ಗುಣಾತ್ಮಕ ಶಿಕ್ಷಣದಿಂದ ವೈಜ್ಞಾನಿಕ ಮನೋಭಾವ

03:53 PM Aug 11, 2019 | Team Udayavani |

ಬಳ್ಳಾರಿ: ನಗರದಲ್ಲಿ ಇಂಡಿಯಾ ಮಾರ್ಚ್‌ ಫಾರ್‌ ಸೈನ್ಸ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ವಿಜ್ಞಾನಕ್ಕಾಗಿ ಭಾರತ’ ಎಂಬ ಮೂರನೇ ಆವೃತ್ತಿಯ ನಡಿಗೆ ಶನಿವಾರ ಯಶಸ್ವಿಯಾಗಿ ನಡೆಯಿತು.

Advertisement

ನಗರದ ನಗರೂರು ನಾರಾಯಣರಾವ್‌ ಉದ್ಯಾನವನ (ಕಾಗೆಪಾರ್ಕ್‌)ದಿಂದ ಆರಂಭವಾದ ನಡಿಗೆಯು ಗಡಗಿ ಚನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಮೀನಾಕ್ಷಿ ವೃತ್ತ, ತಾಲೂಕು ಕಚೇರಿವರೆಗೆ ಮೆರವಣಿಗೆ ನಡೆಸಲಾಯಿತು.

ನಡಿಗೆಗೆ ಚಾಲನೆ ನೀಡಿದ ಅಲ್ಲಂ ಸುಮಂಗಳಮ್ಮ ಕಾಲೇಜು ಪ್ರಾಚಾರ್ಯ ಗೋವಿಂದರಾಜುಲು ಮಾತನಾಡಿ, ಸಮಗ್ರ ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇ.3ರಷ್ಟು ಹಣವನ್ನು ವೈಜ್ಞಾನಿಕ ಸಂಶೋಧನೆಗಳಿಗೆ ವಿನಿಯೋಗಿಸಬೇಕು. ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಲು ಪ್ರಾಯೋಗಿಕ, ಗುಣಾತ್ಮಕ ಶಿಕ್ಷಣ ಸಹಕಾರಿಯಾಗಲಿದೆ. ಅವೈಜ್ಞಾನಿಕ ಮೂಢನಂಬಿಕೆ ಮತ್ತು ಕಂದಾಚಾರಗಳಿಂದ ಜನರು ಹೊರಬರಬೇಕು ಎಂದರು.

ವಿಜ್ಞಾನ ಕೇವಲ ಕಲಿಕೆಗಲ್ಲ. ಇದು ಜೀವನದ ಭಾಗವಾಗಬೇಕು. ವಿಜ್ಞಾನದ ದಂತ ಕಥೆಗಳಾದ ಚಾಲ್ಸ್ರ್ ಡಾರ್ವಿನ್‌ ಅವರು ತಮ್ಮ ಸುತ್ತಲಿನ ಪರಿಸರವನ್ನೇ ಪ್ರಯೋಗ ಶಾಲೆಯನ್ನಾಗಿ ಬಳಸಿಕೊಂಡಿದ್ದರು. ಸೂಕ್ಷ ್ಮವಾಗಿ ಗಮನಿಸಿ ಅದರಿಂದ ವಿಕಾಸವಾದ ಸಿದ್ಧಾಂತವನ್ನೇ ಪ್ರತಿಪಾದಿಸಿದರು. ಅದರಂತೆಯೇ ಮೆಂಡಲ್ರವರು ತಳಿ ಶಾಸನವನ್ನು ಅಭಿವೃದ್ಧಿಪಡಿಸಿದರು. ಹಾಗಾಗಿ ವಿಜ್ಞಾನ ವ್ಯಾಸಂಗ ಮಾಡುವ ಪ್ರತಿ ವಿದ್ಯಾರ್ಥಿಗಳಿಗೂ ಗಮನಿಸುವ ಕುತೂಹಲ ಹೊಂದಿರಬೇಕು ಎಂದು ವಿವರಿಸಿದರು.

ಬ್ರೇಕ್‌ ಥ್ರೂ ಸೈನ್ಸ್‌ ಸೊಸೈಟಿಯ ಸಲೆಹಗಾರ ಡಾ| ಪ್ರಮೋದ ಮಾತನಾಡಿ, ವಿಜ್ಞಾನದ ಚಳವಳಿ ನಿರಂತರವಾಗಿ ಹಮ್ಮಿಕೊಳ್ಳಬೇಕು. ಜೀವನದ ಪ್ರಶ್ನೆಗಳಿಗೆ ಉತ್ತರ ಕೊಡುವುದು ವಿಜ್ಞಾನ. ಅಂಧಭಕ್ತಿಯಿಂದ ಹೊರ ಬಂದು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಜೀವನ ನಡೆಸಬೇಕು. ಸಂಶೋಧನಾ ಕಾರ್ಯಗಳಲ್ಲಿ ಅಮೋಘ ಸಾಧನೆ ಮಾಡಿರುವ ದೇಶಗಳಲ್ಲಿ ಶಿಕ್ಷಣಕ್ಕೆ ಜಿಡಿಪಿಯ ಶೇ.6 ಮತ್ತು ವಿಜ್ಞಾನಕ್ಕೆ ಶೇ.3ವರೆಗೆ ಆರ್ಥಿಕ ಸಹಾಯ ಒದಗಿಸಲಾಗುತ್ತಿದೆ. ಆದರೆ ಭಾರತದಲ್ಲಿ ಇದು ಕ್ರಮವಾಗಿ ಶೇ.3 ಮತ್ತು ಶೇ.1ಕ್ಕಿಂತ ಕಡಿಮೆ ಇದೆ. ಹಲವು ದಶಕಗಳಿಂದ ಈ ಪರಿಸ್ಥಿತಿ ಇದೆ ಎಂದು ವಿಷಾದ ವ್ಯಕ್ತಪಡಿಸಿದರು.

Advertisement

ನಡಿಗೆಯಲ್ಲಿ ಜಗದೀಶ್‌ ನೇಮಕಲ್ ಅಧ್ಯಕ್ಷತೆ ವಹಿಸಿದ್ದರು. ವಿಮ್ಸ್‌ ಪ್ರಾಧ್ಯಾಪಕ ಡಾ.ಪುಷ್ಪಾ, ಉಪನ್ಯಾಸಕರಾದ ನರಸಣ್ಣ, ವೀರಭದ್ರಪ್ಪ, ಪಂಚಾಕ್ಷರಿ, ಅಕ್ಕಿ ಮಲ್ಲಿಕಾರ್ಜುನ, ಡಾ| ಸುಚೇತಾ ಪೈ, ರೇಖಾ, ಸುರೇಶ್‌ ಮತ್ತಿತರರಿದ್ದರು. ವಿವಿಧ ಕಾಲೇಜುಗಳ ವಿಜ್ಞಾನದ ನೂರಾರು ವಿದ್ಯಾರ್ಥಿಗಳು ನಡಿಗೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next