Advertisement

ಅನ್ಯ ರಾಜ್ಯದ ಅಪರಿಚಿತ ಶಸ್ತ್ರಧಾರಿಗಳಿಂದ ಜೀವಬೆದರಿಕೆ: ಕಾಂಗ್ರೆಸ್ ವಿಪ ಸದಸ್ಯ ಸುನೀಲಗೌಡ

12:25 PM May 03, 2024 | keerthan |

ವಿಜಯಪುರ: ಕಾಂಗ್ರೆಸ್ ಪಕ್ಷದ ಮೇಲ್ಮನೆ ಶಾಸಕ, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಅವರ ಸಹೋದರ ಸುನೀಲಗೌಡ ಪಾಟೀಲ ತಮಗೆ ಅನ್ಯ ರಾಜ್ಯದ ಅಪರಿಚಿತ ಸಶಸ್ತ್ರಧಾರಿಗಳು ಜೀವಬೆದರಿಕೆ ಹಾಕಿದ್ದಾರೆ. ಹೀಗಾಗಿ ಕೂಡಲೇ ಪೊಲೀಸರು ತನಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಶುಕ್ರವಾರ ನಗರದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ‌ನನಗೆ ವಿಜುಗೌಡ ಜೊತೆಗಿರುವ ಅಪರಿಚಿತರಿಂದ ಜೀವ ಬೆದರಿಕೆಯಿದೆ. ಕೆಲ ದಿನಗಳ ಹಿಂದೆ‌ ಮದುವೆ ಸಮಾರಂಭಕ್ಕೆ ಹೋಗಿದ್ದಾಗ ವಿಜುಗೌಡ ಅವರೊಂದಿಗೆ ಇದ್ದ ಶಸ್ತ್ರಧಾರಿಗಳು ನನ್ನ ಬಳಿ ಬಂದು ಜೀವಬೆದರಿಕೆ ಹಾಕಿದ್ದರು. ಈ ಬಗ್ಗೆ ಕೂಡಲೇ ಎಸ್ಪಿ ಅವರಿಗೆ ಮಾಹಿತಿ ನೀಡಿದಾಗ ಪೊಲೀಸ್ ಠಾಣೆಗೆ ಲಿಖಿತ ದೂರು ನೀಡಲು ಸೂಚಿಸಿದಂತೆ ಎಫ್ಐಆರ್ ದಾಖಲಿಸಿದ್ದೆ ಎಂದು ವಿವರಿಸಿದರು.

ಆದರೆ ನಿನ್ನೆ ಪತ್ರಿಕಾಗೋಷ್ಠಿ ನಡೆಸಿರುವ ವಿಜುಗೌಡ ತಮ್ಮ ಮೇಲೆ ನಮ್ಮ ಕುಟುಂಬದಿಂದ ಜೀವಬೆದರಿಕೆ ಇದೆ ಎಂದು ಮಾಧ್ಯಮಗಳ ಮೂಲಕ ಸುಳ್ಳು ಆರೋಪಿಸಿದ್ದಾರೆ. ಆದರೆ ವಾಸ್ತವವಾಗಿ ವಿಜುಗೌಡ ಅವರಿಂದಲೇ ನನಗೆ ಜೀವ ಬೆದರಿಕೆ ಇರುವುದರಿಂದ ಪೊಲೀಸ್ ರಕ್ಷಣೆ ಬೇಕಿದ್ದು, ಈ ಕುರಿತು ಉನ್ನತ ಮಟ್ಟದ ಅಧಿಕಾರಿಗಳಿಗೆ ಮನವಿ ಮಾಡುವುದಾಗಿ ಹೇಳಿದರು.

ವಿಜುಗೌಡ ತಮ್ಮ ಹಿಂದೆ ತಿರುಗುವ ಅನ್ಯ ರಾಜ್ಯದ ಸಶಸ್ತ್ರ ಸರ್ದಾರ್ಜಿಗಳಿದ್ದಾರೆ ಎಂದು ಫೋಟೋ ಪ್ರದರ್ಶಿಸಿದ ಸುನಿಲಗೌಡ, ವಿಜುಗೌಡ ಹಿಂದಿರುವ ಸರ್ದಾರ್ಜಿ‌ ಮೂಲಕ ನನಗೆ ಬೆದರಿಕೆ ಹಾಕಿಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಲೈಸೆನ್ಸ್ ಹೊಂದಿರುವವರ ಶಸ್ತ್ರಾಸ್ತ್ರಗಳು ಪೊಲೀಸ್ ಠಾಣೆಗಳಲ್ಲಿ ಜಮೆ ಇದ್ದರೂ ವಿಜುಗೌಡ ಹಿಂದೆ ಅಕ್ರಮ ಶಸ್ತ್ರಧಾರಿಗಳು ತಿರುಗುತ್ತಿದ್ದು, ಅವರಿಂದಲೇ ನನಗೆ ನೇರವಾಗಿ ಬೆದರಿಕೆ ಹಾಕಿಸಿದ್ದಾರೆ ಎಂದು ಆರೋಪಿಸಿದರು.

ನನಗೆ ಬೆದರಿಕೆ ಹಾಕಿರುವ ಸಶಸ್ತ್ರ ಸರ್ದಾರ್ಜಿ ಮಾತ್ರವಲ್ಲ ಇನ್ನೂ 3-4 ಜನ ಅನ್ಯ ರಾಜ್ಯದ ಅಪರಿಚಿತರು ನಗರದಲ್ಲಿ ಅಕ್ರಮವಾಗಿ ಮನೆ ಮಾಡಿಕೊಂಡು ನೆಲೆಸಿದ್ದಾಗಿ ಮಾಹಿತಿಯಿದ್ದು, ಪೊಲೀಸರು ಕೂಡಲೇ ಸಮಗ್ರ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

Advertisement

ವಿಜಯಪುರ ಜೈಲಿನಲ್ಲಿರುವ ಅನ್ಯ ರಾಜ್ಯಗಳ ನಟೋರಿಯಸ್ ಮೂಲಕ ಸಶಸ್ತ್ರ ಸರ್ದಾರ್ಜಿಗಳು ವಿಜಯಪುರಕ್ಕೆ ಆಗಮಿಸಿದ್ದಾರೆ. ಜೈಲಿನಲ್ಲಿರುವ ನಟೋರಿಯಸ್ ಜೊತೆ ವಿಜುಗೌಡ, ಅವರ ಮಕ್ಕಳ ಸಂಪರ್ಕವಿದೆ ಎಂದು ಗಂಭೀರ ಆರೋಪ ಮಾಡಿದರು.

ವಿಜಯಪುರ ಜೈಲಿನಲ್ಲಿರುವ ಅನ್ಯ ರಾಜ್ಯಗಳ ಕ್ರಿಮಿನಲ್ ಗಳಿಗೆ ವಿಜುಗೌಡ ಮಕ್ಕಳಿಂದ ಆಹಾರ, ಮದ್ಯ, ಮಾದಕ ವಸ್ತುಗಳು,‌ ಮೊಬೈಲ್ ಪೂರೈಕೆ ಮಾಡಲಾಗುತ್ತಿದೆ ಎಂದೂ ಆರೋಪಿಸಿದರು.

ಕಳೆದ ವರ್ಷ ಇದೇ ವಿಜುಗೌಡ ಬಬಲೇಶ್ವರ ಕ್ಷೇತ್ರದಲ್ಲಿ ಫಲಾನುಭವಿಗಳಿಗೆ ಸೌಲಭ್ಯ ವಿತರಿಸುತ್ತಿದ್ದ ಕಾರ್ಯಕ್ರಮಕ್ಕೆ ಆಗಮಿಸಿ ನನ್ನ ಮೇಲೆ ಹಲ್ಲೆ ನಡೆಸಿದ್ದರು. ಇದೀಗ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿದ್ದಾಗ ಶಸ್ತ್ರಾಸ್ತ್ರ ನಿಷೇಧವಿದ್ದರೂ ಅನ್ಯ ರಾಜ್ಯದಿಂದ ಬಂದಿರುವ ಸಶಸ್ತ್ರಧಾರಿಗಳ ಮೂಲಕ ನೇರವಾಗಿ ಜೀವಬೆದರಿಕೆ ಹಾಕಿಸಿದ್ದಾರೆ ಎಂದು ಶಾಸಕ ಸುನೀಲಗೌಡ ಪಾಟೀಲ ಬಿಜೆಪಿ ಮುಖಂಡ ವಿಜುಗೌಡ ಪಾಟೀಲ ವಿರುದ್ಧ ಗಂಭೀರ ಆರೋಪ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next