ಬಳ್ಳಾರಿ: ಇಸ್ಲಾಂ ಧರ್ಮದ ಪವಿತ್ರ ರಂಜಾನ್ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮುಸಲ್ಮಾನರು ಶ್ರದ್ಧಾ, ಭಕ್ತಿಯಿಂದ ಸಂಭ್ರಮದಿಂದ ಬುಧವಾರ ಆಚರಿಸಿದರು.
ಕಳೆದ 30 ದಿನಗಳಿಂದ ಉಪವಾಸ ವ್ರತವನ್ನು ಮಂಗಳವಾರ ಸಂಜೆ ಕೈಬಿಟ್ಟ ಮುಸಲ್ಮಾನರು ಬೆಳಗ್ಗೆಯೇ ಹೊಸ ಬಟ್ಟೆ ಧರಿಸಿ ಮಂದಿರಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಮನೆಗೆ ಬಂದು ಸಿಹಿ ತಿನಿಸು ಸೇವಿಸಿದರು. ನಗರದ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಆಲಂಗಿಸುವ ಮೂಲಕ ಶುಭಾಶಯ ವಿನಿಮಯ ಮಾಡಿಕೊಂಡರು. ಹಬ್ಬದ ಹಿನ್ನೆಲೆಯಲ್ಲಿ ಮುಸಲ್ಮಾನರು ಹೊಸ ಉಡುಗೆ ತೊಟ್ಟು ಪ್ರಾರ್ಥನೆ ಸಲ್ಲಿಸಿ ಸಂಭ್ರಮಿಸಿದರು.
ಮುಸ್ಲಿಂ ಧರ್ಮ ಗುರು ಖಾಜಿ ಗುಲಾಂ ಮೊಹಮೂದ್ ಸಿದ್ದಿಕಿ ಧರ್ಮ ಸಂದೇಶ ನೀಡಿ, ಸಮಾಜದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿದರು. ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ಮಾಜಿ ಶಾಸಕ ಅನಿಲ್ ಲಾಡ್, ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ, ಕಾಂಗ್ರೆಸ್ ಜಿಲ್ಲಾ ಸಮಿತಿ ಅಧ್ಯಕ್ಷ ಮಹಮ್ಮದ್ ರಫೀಕ್, ರಾಜ್ಯಸಭೆ ಸದಸ್ಯ ಸೈಯ್ಯದ್ ನಾಸೀರ್ ಹುಸೇನ್, ಜೆಡಿಎಸ್ ಮುಖಂಡ ಹೊತೂರ್ ಮಹಮ್ಮದ್ ಇಕ್ಬಾಲ್, ಯುವ ಮುಖಂಡ ಹನುಮ ಕಿಶೋರ್ ಸೇರಿದಂತೆ ಹಲವು ಮುಖಂಡರು ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗವಹಿಸಿ ಮುಸ್ಲಿಂ ಮುಖಂಡರಿಗೆ ಹಬ್ಬದ ಶುಭಾಶಯ ಕೋರಿದರು. ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಇದ್ದರು.
ನಂತರ ಪಕ್ಕದಲ್ಲೇ ಇದ್ದ ಖಬರಸ್ಥಾನಕ್ಕೆ ತೆರಳಿದ ಮುಸಲ್ಮಾನರು ತಮ್ಮ ತಮ್ಮ ಹಿರಿಯ ಸಮಾಧಿಗಳಿಗೆ ಹೂವು, ಪತ್ರಿಗಳನ್ನು ಇಟ್ಟು ಪ್ರಾರ್ಥಿಸಿದರು. ಹಬ್ಬದ ನಿಮಿತ್ತ ಬಂಡಿಮೋಟ್ ಪ್ರದೇಶದಲ್ಲಿ ಕಾಂಗ್ರೆಸ್ ಯುವ ಮುಖಂಡ ಪ್ರಭಂಜನ್ ಕುಮಾರ್ ತಂಪು ಪಾನೀಯಗಳನ್ನು ವಿತರಿಸಿದರು. ಈದ್ಗಾ ಮೈದಾನಕ್ಕೆ ತೆರಳುವ ಮಾರ್ಗದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರಾರ್ಥನೆ ನಂತರ ಜನಸಂದಣಿಯಿಂದ ಮೈದಾನದ ರಸ್ತೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತು.