ಬಳ್ಳಾರಿ: ರಾಜ್ಯ ಸರ್ಕಾರಿ ನೌಕರರ ಸಂಘದ ಸದಸ್ಯತ್ವ ಸ್ಥಾನಕ್ಕೆ ಇತ್ತೀಚೆಗಷ್ಟೇ ಚುನಾವಣೆ ನಡೆದ ಬೆನ್ನಲ್ಲೇ ಇದೀಗ ಸಂಘದ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದ್ದು, ಸರ್ಕಾರಿ ನೌಕರರಲ್ಲಿ ಮೂರು ಬಣ(ಪ್ಯಾನಲ್)ಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅಧ್ಯಕ್ಷ, ಖಜಾಂಚಿ, ರಾಜ್ಯ ಪರಿಷತ್ತಿನ ಸದಸ್ಯತ್ವ ಸ್ಥಾನಕ್ಕೆ ಮೂರು ಗುಂಪುಗಳಿಂದಲೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು ಚುನಾವಣೆ ಕುತೂಹಲ ಮೂಡಿಸಿದೆ.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಸದಸ್ಯತ್ವಕ್ಕೆ ಇತ್ತೀಚೆಗಷ್ಟೇ ಚುನಾವಣೆ ನಡೆಯಿತು. ಎರಡನೇ ಬಾರಿಗೆ ಅಧ್ಯಕ್ಷರಾಗುವ ಕನಸು ಹೊತ್ತಿದ್ದ ಸಂಘದ ಹಾಲಿ ಜಿಲ್ಲಾಧ್ಯಕ್ಷ ಎಂ.ಟಿ. ಮಲ್ಲೇಶ್ ಅಧ್ಯಕ್ಷರಾಗಬೇಕೆಂದು ತೀವ್ರ ಪ್ರಯತ್ನ ನಡೆಸಿದ್ದ ಡಾ. ರಾಜಶೇಖರ್ ಗಾಣಿಗೇರ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಹಾಲಿ ಅಧ್ಯಕ್ಷ ಸಿ.ನಿಂಗಪ್ಪ ತಮ್ಮ ಬಣಗಳಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರು. ಆದರೆ, ಚುನಾವಣೆಯಲ್ಲಿ ಬಣಗಳ ನೇತೃತ್ವವಹಿಸಿದ್ದ ಹಾಲಿ ಅಧ್ಯಕ್ಷ ಎಂ.ಟಿ. ಮಲ್ಲೇಶ್, ರಾಜಶೇಖರ್ ಗಾಣಿಗೇರ್ ಸೋತಿದ್ದು, ಸಿ. ನಿಂಗಪ್ಪ ಮಾತ್ರ ಜಯಗಳಿಸಿದ್ದಾರೆ. ಸಿ. ನಿಂಗಪ್ಪ ಅವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದು, ಪರಾಜಿತ ಎಂ.ಟಿ. ಮಲ್ಲೇಶ್, ರಾಜಶೇಖರ್ ಗಾಣಿಗೇರ್ ಅವರು ಸಹ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.
ಕಣದಲ್ಲಿರುವ ಅಭ್ಯರ್ಥಿಗಳು: ಸಂಘದ ಅಧ್ಯಕ್ಷ ಸ್ಥಾನಕ್ಕೆ ನಿಂಗಪ್ಪ ಬಣದಿಂದ ಸಿ. ನಿಂಗಪ್ಪ, ಖಜಾಂಚಿಗೆ ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿ ಭದ್ರಯ್ಯ, ಎಂ.ಟಿ. ಮಲ್ಲೇಶ್ ಬಣದಿಂದ ಅಧ್ಯಕ್ಷ ಸ್ಥಾನಕ್ಕೆ ಶಿವಾಜಿರಾವ್, ಖಜಾಂಚಿ ಸ್ಥಾನಕ್ಕೆ ಖಜಾನೆ ಇಲಾಖೆಯ ಅಲ್ಲಾಭಕ್ಷಿ, ರಾಜ್ಯ ಪರಿಷತ್ ಸ್ಥಾನಕ್ಕೆ ಅಬಕಾರಿ ಇಲಾಖೆಯ ಡಿ. ಗುರುರಾಜ್, ರಾಜಶೇಖರ್ ಗಾಣಿಗೇರ್ ಬಣದಿಂದ ಅಧ್ಯಕ್ಷ ಸ್ಥಾನಕ್ಕೆ ಆರೋಗ್ಯ ಇಲಾಖೆಯ ಶ್ರೀನಿವಾಸಲು, ಖಜಾಂಚಿ ಸ್ಥಾನಕ್ಕೆ ಪ್ರೌಢಶಿಕ್ಷಣ ಇಲಾಖೆಯ ಮಹ್ಮದ್ ರಿಜ್ವಾನ್ ನಾಮಪತ್ರ ಸಲ್ಲಿಸಿದ್ದು, ಜು. 11ರಂದು ನಡೆಯಲಿರುವ ಚುನಾವಣೆಯಲ್ಲಿ ಅದೃಷ್ಟ ಪರೀಕ್ಷಿಸಿಕೊಳ್ಳಲಿದ್ದಾರೆ.
ಪಕ್ಷೇತರ ಅಭ್ಯರ್ಥಿಗೆ ಬೆಂಬಲ: ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ನಿಂಗಪ್ಪ ಮತ್ತು ರಾಜಶೇಖರ್ ಬಣಗಳಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ. ಈ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಕೃಷಿ ಇಲಾಖೆಯ ಸುನೀಲ್ ಕುಮಾರ್ ಅವರನ್ನು ಈ ಎರಡೂ ಬಣಗಳು ಬೆಂಬಲಿಸಿವೆ. ಸುನೀಲ್ ಕುಮಾರ್ ಎನ್‌ಪಿಎಸ್ (ನಾನ್ ಪೆನ್ಷನ್ ಸ್ಕೀಮ್) ನೌಕರರಾಗಿದ್ದರಿಂದ ರಾಜಶೇಖರ್ ಗಾಣಿಗೇರ್ ಬಣ ಬೆಂಬಲಿಸುತ್ತಿದೆ. ರಾಜ್ಯ ಪರಿಷತ್‌ನಲ್ಲೂ ಎನ್‌ಪಿಎಸ್ ನೌಕರರ ಪರವಾಗಿ ಒಂದು ಮತ ಲಭಿಸಲಿದ್ದು, ಅವರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಲು ಅನುಕೂಲವಾಗಲಿದೆ. ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಸುನೀಲ್ಕುಮಾರ್ ಅವರನ್ನು ಬೆಂಬಲಿಸುವುದಾಗಿ ರಾಜಶೇಖರ್ ಗಾಣಿಗೇರ್ ತಿಳಿಸಿದ್ದಾರೆ.
ಒಟ್ಟು 72 ಮತಗಳು: ಸರ್ಕಾರಿ ನೌಕರರ ಸಂಘಕ್ಕೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಜಿಲ್ಲಾಘಟಕಕ್ಕೆ ಆಯ್ಕೆಯಾದ 62 ಜನ ಸದಸ್ಯರು ಮತ್ತು ಜಿಲ್ಲೆಯ 10 ತಾಲೂಕುಗಳ ಅಧ್ಯಕ್ಷರು ಸೇರಿ ಒಟ್ಟು 72 ಜನರು ಮತ ಚಲಾಯಿಸಲು ಹಕ್ಕು ಪಡೆದಿದ್ದಾರೆ. ಇದರಲ್ಲಿ 37 ಮತಗಳನ್ನು ಪಡೆದವರು ಜಯಶಾಲಿಯಾಗಿ ಹೊರಹೊಮ್ಮುತ್ತಾರೆ. ನಾಮಪತ್ರ ಸಲ್ಲಿಸಲು ಜು. 3ರಂದು ಕೊನೆಯ ದಿನವಾಗಿದ್ದು ಹಿಂಪಡೆಯಲು ಜುಲೈ 6 ಸಂಜೆ 4 ಗಂಟೆಯವರೆಗೆ ಅವಕಾಶ ಕಲ್ಪಿಸಲಾಗಿದೆ.
ಒಗ್ಗೂಡಿದರೆ ಗೆಲುವು ಸುಲಭ: ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಮೂರು ಬಣಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸಂಘದಲ್ಲಿ ಹಿಡಿತ ಕೈತಪ್ಪಬಾರದು ಎಂದು ಈಚೆಗೆ ಪರಾಜಿತ ಎಂ.ಟಿ.ಮಲ್ಲೇಶ್, ರಾಜಶೇಖರ್ ಗಾಣಿಗೇರ್ ಸಹ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಈ ಮೂರು ಬಣಗಳಲ್ಲಿ ಯಾವುದಾದರೂ ಎರಡು ಬಣಗಳು ಒಗ್ಗೂಡಿದರೆ ಆ ಬಣಗಳ ಅಭ್ಯರ್ಥಿಗಳಿಗೆ ಗೆಲುವು ಸುಲಭವಾಗಲಿದೆ. ಯಾರೂ ಒಗ್ಗೂಡದೆ ಚುನಾವಣೆ ಎದುರಿಸಿದಲ್ಲಿ ಅಭ್ಯರ್ಥಿಗಳ ನಡುವಿನ ಪೈಪೋಟಿ ಮತ್ತಷ್ಟು ಹೆಚ್ಚಲಿದೆ. ಗೆಲ್ಲುವ ಅಭ್ಯರ್ಥಿಗಳಾರು ಎಂಬುದನ್ನು ನಿರೀಕ್ಷಿಸಲಾಗದು. ಫಲಿತಾಂಶವೂ ಅಷ್ಟೇ ಕುತೂಹಲ ಮೂಡಿಸಲಿದೆ. ನಾಮಪತ್ರ ಹಿಂಪಡೆಯಲು ಜು. 6 ಕೊನೆಯದಿನವಾಗಿದ್ದು, ಅಷ್ಟರೊಳಗೆ ಸಂಘದಲ್ಲಿ ಏನೇನು ಬೆಳವಣಿಗೆಯಾಗಲಿದೆ. ಎರಡು ಬಣಗಳು ಒಗ್ಗೂಡಿ ಅವಿರೋಧ ಆಯ್ಕೆಗೆ ಅವಕಾಶ ದೊರೆಯಲಿದೆಯೇ ಎಂಬುದು ನಿರ್ಧಾರವಾಗುವ ಸಾಧ್ಯತೆಯಿದೆ ಎಂದು ಸಂಘದ ಮೂಲಗಳು ಸ್ಪಷ್ಟಪಡಿಸಿವೆ. ಏನೇ ಆದರೂ ಫಲಿತಾಂಶದಿಂದಷ್ಟೇ ಅಭ್ಯರ್ಥಿಗಳ ಗೆಲುವು ಸ್ಪಷ್ಟವಾಗಲಿದೆ.