ಬಳ್ಳಾರಿ: ಸೂಕ್ತ ವ್ಯಾಯಾಮ ಹಾಗೂ ಸಮತೋಲನ ಆಹಾರ ಸೇವಿಸುವುದರ ಜೊತೆಗೆ ಅತಿಯಾದ ಕೊಬ್ಬಿನಾಂಶವುಳ್ಳ ಪದಾರ್ಥಗಳನ್ನು ಮಿತವಾಗಿ ಸೇವನೆ ಮಾಡುವದರಿಂದ ಮಧುಮೇಹ ಕಾಯಿಲೆಗಳನ್ನು ತಡೆಗಟ್ಟಬಹುದಾಗಿದೆ ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್.ದಾಸಪ್ಪನವರ ತಿಳಿಸಿದರು.
ಜಿಲ್ಲೆಯ ತೋಣಗಲ್ನ ಶ್ರೀ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಆರೋಗ್ಯ ವಸ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ಸಕ್ಕರೆ ಕಾಯಿಲೆಗೆ ತುತ್ತಾಗುತ್ತಿರುವುದು ಅತ್ಯಂತ ಆತಂಕಕಾರಿ ವಿಷಯವಾಗಿದೆ. ಈ ಹಿನ್ನೆಲೆಯಲ್ಲಿ 30 ವರ್ಷ ಮೇಲ್ಪಟ್ಟವರು ಪ್ರತಿ 6 ತಿಂಗಳಿಗೊಮ್ಮೆ ರಕ್ತ ಪರೀಕ್ಷೆ ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕು. ಸಾಮಾನ್ಯವಾಗಿ ವಂಶಪಾರಂಪರ್ಯವಾಗಿ / ಅನುವಂಶಿಕವಾಗಿ, ಆರೋಗ್ಯಕರವಾದ ಆಹಾರವನ್ನು ಸೇವನೆ ಮಾಡದೇ ಇರುವುದರಿಂದ, ಅತಿಯಾದ ಬೊಜ್ಜು ಬರುವುದರಿಂದ, ದೈಹಿಕ ಚಟುವಟಿಕೆ ಹಾಗೂ ಕ್ರೀಡಾ ಚಟುವಟಿಕೆ ಕಡಿಮೆ ಆದಾಗ ಸಕ್ಕರೆ ಕಾಯಿಲೆ ಬರುತ್ತದೆ. ದಾಹ, ಹಸಿವು, ಮಸುಕಾದ ದೃಷ್ಟಿ, ಸಣ್ಣಗಾಗುವುದು, ಪದೇ ಪದೇ ಮೂತ್ರ ವಿಸರ್ಜನೆ, ಬೆವರುವುದು, ತಲೆನೋವು, ತಲೆ ತಿರುಗುವುದು, ನಡುಕ ಮನಸ್ಸಿನ ಬದಲಾವಣೆಗಳು ಇವು ಸಕ್ಕರೆ ಕಾಯಿಲೆಯ ಲಕ್ಷಣಗಳಾಗಿವೆ ಎಂದು ವಿವರಿಸಿದರು.
ಶಾಲಾ ಮುಖ್ಯಗುರು ಎಂ.ವಿ. ಹುರಿಕಡ್ಲಿ ಅವರು ಮಾತನಾಡಿ, ಆಹಾರದಲ್ಲಿ ತರಕಾರಿಗಳಿಗೆ ಹೆಚ್ಚು ಆದ್ಯತೆ ನೀಡುವ ಜೊತೆಗೆ ಎಣ್ಣೆ ಪದಾರ್ಥ ಸೇವನೆಯನ್ನು ತ್ಯಜಿಸುವುದರಿಂದ ಮತ್ತು ನಮ್ಮ ದೈನಂದಿನ ಕೆಲಸಗಳನ್ನು ಹೆಚ್ಚು ಮಾಡುವುದರಿಂದ ಮಧುಮೇಹ ರೋಗವನ್ನು ತಡೆಗಟ್ಟಬಹುದಾಗಿದೆ. ಶಾಲಾ ಬಿಸಿ ಊಟದಲ್ಲಿ ನೀಡುವ ಯಾವುದೇ ತರಕಾರಿಗಳನ್ನು ಚೆಲ್ಲದಂತೆ ವಿದ್ಯಾರ್ಥಿಗಳಲ್ಲಿ ವಿನಂತಿಸಿದರು.
ಇದೆ ವೇಳೆ ಪೌಷ್ಟಿಕ ಆಹಾರ ಪ್ರಾತ್ಯಕ್ಷತೆ, ಡೆಂಗ್ಯೂ, ಚಿಕೂನ್ ಗುನ್ಯಾ, ಕುಷ್ಠರೋಗ, ಕ್ಷಯರೋಗ, ತಾಯಿ ಮಗುವಿನ ಆರೈಕೆ, ಪ್ಲೋರೊಸಿಸ್ ನಿಯಂತ್ರಣ, ಮಾನಸಿಕ ಕಾಯಿಲೆ, ರಕ್ತದಾನ, ನೇತ್ರದಾನ, ಹೆಚ್.ಐ.ವಿ, ಹೆಚ್1 ಎನ್1, ಜಂತುಹುಳು ನಿವಾರಣಾ, ಶುಚಿ, ಸ್ನೇಹ ಕ್ಲಿನಿಕ್, ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಮುಂತಾದವುಗಳ ಕುರಿತು ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಲಾ ಮಕ್ಕಳಿಗೆ ಭಿತ್ತಿ ಚಿತ್ರಗಳು ಹಾಗೂ ವಿಡಿಯೋ ಪ್ರದರ್ಶನದ ಮೂಲಕ ಆರೋಗ್ಯ ಜಾಗೃತಿ ಮೂಡಿಸಲಾಯಿತು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಅವರು ಸ್ವಾಗತಿಸಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರುಗಳಾದ, ಆರ್.ಬಿ.ನಾಯಕ್. ಧರಿಯಪ್ಪ, ಎಚ್.ಎಂ. ಉಮಾ, ಹೇಮಪ್ರಭ, ಶ್ರೀದೇವಿ, ಹೆಚ್.ಎಂ.ಶರಣಬಸವ, ವಿಜಯಲಕ್ಷ್ಮೀ, ಗಣೇಶ್, ಯಶೋಧಾ, ಆರೋಗ್ಯ ಇಲಾಖೆ ಸಿಬ್ಬಂದಿ ನರಸಿಂಹಮೂರ್ತಿ, ಮಲ್ಲೇಶ್, ಗೌಸ್ ಪಾಷಾ, ಚಿದಾನಂದ ಹಾಗೂ ಆಶಾ ಕಾರ್ಯಕರ್ತೆಯರಾದ ನೀಲಮ್ಮ, ತಿಮ್ಮಕ್ಕ, ವಿಜಯಶಾಂತಿ, ಆಶಾ, ಮಾಳಮ್ಮ, ತೇಜಮ್ಮ, ವೆಂಕಟಲಕ್ಷ್ಮೀ, ಹುಲಿಗೆಮ್ಮ, ಪದ್ಮಾವತಿ, ಬಸಮ್ಮ, ಗೋವಿಂದಮ್ಮ, ಸುಮಂಗಳ, ಲಕ್ಷ್ಮೀ, ರಾಜೇಶ್ವರಿ ಮತ್ತು ಶಾಲಾ ವಿದ್ಯಾರ್ಥಿಗಳು ಇದ್ದರು.