ಬಳ್ಳಾರಿ: ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ತೋರಿದಷ್ಟು ಆತುರವನ್ನು, ಸಚಿವ ಸಂಪುಟ ವಿಸ್ತರಣೆಗೆ ತೋರುತ್ತಿಲ್ಲ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಟೀಕಿಸಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಮುಖ್ಯಮಂತ್ರಿಯಾಗಿ 12 ದಿನ ಕಳೆದರೂ ಈ ವರೆಗೂ ಸಚಿವ ಸಂಪುಟ ವಿಸ್ತರಣೆ ಮಾಡಿಲ್ಲ. ರಾಜ್ಯ ರಾಜಕೀಯ ಇತಿಹಾಸದಲ್ಲಿ ಸರ್ಕಾರ ರಚನೆಯಾಗಿ ಇಷ್ಟು ದಿನಗಳವರಿಗೆ ಸಚಿವ ಸಂಪುಟ ರಚನೆ ಆಗದಿರುವುದು ಇದೇ ಮೊದಲು ಎಂದರು.
ಸಚಿವ ಸ್ಥಾನ ದೊರೆಯದ ಶಾಸಕರು ರೆಬೆಲ್ ಆಗಲಿದ್ದಾರೆ ಎಂಬ ಭಯ ಕಾಡುತ್ತಿದೆಯೋ ಎಂಬುದು ಗೊತ್ತಿಲ್ಲ. ಅಥವಾ ಸಚಿವರ್ಯಾರೂ ಬೇಡ ಮುಖ್ಯಮಂತ್ರಿಯೊಬ್ಬರೆ ಇದ್ದರೆ ಸಾಕು ರಾಜ್ಯವನ್ನು ಲೂಟಿ ಹೊಡೆಯಬಹುದು ಎಂಬ ಉದ್ದೇಶವಿದೆಯಾ? ಎಂದು ವ್ಯಂಗ್ಯವಾಡಿದರು.
ಮುಖ್ಯಮಂತ್ರಿಯಾಗಿ 12 ದಿನಗಳು ಕಳೆದರೂ ಯಡಿಯೂರಪ್ಪರಿಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ಷಾ ಅವರನ್ನು ಭೇಟಿಯಾಗಲು ಅವಕಾಶ ನೀಡಿಲ್ಲ. ಇದು ಬಿಜೆಪಿ ರಾಷ್ಟ್ರೀಯ ನಾಯಕರಲ್ಲಿ ಯಡಿಯೂರಪ್ಪರ ಮೇಲೆ ಅಸಮಾಧಾನವಿದೆ ಎಂಬುದನ್ನು ಸೂಚಿಸುತ್ತದೆ. ಅಲ್ಲದೆ ಇದರಿಂದ ಯಡಿಯೂರಪ್ಪರಿಗೆ ಅಪಮಾನವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ರಾಜ್ಯದ ಜನರನ್ನು ಪ್ರತಿನಿಧಿಸುವ ಮುಖ್ಯಮಂತ್ರಿಗೆ ಮಾಡಿದ ಅಪಮಾನವಾಗಿದೆ. ಯಡಿಯೂರಪ್ಪ ಸಿಎಂ ಆಗಿದ್ದು, ಬಲವಂತದ ಮದುವೆಯಂತಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸರ್ಕಾರ ಇದೆಯೇ?: ರಾಜ್ಯದಲ್ಲಿ ಒಂದುಕಡೆ ಅತಿವೃಷ್ಟಿ ಮತ್ತೂಂದು ಕಡೆ ಅನಾವೃಷ್ಟಿ ಆವರಿಸಿದೆ. ಶಿವಮೊಗ್ಗ, ಉತ್ತರ ಕನ್ನಡ, ದಕ್ಷಿಣ ಕನ್ನಡ ಸೇರಿ ಮಲೆನಾಡು ಪ್ರದೇಶದಲ್ಲಿ ಉತ್ತಮ ಮಳೆಯಾದರೆ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ಈ ಎರಡು ಕಾರಣಗಳಿಂದ ರಾಜ್ಯದ ಜನರ ಬದುಕು ದುಸ್ತರವಾಗಿದೆ. ಆದರೆ ಜನರ ಅಹವಾಲು ಕೇಳಲು ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಸಚಿವರಿಲ್ಲ. ಉಸ್ತುವಾರಿ ಸಚಿವರನ್ನು ನೇಮಕ ಮಾಡಿಲ್ಲ. ಉಸ್ತುವಾರಿ ಕಾರ್ಯದರ್ಶಿಗಳು ಎಲ್ಲಿದ್ದಾರೋ ಗೊತ್ತಿಲ್ಲ. ರಾಜ್ಯ ಸರ್ಕಾರ ಜೀವಂತವಾಗಿ ಇದೆಯೇ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ ಎಂದು ಉಗ್ರಪ್ಪ ಆರೋಪಿಸಿದರು.
ಕೇಂದ್ರದಿಂದ 5 ಸಾವಿರ ಕೋಟಿ ತನ್ನಿ: 2009ರಲ್ಲೂ ಜಿಲ್ಲೆಯಲ್ಲಿ ಪ್ರವಾಹ ಬಂದಿತ್ತು. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೆ, ಕೇಂದ್ರದಲ್ಲಿ ಯುಪಿಎ ಸರ್ಕಾರ ಇತ್ತು. ಆಗ ರಾಜ್ಯದ ಕಾಂಗ್ರೆಸ್ ಮುಖಂಡರು ಕೇಂದ್ರಕ್ಕೆ ಶಿಫಾರಸ್ಸು ಮಾಡಿದ ಹಿನ್ನೆಲೆಯಲ್ಲಿ ಅಂದಿನ ಪ್ರಧಾನಿ ಮನಮೋಹನಸಿಂಗ್ ಕೂಡಲೇ ವಿಶೇಷ ಅನುದಾನ ನೀಡಿದ್ದರು. ಇದೀಗ ಪುನಃ ಅಂದಿನ ಪರಿಸ್ಥಿತಿ ಮರುಕಳಿಸಿದ್ದು, ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಬದುಕಿನ ಬಗ್ಗೆ ಬದ್ಧತೆ ಇದ್ದರೆ, ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಕನಿಷ್ಠ 5 ಸಾವಿರ ಕೋಟಿ ರೂ. ಅನುದಾನ ನೀಡುವಂತೆ ಒತ್ತಾಯ ಮಾಡಬೇಕು ಎಂದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಮಹ್ಮದ್ ರಫೀಕ್, ಯುವಮುಖಂಡ ಹನುಮ ಕಿಶೋರ್, ಮುಖಂಡರಾದ ವೆಂಕಟೇಶ್ ಹೆಗಡೆ, ಅಯಾಜ್, ಬಿ.ಎಂ.ಪಾಟೀಲ್, ಕುಮಾರಮ್ಮ ಸೇರಿದಂತೆ ಹಲವರು ಇದ್ದರು.