Advertisement

ಡ್ರಾಮಾ ಕೋರ್ಸ್‌ನ ಅಭ್ಯರ್ಥಿಗಳು ಅತಂತ್ರ

11:30 AM Jul 31, 2019 | Naveen |

ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ಮೂಲ ಸೌಲಭ್ಯಗಳು ಇಲ್ಲದಿದ್ದರೂ ನಾಟಕ ವಿಭಾಗ ಆರಂಭಿಸಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ ಡ್ರಾಮಾ ಡಿಪ್ಲೋಮಾ ಕೋರ್ಸ್‌ಗೆ ಅರ್ಜಿ ಸಲ್ಲಿಸಿದ ಬಳಿಕ ಅಭ್ಯರ್ಥಿಗಳನ್ನು ಬೇರೆಡೆ ತೆರಳುವಂತೆ ಅಥವಾ ಬೇರೆ ಕೋರ್ಸ್‌ ಆಯ್ದುಕೊಳ್ಳುವಂತೆ ಸೂಚಿಸಿದ್ದು, ವಿದ್ಯಾರ್ಥಿಗಳು ಈಗ ಅತಂತ್ರ ಪರಿಸ್ಥಿತಿ ಎದುರಿಸುವಂತಾಗಿದೆ.

Advertisement

ಬಳ್ಳಾರಿ ಜಿಲ್ಲೆ ಬಯಲಾಟ, ದೊಡ್ಡಾಟ, ರಂಗಭೂಮಿ ಕಲೆ, ಸಾಹಿತ್ಯದಿಂದ ಶ್ರೀಮಂತವಾಗಿದೆ. ಜಿಲ್ಲೆಯ ಕಲಾವಿದರು ಅಂತಾರಾಷ್ಟ್ರೀಯ ಮಟ್ಟದಲ್ಲೂ ಗುರುತಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ ಮಾಹಿತಿ ಒದಗಿಸುವುದರ ಜತೆಗೆ ಕಲೆ, ಕಲಾವಿದರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 2015ರಲ್ಲಿ ನಾಟಕ ವಿಭಾಗ ಆರಂಭಿಸಲಾಯಿತು. ಆದರೆ, ಈ ವರೆಗೂ ಯಾವುದೇ ಮೂಲ ಸೌಲಭ್ಯ ಕಲ್ಪಿಸದ ಹಿನ್ನೆಲೆಯಲ್ಲಿ ನಾಟಕ ವಿಭಾಗ ಅನುಷ್ಠಾನದ ಹಂತದಲ್ಲೇ ಕ್ಷೀಣಿಸುತ್ತಿದೆ. ಪರಿಣಾಮ ಸತತ ಎರಡು ವರ್ಷಗಳಿಂದ ನಾಟಕ ವಿಭಾಗದಿಂದ ಡ್ರಾಮಾ ಡಿಪ್ಲೋಮಾ ಕೋರ್ಸ್‌ ವ್ಯಾಸಂಗಕ್ಕೆ ಅರ್ಜಿ ಆಹ್ವಾನಿಸುವುದು, ಮೂಲ ಸೌಲಭ್ಯಗಳ ಕೊರತೆಯಿಂದಾಗಿ ಅಭ್ಯರ್ಥಿಗಳನ್ನು ವಾಪಸ್‌ ಕಳುಹಿಸುವುದು ಅಥವಾ ಬೇರೆ ಕೇಂದ್ರಗಳಿಗೆ ಶಿಫಾರಸು ಮಾಡುವುದು, ಬೇರೆ ಕೋರ್ಸ್‌ ವ್ಯಾಸಂಗ ಮಾಡುವಂತೆ ಸೂಚಿಸಲಾಗುತ್ತಿದೆ. ಇದರಿಂದ ಡ್ರಾಮಾ ಕೋರ್ಸ್‌ಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಇದೀಗ ಅತಂತ್ರರಾಗಿದ್ದಾರೆ.

ಮೂಲ ಸೌಲಭ್ಯಗಳೇ ಇಲ್ಲ: ಕನ್ನಡ ವಿವಿಯಲ್ಲಿ ನಾಟಕ ವಿಭಾಗ ಆರಂಭವಾದಾಗಿನಿಂದ ವಿಭಾಗದಲ್ಲಿ ಮೂಲ ಸೌಲಭ್ಯಗಳನ್ನೇ ಕಲ್ಪಿಸಿಲ್ಲ. ನಾಟಕ, ಡ್ರಾಮಾ ಕಲೆ ಕಲಿಕೆಗೆ ಅಗತ್ಯವಿರುವ ಪೂರಕ ಸಂಪನ್ಮೂಲ ವ್ಯಕ್ತಿಗಳೇ ಇಲ್ಲ. ಅದಕ್ಕೆ ಬೇಕಾದ ಪಠ್ಯಕ್ರಮ ಸಿದ್ಧಪಡಿಸಿಲ್ಲ. ಅಗತ್ಯ ಸಿಬ್ಬಂದಿಗಳನ್ನೂ ನಿಯೋಜಿಸಿಲ್ಲ. ಡ್ರಾಮಾ ಕಲಿಕೆಗೆ ಬೇಕಾದ ಪೂರಕ ಪರಿಕರಗಳನ್ನು ವ್ಯವಸ್ಥೆ ಮಾಡಿಲ್ಲ. ವಿಭಾಗ ಆರಂಭವಾಗಿ ನಾಲ್ಕೈದು ವರ್ಷಗಳು ಪೂರ್ಣಗೊಳ್ಳುತ್ತಿದ್ದರೂ ಈವರೆಗೂ ಕೇವಲ ವಿಭಾಗವಿದೆ ಎಂಬುದನ್ನು ಹೊರತುಪಡಿಸಿದರೆ ಉಳಿದಂತೆ ಅದಕ್ಕೆ ಬೇಕಾದ ಯಾವುದೇ ಮೂಲ ಸೌಲಭ್ಯಗಳನ್ನು ಸಹ ಕಲ್ಪಿಸಿಲ್ಲ. ಆಗಾಗ ಬೀದಿ ನಾಟಕ, ನೀನಾಸಂ ಸಂಸ್ಥೆಯವರು ಬಂದು ನಾಟಕ ಪ್ರದರ್ಶಿಸುವುದು ಬಿಟ್ಟರೆ ಇಲ್ಲಿ ಏನೂ ಇಲ್ಲ. ಹೀಗಿದ್ದರೂ, ಕಳೆದ 2018-19, 2019-2020ನೇ ಸಾಲಿನಲ್ಲಿ ನಾಟಕ ವಿಭಾಗದಿಂದ ಡ್ರಾಮಾ ಡಿಪ್ಲೋಮಾ ಒಂದು ವರ್ಷದ ಕೋರ್ಸ್‌ ವ್ಯಾಸಂಗಕ್ಕೆ ಅರ್ಜಿ ಆಹ್ವಾನಿಸಿ ಅಧಿಸೂಚನೆ ಪ್ರಕಟಿಸುವುದು ಎಷ್ಟು ಸರಿ? ಎಂಬುದು ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಪ್ರಶ್ನೆ.

ಎರಡು ವರ್ಷದಿಂದ ಹೀಗೆ: ವಿವಿಯ ನಾಟಕ ವಿಭಾಗದಿಂದ ಕಳೆದ ಎರಡು ವರ್ಷಗಳಿಂದ ಒಂದು ವರ್ಷದ ಡ್ರಾಮಾ ಡಿಪ್ಲೋಮಾ ಕೋರ್ಸ್‌ಗೆ ಅರ್ಜಿ ಆಹ್ವಾನಿಸಲಾಗುತ್ತಿದೆ. ಕಳೆದ 2018-19ನೇ ಸಾಲಿನಲ್ಲಿ ಕೇವಲ ಮೂರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಆಗ ಅವರ ಮನವೊಲಿಸಿ ಬೇರೆ ಕೋರ್ಸ್‌ ವ್ಯಾಸಂಗ ಮಾಡುವಂತೆ ಸೂಚಿಸಲಾಗಿತ್ತು. ಪ್ರಸಕ್ತ 2019-20ನೇ ಸಾಲಿನಲ್ಲಿ ಕಳೆದ ಜು.24ರಂದು ಅರ್ಜಿ ಆಹ್ವಾನಿಸಿದರೆ ಈವರೆಗೂ ಒಟ್ಟು 14 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಮೇಲಾಗಿ ವಿವಿಯಲ್ಲೇ ಉಳಿದು ಪಿಎಚ್‌ಡಿ ಮಾಡುತ್ತಿರುವ ಸಂಶೋಧನಾ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಇವರಿಗೆ ಕೋರ್ಸ್‌ಗೆ ಪ್ರವೇಶಾವಕಾಶ ಕಲ್ಪಿಸಬೇಕಿದ್ದ ಕನ್ನಡ ವಿವಿ ಕೊಪ್ಪಳದಲ್ಲಿ ವಿವಿಯಿಂದ ಮಾನ್ಯತೆ ಪಡೆದ ಅಧ್ಯಯನ ಕೇಂದ್ರದಲ್ಲಿ ವ್ಯಾಸಂಗ ಮಾಡುವಂತೆ ಸೂಚಿಸುತ್ತಿದೆ. ಹೀಗಾಗಿ ಪ್ರತಿದಿನ ಡ್ರಾಮಾ ಕೋರ್ಸ್‌ ನಿಮಿತ್ತ ಕೊಪ್ಪಳಕ್ಕೆ ಹೋಗುವುದು ಅಸಾಧ್ಯ. ಆದ್ದರಿಂದ ವಿವಿಯಲ್ಲೇ ಡ್ರಾಮಾ ಕೋರ್ಸ್‌ ಆರಂಭಿಸಿದಲ್ಲಿ ಇಲ್ಲಿನ ಪಿಎಚ್‌ಡಿ ವಿದ್ಯಾರ್ಥಿಗಳಿಗೂ ಅನುಕೂಲವಾಗಲಿದೆ ಎನ್ನುತ್ತಾರೆ ವಿವಿಯ ಸಂಶೋಧನಾ ವಿದ್ಯಾರ್ಥಿಗಳು.

ವಿಭಾಗಕ್ಕೆ ಅನುದಾನವಿಲ್ಲ: ಹಂಪಿ ಕನ್ನಡ ವಿವಿಯಲ್ಲಿ ನಾಟಕ ವಿಭಾಗ ಆರಂಭವಾಗಿದ್ದರೂ, ಸರ್ಕಾರದಿಂದ ಈವರೆಗೂ ಅನುದಾನವೇ ಬಂದಿಲ್ಲ. ಹೀಗಾಗಿ ಡ್ರಾಮಾ ಕೋರ್ಸ್‌ನ್ನು ಮುನ್ನಡೆಸಲು ವಿವಿಯಲ್ಲೇ ನಿರಾಸಕ್ತಿ ಕಾಣುತ್ತಿದೆ. ಕಳೆದ ವರ್ಷ ನಾಲ್ಕು ಇದ್ದ ಅರ್ಜಿಗಳ ಸಂಖ್ಯೆ ಪ್ರಸಕ್ತ ವರ್ಷ 14ಕ್ಕೆ ಏರಿಕೆಯಾಗಿದ್ದರೂ ಡ್ರಾಮಾ ಕೋರ್ಸ್‌ ಆರಂಭಿಸದಿರುವುದು ಕಲಾಸಕ್ತರಲ್ಲಿ ಅಸಮಾಧಾನ ಮೂಡಿಸಿದೆ.

Advertisement

ಡ್ರಾಮಾ ಕೋರ್ಸ್‌ಗೆ ಕೇವಲ ಮೂರು ಅರ್ಜಿಗಳು ಬಂದಿವೆ. ಸರ್ಕಾರದಿಂದ ಯಾವುದೇ ಅನುದಾನ ನೀಡಿಲ್ಲ. ನಾಟಕ ವಿಭಾಗದಿಂದ ಯಾವುದೇ ಕೆಲಸಗಳು ಆಗಿಲ್ಲ. ಸರ್ಟಿಫಿಕೇಟ್ ಕೋರ್ಸ್‌ ಮಾಡಿಲ್ಲ. ನಾಟಕ ವಿಭಾಗವನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ. ಹಿಂದೆ ನಡೆದಿದ್ದರ ಬಗ್ಗೆ ಮಾತನಾಡುವುದಿಲ್ಲ. ಉಡುಪಿ, ಕೊಪ್ಪಳ ಸೇರಿ ಐದು ಕಡೆ ಕವಿವಿಯಿಂದ ಮಾನ್ಯತೆ ಪಡೆದಿರುವ ಅಧ್ಯಯನ ಕೇಂದ್ರಗಳಿವೆ. ಆಸಕ್ತರನ್ನು ಅಲ್ಲಿಗೆ ಕಳುಹಿಸಲು ಪ್ರಯತ್ನಿಸಲಾಗುವುದು. ವಿವಿಯ ಪಿಎಚ್‌ಡಿ ವಿದ್ಯಾರ್ಥಿಗಳು ಅವಧಿ ಮುಗಿದ ಬಳಿಕ ಬಂದಿದ್ದಾರೆ. ಅವರಿಗೆಲ್ಲ ನೀಡಲು ಆಗುವುದಿಲ್ಲ. ಹೊಸ ಸರ್ಕಾರದಲ್ಲಿ ಉನ್ನತ ಶಿಕ್ಷಣದ ಜವಾಬ್ದಾರಿ ವಹಿಸಿಕೊಳ್ಳುವ ಸಚಿವರನ್ನು ಭೇಟಿ ಮಾಡಿ ನಾಟಕ ವಿಭಾಗಕ್ಕೆ ಅಗತ್ಯ ಅನುದಾನ ತರುವಲ್ಲಿ ಪ್ರಯತ್ನಿಸಲಾಗುವುದು.
ಸ.ಚಿ.ರಮೇಶ್‌,
 ಕುಲಪತಿಗಳು, ಹಂಪಿ ಕನ್ನಡ ವಿಶ್ವವಿದ್ಯಾಲಯ

Advertisement

Udayavani is now on Telegram. Click here to join our channel and stay updated with the latest news.

Next