Advertisement

ಉತ್ಸವಕ್ಕಾಗಿ ಅಂದು ಹೋರಾಟ ಇಂದು ಮೌನ!

01:25 PM Oct 17, 2019 | Naveen |

„ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ಕಳೆದ ವರ್ಷದಂತೆ ಈ ಬಾರಿಯೂ ಐತಿಹಾಸಿಕ ಹಂಪಿ ಉತ್ಸವ ಆಚರಣೆ ಬಗ್ಗೆ ಸರಕಾರದಿಂದ ಅಧಿಕೃತ ಘೋಷಣೆಯಾಗದಿದ್ದರೂ ಜಿಲ್ಲಾಡಳಿತ ಈ ಬಗ್ಗೆ ಚಕಾರವೆತ್ತದಿದ್ದರೂ ಕಲಾವಿದರು, ಜನಪ್ರತಿನಿಧಿಗಳು ಸುಮ್ಮನಿರುವುದು ಅಚ್ಚರಿ ಮೂಡಿಸಿದೆ.

Advertisement

ಕಳೆದ ನಾಲ್ಕು ದಶಕಗಳಿಂದ ನಡೆಯುತ್ತಿರುವ ಹಂಪಿ ಉತ್ಸವ ಆಚರಣೆಗೆ ಕಳೆದ ಕೆಲ ವರ್ಷಗಳಿಂದ ಬರದ ನೆಪವೊಡ್ಡಲಾಗುತ್ತಿದೆ. 2018ರಲ್ಲೂ ಬರ, ಉಪಚುನಾವಣೆ ನೆಪವೊಡ್ಡಿ ಉತ್ಸವ ಮುಂದೂಡಲು ನಿರ್ಧರಿಸಲಾಗಿತ್ತು. ಆಗ ಸರ್ಕಾರ, ಜಿಲ್ಲಾಡಳಿತದ ವಿರುದ್ಧ ಸ್ಥಳೀಯ ಕಲಾವಿದರು, ಕನ್ನಡಪರ ಸಂಘಟನೆಗಳ ಸದಸ್ಯರು, ಸ್ವಾಮೀಜಿಗಳು ರಸ್ತೆಗಿಳಿದು ಪ್ರತಿಭಟನೆ ನಡೆಸಿದ್ದರು. ಶಾಸಕ ಜಿ. ಸೋಮಶೇಖರರೆಡ್ಡಿ ಸೇರಿದಂತೆ ಕೆಲವರು ಹಂಪಿ ಉತ್ಸವ ಆಚರಣೆಗೆ ಹಣದ ತೊಂದರೆಯಾಗಿದ್ದರೆ ಭಿಕ್ಷೆ ಬೇಡಿ ನೀಡುವುದಾಗಿ ಹೇಳಿದ್ದರು.

ಬಳ್ಳಾರಿಯ ಕೆಲ ಕಲಾವಿದರ ಸಂಘಟನೆಗಳು ಹೊಸಪೇಟೆಯಿಂದ ಹಂಪಿಗೆ ಪಾದಯಾತ್ರೆ ನಡೆಸಿ ಹಂಪಿ ಉತ್ಸವವನ್ನು ಯಾವುದೇ ಕಾರಣಕ್ಕೂ  ಬಿಡದೆ ಸರಳವಾಗಿಯಾದರೂ ಆಚರಿಸಬೇಕು ಎಂದು ಒತ್ತಾಯಿಸಿದ್ದವು. ಇದಕ್ಕೆ ಮಣಿದಿದ್ದ ಅಂದಿನ ಜಿಲ್ಲಾ ಉಸ್ತುವಾರಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ. ಶಿವಕುಮಾರ್‌, ಅಂದಿನ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿ ಎರಡು ದಿನ ಉತ್ಸವ ಆಚರಿಸುವುದಾಗಿ ಘೋಷಿಸಿದ್ದರು.

ನಿಗದಿ ಪಡಿಸಿದ್ದ ದಿನಾಂಕವನ್ನು ಒಂದೆರಡು ಬಾರಿ ಮುಂದೂಡಿದರೂ ಕೊನೆಗೆ 2019 ಮಾ. 2,3ರಂದು ಸರಳವಾಗಿ ಹಂಪಿ ಉತ್ಸವ ಆಚರಿಸಲಾಯಿತು. ಆದರೆ, ಈ ಬಾರಿಯೂ ಉತ್ಸವ ಆಚರಣೆಗೆ ಸರ್ಕಾರ, ಜಿಲ್ಲಾಡಳಿತ ಮೀನಮೇಷ ಎಣಿಸುತ್ತಿದ್ದರೂ ಕಲಾವಿದರು, ಕನ್ನಡಪರ ಸಂಘಟನೆಗಳು, ಸ್ವಾಮೀಜಿಗಳು ಮೌನವಾಗಿರುವುದು ಮಾತ್ರ ಕುತೂಹಲ ಮೂಡಿಸಿದೆ.

ಉತ್ಸವಕ್ಕೆ ಅಡ್ಡಿಯಾಗದ ಚುನಾವಣೆ: ಪ್ರತಿವರ್ಷ ನವೆಂಬರ್‌ 3,4,5 ರಂದು ಮೂರು ದಿನ ಉತ್ಸವ ನಡೆಯುತ್ತೆ. ಈ ಬಾರಿ ವಿಜಯನಗರ ಕ್ಷೇತ್ರದ ಉಪಚುನಾವಣೆ ಪ್ರಕ್ರಿಯೆ ನವೆಂಬರ್‌ ಎರಡನೇ ವಾರದಿಂದ ಆರಂಭವಾಗಿ ನೀತಿ ಸಂಹಿತೆ ಜಾರಿಗೆ ಬರಲಿದೆ. ಹೀಗಾಗಿ ಹಂಪಿ ಉತ್ಸವ ಆಚರಣೆಗೆ ನೀತಿ ಸಂಹಿತೆ ಅಡ್ಡಿಯಾಗದಿದ್ದರೂ, ಜಿಲ್ಲಾಡಳಿತ ಮಾತ್ರ ಮೀನಮೇಷ ಎಣಿಸುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿಯವರು ಸೆ. 17ರಂದು ಕಲ್ಯಾಣ ಕರ್ನಾಟಕದ ಧ್ವಜಾರೋಹಣಕ್ಕೆಂದು ಜಿಲ್ಲೆಗೆ ಆಗಮಿಸಿದ್ದವರು ಪುನಃ ಇತ್ತ ಮುಖಮಾಡದಿರುವುದು ಸಹ ಹಂಪಿ ಉತ್ಸವ ಆಚರಣೆಗೆ ಹಿನ್ನಡೆಯಾಗಿದೆ.

Advertisement

ಶಾಸಕರು ಸೈಲೆಂಟ್‌: ಉತ್ಸವ ಆಚರಣೆ ಕುರಿತು ಕಳೆದ ಬಾರಿ ಧ್ವನಿ ಎತ್ತಿದ್ದ ಶಾಸಕ ಜಿ. ಸೋಮಶೇಖರ
ರೆಡ್ಡಿಯವರು ಈ ಬಾರಿ ಸೈಲೆಂಟ್‌ ಆಗಿದ್ದಾರೆ. ಇದಲ್ಲದೆ ಜಿಲ್ಲೆಯ ನಾಲ್ವರು ಕಾಂಗ್ರೆಸ್‌ ಶಾಸಕರು ಸಹ ಸರ್ಕಾರದ ವಿರುದ್ಧ ಧ್ವನಿ ಎತ್ತದೆ ಕೈಕಟ್ಟಿ ಕುಳಿತಿರುವುದು ಜಿಲ್ಲೆಯ ಜನರಲ್ಲಿ ಬೇಸರ ಮೂಡಿಸಿದೆ. ಇನ್ನಾದರೂ ಶಾಸಕರೆಲ್ಲ ಎಚ್ಚೆತ್ತು ಹಂಪಿ ಉತ್ಸವ ಆಚರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುತ್ತಾರೊ ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next