Advertisement

ಹಂಪಿ ಉತ್ಸವ 3 ದಿನವಾಗಲಿ

12:50 PM Oct 26, 2019 | Naveen |

ಬಳ್ಳಾರಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿರುವ ಹಂಪಿ ಉತ್ಸವ ಬಗ್ಗೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ  ಧೋರಣೆಯನ್ನು ಖಂಡಿಸಿ ಎರಡು ದಿನಗಳ ಬದಲಿಗೆ ಮೂರು ದಿನಗಳು ಆಚರಿಸಬೇಕು ಎಂದು ಒತ್ತಾಯಿಸಿ ಮಾಜಿ ಸಂಸದ ವಿ.ಎಸ್‌. ಉಗ್ರಪ್ಪ ನೇತೃತ್ವದಲ್ಲಿ ಜಿಲ್ಲಾ ಕಲಾವಿದರ ವೇದಿಕೆ, ವಿವಿಧ ಸಂಘಟನೆಗಳ ಕಲಾವಿದರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.

Advertisement

ಮೈಸೂರು ದಸರಾ ಉತ್ಸವಕ್ಕೆ ಪ್ರೇರಣೆ ನೀಡಿದ ಹಂಪಿ ಉತ್ಸವವನ್ನು ಸರ್ಕಾರ ಆಚರಿಸಲೇಬೇಕು. ಮೈಸೂರು ದಸರಾ, ಕಿತ್ತೂರು ಉತ್ಸವಕ್ಕೆ ಇಲ್ಲದ ಬರ, ನೆರೆಯ ನೆಪ ಕೇವಲ ಹಂಪಿ ಉತ್ಸವ ಆಚರಣೆಗೆ ಏಕೆ ಎಂದು ಪ್ರಶ್ನಿಸಿರುವ ಪ್ರತಿಭಟನಾನಿರತ ಕಲಾವಿದರು, ರಾಜ್ಯ ಸರ್ಕಾರ ಕೂಡಲೇ ಹಂಪಿ ಉತ್ಸವ ಆಚರಣೆಗಾಗಿ ಸ್ಥಳೀಯ ಕಲಾವಿದರು, ಸಾಹಿತಿಗಳು, ವಿದ್ವಾಂಸರನ್ನು ಒಗ್ಗೂಡಿಸಿ, ಎರಡು ದಿನಗಳ ಕಾಲ ಸರಳವಾಗಿ ಹಂಪಿ ಉತ್ಸವ ಆಚರಿಸುವ ಮೂಲಕ ವಿಜಯನಗರ ಸಾಮ್ರಾಜ್ಯ ಮತ್ತು ಜಿಲ್ಲೆಗೆ ಅವಮಾನಿಸಲಾಗುತ್ತಿದೆ. ಹಾಗಾಗಿ ಕೂಡಲೇ ರಾಜ್ಯ ಸರ್ಕಾರ ಕೈಗೊಂಡಿರುವ ಹಂಪಿ ಉತ್ಸವ ಎರಡು ದಿನಗಳ ಆಚರಣೆ ನಿರ್ಧಾರವನ್ನು ಬದಲಿಸಿ ಪ್ರತಿವರ್ಷದಂತೆ ಮೂರು ದಿನಗಳ ಕಾಲ ಆಚರಿಸಲು ನಿರ್ಣಯ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಹಂಪಿ ಉತ್ಸವ ಆಚರಣೆಗಾಗಿ ಪ್ರತಿವರ್ಷ 10 ಕೋಟಿ ರೂ. ಮೀಸಲಿಡಬೇಕು. ಪ್ರತಿ ನವೆಂಬರ್‌ 3,4,5 ರಂದು ಮೂರು ದಿನಗಳ ಕಾಲ ಆಯೋಜಿಸಬೇಕು. ಹೆಚ್ಚಿನ ಪ್ರಮಾಣದಲ್ಲಿ ಸ್ಥಳೀಯ ಮತ್ತು ರಾಜ್ಯ ಕಲಾವಿದರಿಗೆ ಅಕವಾಶ ನೀಡಬೇಕು. ಇಲ್ಲಿನ ಜನರ ಭಾವನೆಗೆ ಧಕ್ಕೆಯಾಗಂತೆ ವಿಜಯನಗರ ಕಾಲದ ಗತವೈಭವ ಸಾರುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಂಪಿ ಉತ್ಸವ ಆಯೋಜನೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಒತ್ತಾಯಿಸಿದರು. ಬಳಿಕ ಅಪರ ಜಿಲ್ಲಾಧಿಕಾರಿ ಎಂ. ಸತೀಶ್‌ ಕುಮಾರ್‌ಗೆ ಮನವಿ ಸಲ್ಲಿಸುವ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ರವಾನಿಸಿದರು.

ಪ್ರತಿಭಟನೆಯಲ್ಲಿ ಕಸಾಪ ಜಿಲ್ಲಾಧ್ಯಕ್ಷ ಸಿದ್ದರಾಮಕಲ್ಮಠ, ಅಭಿನಯ ಕಲಾಕೇಂದ್ರದ ಅಧ್ಯಕ್ಷ ಕೆ. ಜಗದೀಶ್‌, ವಕೀಲರ ಸಂಘದ ಜಿಲ್ಲಾಧ್ಯಕ್ಷ ಅಂಕಲಯ್ಯ, ವಿವಿಧ ಸಂಘಟನೆಗಳ ಮುಖಂಡರಾದ ಸಿದ್ಮಲ್‌ ಮಂಜುನಾಥ್‌, ಅಣ್ಣಾಜಿ ಕೃಷ್ಣಾರೆಡ್ಡಿ, ರಾಮೇಶ್ವರ, ಶಾಂತಲಾ, ರಘು, ವೆಂಕೋಬಾಚಾರ್‌, ಚಂದ್ರಶೇಖರ್‌ ಆಚಾರ್‌, ಕುಂದಾಪುರ ನಾಗರಾಜ್‌, ಕಾಂಗ್ರೆಸ್‌ ಮುಖಂಡರಾದ ವೆಂಕಟೇಶ್‌ ಹೆಗಡೆ, ಪ್ರಭಂಜನ್‌ ಕುಮಾರ್‌, ಮಲ್ಲಿಕಾರ್ಜುನ, ಹನುಮಂತರೆಡ್ಡಿ, ರಾಜು, ಮಾರುತಿ ಸೇರಿದಂತೆ ಹಲವಾರು ಕಲಾವಿದರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next