Advertisement

ಹಂಪಿ ಉತ್ಸವಕ್ಕಿಲ್ಲಹಣದ ಕೊರತೆ: ಸವದಿ

03:44 PM Oct 23, 2019 | |

ಬಳ್ಳಾರಿ: ಚುನಾವಣಾ ನೀತಿ ಸಂಹಿತೆ, ಬರ ನಾನಾ ಕಾರಣಗಳಿಂದ ಮುಂದೂಡಿಕೆಯಾಗುತ್ತಲೇ ಬಂದಿದ್ದ ಈ ವರ್ಷದ ಹಂಪಿ ಉತ್ಸವವನ್ನು 2020 ಜ.11ಮತ್ತು 12ರಂದು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ಉಪಮುಖ್ಯಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಹೇಳಿದರು.

Advertisement

ನಗರದ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ತ್ತೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ, ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕರು, ಸಂಸದರ ಅಭಿಪ್ರಾಯಗಳನ್ನು ಆಲಿಸಿದ ಬಳಿಕ ಜನವರಿ 11,12 ರಂದು ಹಂಪಿ ಉತ್ಸವವನ್ನು ಆಚರಿಸುವುದಾಗಿ ದಿನಾಂಕವನ್ನು ಪ್ರಕಟಿಸಿದರು.

ಪ್ರಸಕ್ತ ವರ್ಷದ ಹಂಪಿ ಉತ್ಸವವನ್ನು ಕೆಲ ಕಾರಣಗಳಿಂದ ಮಾತ್ರ ಜನವರಿಯಲ್ಲಿ ನಡೆಯಲಿದ್ದು, ಮುಂದಿನ ವರ್ಷದ ಉತ್ಸವ ನವೆಂಬರ್‌ ತಿಂಗಳಲ್ಲಿಯೇ ಮೂರು ದಿನಗಳ ಕಾಲ ನಡೆಸಲಾಗುವುದು ಎಂದು ಭರವಸೆ ನೀಡಿದರು.

ಉತ್ಸವಕ್ಕೆ ಹಣದ ಕೊರತೆ ಇಲ್ಲ. ಈ ಕುರಿತ ವಿವರನ್ನು ಜಿಲ್ಲಾಡಳಿತದಿಂದ ಪಡೆದುಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಹಣ ಬಿಡುಗಡೆ ಮಾಡಿಸಲಾಗುವುದು. ಅದಕ್ಕೆ ಬೇಕಾದ ಅಗತ್ಯ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿಕೊಳ್ಳಲಿದೆ. ಈ ಉತ್ಸವಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೇ ನೋಡಲ್‌ ಇಲಾಖೆ ಇರುವುದರಿಂದ ಇಲ್ಲಿ ಅಧಿಕಾರಿಗಳಿರದ ಕಾರಣ ಕೂಡಲೇ ಇಲ್ಲಿಗೆ ಒಬ್ಬರನ್ನು ನಿಯೋಜಿಸುವಂತೆ ಸಚಿವರಿಗೆ ತಿಳಿಸಲಾಗುವುದು ಎಂದು ಹೇಳಿದರು.

ಶಾಸಕರಾದ ಬಿ.ನಾಗೇಂದ್ರ, ಸೋಮಶೇಖರರೆಡ್ಡಿ, ತುಕಾರಾಂ, ಕರುಣಾಕರರೆಡ್ಡಿ ಸೇರಿದಂತೆ ಇನ್ನಿತರ ಶಾಸಕರು ಮೈಸೂರು ದಸರಾ ಉತ್ಸವ ಆರಂಭಕ್ಕೆ ಮುನ್ನುಡಿ ಹಾಕಿದ್ದೇ ನಮ್ಮ ವಿಜಯನಗರದ ಸಾಮ್ರಾಜ್ಯದ ಉತ್ಸವ. ನಮ್ಮ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಬೇಕು ಎಂದರು.

Advertisement

ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದರಾಮ ಕಲ್ಮಠ ಅವರು ರಾಜ್ಯದಲ್ಲಿ ಎಲ್ಲ ಉತ್ಸವಗಳು ಸರಿಯಾದ ಸಮಯಕ್ಕೆ ನಡೆಯುತ್ತವೆ, ಆದರೇ ನಮ್ಮ ಹಂಪಿ ಉತ್ಸವದ ವಿಷಯದಲ್ಲಿ ಯಾಕಿಷ್ಟು ನಿರ್ಲಕ್ಷ್ಯ. ಎರಡು ದಿನದ ಬದಲಿಗೆ ಮೂರು ದಿನ ಆಚರಿಸುವಂತೆ ಕೋರಿದರು. ಜಿಲ್ಲಾ ಧಿಕಾರಿ ಎಸ್‌.ಎಸ್‌.ನಕುಲ್‌ ಅವರು ಸಭೆಯಲ್ಲಿ ಹಂಪಿ ಉತ್ಸವದ ವಿಷಯ ಪ್ರಸ್ತಾಪಿಸಿದರು.

ಗಡ್ಕರಿ ಬಳಿ ದೂರು ನೀಡಲು ನಿರ್ಧಾರ: ಹೊಸಪೇಟೆ-ಬಳ್ಳಾರಿ ಮಾರ್ಗದ ರಸ್ತೆ ನಿರ್ಮಿಸುತ್ತಿರುವ ಗ್ಯಾಮನ್‌ ಕಂಪನಿ ವಿರುದ್ಧ ಶಾಸಕರೆಲ್ಲರೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪ್ರಸಂಗ ನಡೆಯಿತು. ಅತ್ಯಂತ ನಿಧಾನಗತಿಯಿಂದ ಕಾಮಗಾರಿ ನಡೆಯುತ್ತಿದೆ. ಟೆಂಡರ್‌ ನಲ್ಲಿರುವ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ; ಈ ಕುರಿತು ಸಮರ್ಪಕ ಉತ್ತರ ನೀಡುತ್ತಿಲ್ಲ ಎಂಬುದು ಸೇರಿದಂತೆ ಅನೇಕ ವಿಷಯಗಳನ್ನು ಪ್ರಸ್ತಾಪಿಸಿದರು.

ಜಿಲ್ಲಾಧಿಕಾರಿ ನಕುಲ್‌ ಸಹ ಈ ವಿಷಯಕ್ಕೆ ಸಹಮತ ವ್ಯಕ್ತಪಡಿಸಿದರು. ಇದು ತಾವು ನೇತೃತ್ವ ವಹಿಸಿದಲ್ಲಿ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯ; ಸಾಧ್ಯವಾದರೇ ಎಲ್ಲರೂ ಸೇರಿ ಕೇಂದ್ರ ಸಚಿವ ನಿತೀನ್‌ ಗಡ್ಕರಿ ಅವರನ್ನು ಭೇಟಿಯಾಗೋಣ ಎಂದು ಶಾಸಕರು ಹೇಳಿದರು.

ಶಾಸಕರ ಮಾತನ್ನು ಆಲಿಸಿದ ಡಿಸಿಎಂ ಲಕ್ಷ್ಮಣ ಸವದಿ ಅವರು ಮೊದಲಿಗೆ ಡಿಸಿಎಂ ಹಾಗೂ ಲೋಕೋಪಯೋಗಿ ಸಚಿವರಾದ ಗೋವಿಂದ ಕಾರಜೋಳ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಒಂದು ನಿರ್ಣಯ ಕೈಗೊಂಡು ನಂತರ ಕೇಂದ್ರ ಸಚಿವ ಗಡ್ಕರಿ ಅವರನ್ನು ಭೇಟಿಯಾಗಿ ಸಮಸ್ಯೆ ಪರಿಹರಿಸಲು ಪ್ರಯತ್ನಿಸೋಣ ಎಂದರು.

ಆರೋಗ್ಯ ಇಲಾಖೆಯ ಸಭೆ ಮಾಡಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರು ಇದೇ ಜಿಲ್ಲೆಯವರಾಗಿರುವುದರಿಂದ ಜಿಲ್ಲೆಯಲ್ಲಿನ ಆಸ್ಪತ್ರೆಗಳ ಸಮಸ್ಯೆ, ವೈದ್ಯರ ಸಮಸ್ಯೆ ಹಾಗೂ ಮೂಲಸೌಕರ್ಯ ಸೇರಿದಂತೆ ಆರೋಗ್ಯ ಇಲಾಖೆಯ ವಿವಿಧ ವಿಷಯಗಳ ಕುರಿತು ಸಚಿವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಡಿಸಿಎಂ ಸವದಿ ಅವರು ಸೂಚಿಸಿದರು.

ಎಂಬಿಬಿಎಸ್‌ ವೈದ್ಯರ ಕೊರತೆ ಕಾಡುತ್ತಿರುವುದನ್ನು ಸಭೆಯಲ್ಲಿ ಬಿಚ್ಚಿಟ್ಟ ಡಿಸಿ ನಕುಲ್‌ ಅವರು ಎಂಬಿಬಿಎಸ್‌ ಪದವಿಯ ಮೂಲ ಪ್ರಮಾಣಪತ್ರ ತೆಗೆದುಕೊಂಡು ಬಂದರೇ ಅವರಿಗೆ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ಜಿಲ್ಲೆಯಲ್ಲಿ ಖಾಲಿ ಇರುವ ಕಡೆ ನಿಯೋಜಿಸಲಾಗುವುದು ಎಂದರು. 50 ಸಾವಿರ ಸಂಬಳ ನೀಡಲಾಗುವುದು ಎಂದು ಸ್ಪಷ್ಟಪಡಿಸಿದರು.

ನರೇಗಾದಲ್ಲಿ ಜಿಲ್ಲೆ ಎರಡನೇ ಸ್ಥಾನ: 2019-20ನೇ ಸಾಲಿನ ಒಟ್ಟು 82ಲಕ್ಷ ಮಾನವ ದಿನಗಳನ್ನು ಸೃಜಿಸಲು ಗುರಿ ನಿಗದಿಪಡಿಸಲಾಗಿತ್ತು,ಅ.16ರವರೆಗೆ 65.34ಲಕ್ಷ ಮಾನವ ದಿನಗಳನ್ನು ಸೃಜಿಸಿ ಶೇ.80ರಷ್ಟು ಪ್ರಗತಿ ಸಾಧಿ ಸಲಾಗಿದೆ. ಅದೇ ರೀತಿ 360.71 ಕೋಟಿ ಆರ್ಥಿಕ ಗುರಿ ನಿಗದಿಪಡಿಸಿದ್ದು, ಅ.16ರವರೆಗೆ 226.51ಕೋಟಿ ವೆಚ್ಚ ಮಾಡಿದ್ದು ಶೇ. 63ರಷ್ಟು ಆರ್ಥಿಕ ಪ್ರಗತಿ ಸಾಧಿಸಿ ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದ್ದೇವೆ ಎಂದು ಜಿಪಂ ಸಿಇಒ ಕೆ.ನಿತೀಶ್‌ ಸಭೆಗೆ ವಿವರಿಸಿದರು.

738.38 ಕೋಟಿ ರೂ. ಅನುದಾನ ಹಂಚಿಕೆ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಯೋಜನೆಯಡಿಯಲ್ಲಿ 2013-14ನೇ ಸಾಲಿನಿಂದ 2019-20 ಸಾಲಿನವರೆಗೆ ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆ ಅಡಿಯಲ್ಲಿ ಬಳ್ಳಾರಿ ಜಿಲ್ಲೆಗೆ ಒಟ್ಟು 738.38 ಕೋಟಿ ಅನುದಾನ ಹಂಚಿಕೆಯಾಗಿದ್ದು, ಇಲ್ಲಿಯವರೆಗೆ ಒಟ್ಟು 3562 ಕಾಮಗಾರಿಗಳನ್ನು ಕೈಗೆತ್ತಿಕೊಂಡು ಈ ಪೈಕಿ 2108 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಡಿಸಿ ನಕುಲ್‌ ವಿವರಿಸಿದರು.

ಇತ್ತೀಚೆಗೆ ಉಂಟಾದ ಪ್ರವಾಹದಿಂದ ಬಾಧಿ ತರಾದ 804 ಕುಟುಂಬಗಳಿಗೆ ಬಟ್ಟೆ ಮತ್ತು ಪಾತ್ರೆ ಸಾಮಾನುಗಳು ಹಾನಿಯಾದ ಕಾರಣ ರೂ.10 ಸಾವಿರದಂತೆ ಒಟ್ಟು ರೂ.80.40 ಲಕ್ಷ ಪರಿಹಾರ ವಿತರಣೆ ಮಾಡಲಾಗಿದೆ. ಒಟ್ಟು 1018 ಮನೆಗಳಿಗೆ ರೂ.25 ಸಾವಿರದಂತೆ ರೂ.255.20 ಲಕ್ಷಗಳ ಪರಿಹಾರ ವಿತರಣೆ ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಸತೀಶಕುಮಾರ್‌ ಸಭೆಗೆ ವಿವರಿಸಿದರು.

ಕೃಷಿ, ತೋಟಗಾರಿಕೆ, ಜೆಸ್ಕಾಂ, ಕುಡಿಯುವ ನೀರು, ಲೋಕೋಪಯೋಗಿ, ನರೇಗಾ, ಸ್ವಚ್ಛ ಭಾರತ, ಆರೋಗ್ಯ, ಅರಣ್ಯ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಸು ದೀರ್ಘ‌ವಾಗಿ ಚರ್ಚಿಸಲಾಯಿತು.

ಸಂಸದರಾದ ವೈ.ದೇವೆಂದ್ರಪ್ಪ, ಕರಡಿ ಸಂಗಣ್ಣ, ಶಾಸಕರಾದ ಎಸ್‌.ವಿ.ರಾಮಚಂದ್ರ, ಬಿ.ನಾಗೇಂದ್ರ, ಕರುಣಾಕರರೆಡ್ಡಿ, ಸೋಮಶೇಖರರೆಡ್ಡಿ, ಈ.ತುಕಾರಾಂ, ಗಣೇಶ, ಸೋಮಲಿಂಗಪ್ಪ, ಅಲ್ಲಂವೀರಭದ್ರಪ್ಪ, ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಉಪಾಧ್ಯಕ್ಷೆ ದೀನಾ ಮಂಜನಾಥ್‌ ಸೇರಿದಂತೆ ಜಿಪಂ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಹಾಗೂ ಜಿಲ್ಲಾಮಟ್ಟದ ಅಧಿ ಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next