ಬಳ್ಳಾರಿ: ಗುರು ಪೂರ್ಣಿಮೆ ನಿಮಿತ್ತ ಜಿಲ್ಲೆಯಾದ್ಯಂತ ಸಾಯಿಬಾಬಾ ಮಂದಿರ ಸೇರಿ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಅರ್ಚನೆ, ಪಲ್ಲಕ್ಕಿ ಉತ್ಸವಗಳು ಮಂಗಳವಾರ ಅತ್ಯಂತ ವಿಜೃಂಭಣೆಯಿಂದ ಜರುಗಿದವು.
ನಗರದ ಅನಂತಪುರ ರಸ್ತೆಯಲ್ಲಿನ ಶಿರಡಿ ಸಾಯಿಬಾಬಾ ದೇವಾಲಯ, ಹೊಸಪೇಟೆ ನಗರದ ಸಾಯಿಬಾಬಾ ದೇವಾಲಯ ಸೇರಿದಂತೆ ನಾನಾ ದೇವಾಲಯಗಳಲ್ಲಿ ವಿವಿಧ ಪೂಜೆಗಳು ನಡೆದವು.
ಹರಿದು ಬಂದ ಜನಸಾಗರ: ನಗರದ ಅನಂತಪುರ ರಸ್ತೆಯ ಶಿರಡಿ ಸಾಯಿಬಾಬಾ ದೇವಾಲಯದಲ್ಲಿ ಗುರು ಪೂರ್ಣಿಮೆ ನಿಮಿತ್ತ ನಗರ ಸೇರಿದಂತೆ ನಾನಾ ಕಡೆಯಿಂದ ಜನಸಾಗರವೇ ಬುಧವಾರ ಹರಿದು ಬಂದಿತ್ತು. ಗುರು ಪೂರ್ಣಿಮೆ ನಿಮಿತ್ತ ದೇವಾಲಯದಲ್ಲಿ ಬೆಳಗ್ಗೆ 5.15ಕ್ಕೆ ಕಾಕಡ ಆರತಿ, 6ಕ್ಕೆ ಗಣಪತಿ ಪೂಜೆ, ಸಾಯಿಬಾಬಾ ಅವರಿಗೆ ಮಂಗಳ ಸ್ನಾನ, ಕ್ಷೀರಾಭಿಷೇಕ, ಸಾಯಿ ಸಚ್ಚರಿತ್ರೆ ಪಾರಾಯಣ, 6.30ಕ್ಕೆ ಸಾಯಿಬಾ ನಗರ ಸಂಕೀರ್ತನೆ, 7.15ಕ್ಕೆ ಸಾಯಿಬಾಬಾ ಪಾದುಕೆಗಳಿಗೆ ಗಂಗಾ ಜಲಾಭಿಷೇಕ, 8ಕ್ಕೆ ಸಾಯಿಬಾಬಾ ಅವರಿಗೆ ಅರ್ಚನೆ, ವಿಶೇಷ ಅಲಂಕಾರ, ಲಘು ಆರತಿ, ಮ.12ಕ್ಕೆ ಆರತಿ ಸೇರಿದಂತೆ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಸಂಜೆ 6.15ಕ್ಕೆ ಧೂಪಾರತಿ ನಂತರ ಪ್ರಸಾದ ವಿನಿಯೋಗ ನಡೆಯಿತು. 7.30ಕ್ಕೆ ಪಲ್ಲಕ್ಕಿ ಉತ್ಸವ, 9.30ಕ್ಕೆ ಶೇಜಾರತಿ, ಉಯ್ನಾಲೆ ಸೇವೆ ವಿಜೃಂಭಣೆಯಿಂದ ನಡೆಯಿತು. ದೇವಾಲಯದ ಸಮಿತಿ ಅಧ್ಯಕ್ಷ ಎನ್.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಎಲ್ಲ ಪೂಜಾ ಕಾರ್ಯಕ್ರಮಗಳು ಜರುಗಿದವು. ಭಕ್ತರ ಸಂಖ್ಯೆ ನಿರೀಕ್ಷೆಗೂ ಹೆಚ್ಚು ಆಗಮಿಸಿದ ಹಿನ್ನೆಲೆಯಲ್ಲಿ ಸಮಿತಿ ಪದಾಧಿಕಾರಿಗಳು ಹರಸಹಾಸಪಟ್ಟರು. ಆದರೂ ಸಮಿತಿ ಪದಾಧಿಕಾರಿಗಳು ಎಲ್ಲರಿಗೂ ದರ್ಶನದ ವ್ಯವಸ್ಥೆ ಕಲ್ಪಿಸಿದರು. ಎಲ್ಲರಿಗೂ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು.
ರಕ್ತದಾನ ಶಿಬಿರ: ಗುರು ಪೂರ್ಣಿಮೆ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ದರ್ಶನಕ್ಕೆ ಆಗಮಿಸಿದ ಬಹುತೇಕ ಜನರು ಸ್ವಯಂ ಪ್ರೇರಿತವಾಗಿ ಆಗಮಿಸಿ ರಕ್ತದಾನ ಮಾಡುವುದು ಸಾಮಾನ್ಯವಾಗಿತ್ತು. ಸಮಿತಿ ನೂರಾರು ಪದಾಧಿಕಾರಿಗಳು, ಭಕ್ತರು ಇತರರಿದ್ದರು.