ಬಳ್ಳಾರಿ: ದಿನೇ ದಿನೇ ವಿಸ್ತಾರಗೊಳ್ಳುತ್ತಿರುವ ಗಣಿನಗರಿ ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಧಿಕೃತವಾಗಿ ಕುಡಿಯುವ ನೀರಿನ ಸಂಪರ್ಕಗಳು ಎಷ್ಟು ಗೊತ್ತೇ….? ಕೇವಲ 54 ಸಾವಿರ.
Advertisement
ಹೌದು… ಅಚ್ಚರಿ ಎನಿಸಿದರೂ, ಇದು ಸತ್ಯ. ಪಾಲಿಕೆ ನೀಡಿರುವ ಅಂಕಿ ಸಂಖ್ಯೆಗಳಿಂದಲೇ ಇದು ಬಹಿರಂಗಗೊಂಡಿದೆ. ನಗರದಲ್ಲಿ 1,05,899 ಮನೆ, ವಾಣಿಜ್ಯ ಕಟ್ಟಡಗಳು ಇವೆ. ಈ ಪೈಕಿ ಕೇವಲ ಮನೆ, ವಾಣಿಜ್ಯ ಕಟ್ಟಡಗಳಿಂದ 54,168 ಕುಡಿಯುವ ನೀರಿನ ಸಂಪರ್ಕ ಪಡೆಯಲಾಗಿದೆ. ಇನ್ನುಳಿದ 50 ಸಾವಿರಕ್ಕೂ ಹೆಚ್ಚು ಮನೆ, ವಾಣಿಜ್ಯ ಕಟ್ಟಡಗಳು ಕುಡಿಯುವ ನೀರಿನ ಸಂಪರ್ಕ ಪಡೆದಿಲ್ಲ ಎಂಬುದು ಅಂಕಿ ಸಂಖ್ಯೆಗಳಿಂದ ಸ್ಪಷ್ಟವಾಗುತ್ತಿದೆ. ಈ ಕಟ್ಟಡಗಳಲ್ಲಿನ ಜನರು ತಮ್ಮ ಮನೆಗಳಿಗೆ ಪಾಲಿಕೆಯಿಂದ ನಳ ಸಂಪರ್ಕ ಪಡೆದಿಲ್ಲವೋ ಅಥವಾ ನಾಲ್ಕೈದು ಸಂಪರ್ಕಗಳನ್ನು ಅನಧಿಕೃತವಾಗಿ ಪಡೆದು, ಒಂದು ಸಂಪರ್ಕ ಮಾತ್ರ ಅಧಿಕೃತಗೊಳಿಸಿಕೊಂಡಿದ್ದಾರೋ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಇದರಲ್ಲೂ ಇನ್ನು 43 ಕೋಟಿ ರೂ. ನೀರಿನ ತೆರಿಗೆ ವಸೂಲಿಯಾಗಬೇಕಿದ್ದು, ಪಾಲಿಕೆ ಖಜಾನೆಗೆ ಪ್ರತಿ ವರ್ಷ ಬಾರಿ ನಷ್ಟವುಂಟಾಗುತ್ತಿದೆ.
Related Articles
Advertisement
ಪ್ರತಿಷ್ಠಿತ ಬಡಾವಣೆ, ಅಪಾರ್ಟ್ ಮೆಂಟ್‌ಗಳಲ್ಲೇ ಹೆಚ್ಚು?: ಬಳ್ಳಾರಿ ಪಾಲಿಕೆ ವ್ಯಾಪ್ತಿಯಲ್ಲಿ ಸಾಕಷ್ಟು ಅಪಾರ್ಟ್‌ಮೆಂಟ್‌ಗಳು ತಲೆ ಎತ್ತುತ್ತಿವೆ. ಈ ಅಪಾರ್ಟ್‌ಮೆಂಟ್‌ಗಳಲ್ಲಿ ಕುಡಿಯುವ ನೀರಿನ ಸಲುವಾಗಿ ಪಾಲಿಕೆಯಿಂದ ಅಧಿಕೃತವಾಗಿ ಒಂದು ನಳ ಸಂಪರ್ಕ ಪಡೆದರೆ, ಅನಧಿಕೃತವಾಗಿ ನಾಲ್ಕೈದು ಸಂಪರ್ಕ ಪಡೆಯಲಾಗುತ್ತಿದೆ. ಇನ್ನು ಪ್ರತಿಷ್ಠಿತ ಬಡಾವಣೆಗಳಲ್ಲಿ ಮನೆಗೊಂದು ಸಂಪ್‌ಗ್ಳನ್ನು ನಿರ್ಮಿಸಿಕೊಂಡಿರುವವರು ಸಹ ಎರಡ್ಮೂರು ನಳಗಳ ಸಂಪರ್ಕ ಪಡೆದು, ಒಂದನ್ನು ಮಾತ್ರ ಅಧಿಕೃತ ಪಡಿಸಿಕೊಂಡಿದ್ದಾರೆ ಎಂಬ ಆರೋಪ ಹಲವು ವರ್ಷಗಳಿಂದ ಕೇಳಿಬರುತ್ತಿದೆಯಾದರೂ, ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಪಾಲಿಕೆ ಹಿಂದೆ ಬಿದ್ದಿದೆ. ಅನಧಿಕೃತ ಸಂಪರ್ಕಗಳಿಂದಾಗಿ ನೀರು ಪೋಲಾಗುವುದರ ಜತೆಗೆ ಖಜಾನೆಗೂ ಖೋತಾ ಆಗುತ್ತಿದೆ.
ತನಿಖೆಯಿಂದ ವಾಸ್ತವ ಬಹಿರಂಗ: ಪಾಲಿಕೆಯಿಂದ ಸರಬರಾಜಾ ಗುತ್ತಿರುವ ಕುಡಿಯುವ ನೀರಿಗೂ ಪಡೆದಿರುವ ಸಂಪರ್ಕಕ್ಕೂ ಇರುವ ವ್ಯತ್ಯಾಸ ಸೂಕ್ತ ತನಿಖೆಯಿಂದ ಮಾತ್ರ ಸ್ಪಷ್ಟವಾಗಲಿದೆ. ಪ್ರತಿಷ್ಠಿತ ಬಡಾವಣೆ, ಅಪಾರ್ಟ್‌ಮೆಂಟ್‌ಗಳಲ್ಲಿ ಬೋರ್‌ವೆಲ್ ನೆಪದಲ್ಲಿ ಅನಧಿಕೃತವಾಗಿ ಪಡೆದಿರುವ ನಳ ಸಂಪರ್ಕ ಮುಚ್ಚಿ ಹಾಕಲಾಗುತ್ತಿದೆ. ಅಪಾರ್ಟ್‌ಮೆಂಟ್, ಪ್ರತಿಷ್ಠಿತ ಬಡಾವಣೆಗಳಲ್ಲಿನ ಜನರು ಬೋರ್‌ವೆಲ್ ನೀರನ್ನು ಬಳಸುತ್ತಿದ್ದಾರೋ ಅಥವಾ ಪಾಲಿಕೆ ಪೂರೈಸುವ ಕುಡಿಯುವ ನೀರನ್ನು ಬಳಸುತ್ತಿದ್ದಾರೆ ಎಂಬುದೇ ಪಾಲಿಕೆ ಅಧಿಕಾರಿಗಳ ಬಳಿ ಸ್ಪಷ್ಟತೆಯಿಲ್ಲ. ನಗರದಲ್ಲಿ ಬೋರ್‌ವೆಲ್ ನೀರು ಕುಡಿಯಲು ಯೋಗ್ಯವಿಲ್ಲ. ಹಾಗಾಗಿ ಸೂಕ್ತ ತನಿಖೆ ನಡೆಸಿದಾಗ ಮಾತ್ರ ಪಾಲಿಕೆಯಿಂದ ಪಡೆದಿರುವ ಅಧಿಕೃತ ನಳ ಸಂಪರ್ಕಗಳೆಷ್ಟು ಎಂಬುದು ಸ್ಪಷ್ಟವಾಗಲಿದೆ.