ಬಳ್ಳಾರಿ: ಗಮಕ ಕಲಾನಿಧಿ, ಪ್ರವಚನ ಶಿರೋಮಣಿ, ನಟ, ನಾಟಕಕಾರ ಬಳ್ಳಾರಿಯ ಜೋಳದರಾಶಿ ದೊಡ್ಡನಗೌಡರ 110ನೇ ಜಯಂತಿ ಪ್ರಯುಕ್ತ ನಗರದ ರಂಗತೋರಣ, ದೊಡ್ಡನಗೌಡ ಪ್ರತಿಷ್ಠಾನ ಹಾಗೂ ಜೋಳದರಾಶಿಯ ರಮೇಶ ಟ್ರಸ್ಟ್ ಸಹಯೋಗದಲ್ಲಿ ರಂಗಜ್ಯೋತಿ ಯಾತ್ರೆಯನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು.
ಅಂದು ಬೆಳಗ್ಗೆ 8.30ಕ್ಕೆ ಚೇಳ್ಳಗುರ್ಕಿ ಎರ್ರಿತಾತ ಜೀವ ಸಮಾಧಿ ಮಠದಲ್ಲಿ ಶಾಸ್ತ್ರೋಕ್ತ ಪೂಜೆಯೊಂದಿಗೆ ದೊಡ್ಡನಗೌಡರ ಸ್ಮರಣೆಯ ರಂಗಜ್ಯೋತಿಯನ್ನು ಹೊತ್ತಿಸಲಾಯಿತು. ದೇವಸ್ಥಾನದ ಧರ್ಮದರ್ಶಿ ಕರಿಬಸವನಗೌಡ ಹಾಗೂ ವಿರುಪಾಕ್ಷಗೌಡ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹನುಮಂತ ಹಾಗೂ ಜೋಳದರಾಶಿ ದೊಡ್ಡನಗೌಡ ಪ್ರತಿಷ್ಠಾನದ ಬಿ.ಸಿದ್ಧನಗೌಡ, ರಮೇಶ ಟ್ರಸ್ಟ್‌ನ ಕೆ. ಪೊಂಪನಗೌಡ, ರಂಗತೋರಣ ಕಾರ್ಯದರ್ಶಿ ಕಪ್ಪಗಲ್ಲು ಪ್ರಭುದೇವ ಹಾಗೂ ಸಹೋದರರು ಹಾಜರಿದ್ದರು.
ಜೀವ ಸಮಾಧಿಯಿಂದ ಭಜನೆಗಳೊಂದಿಗೆ ಆರಂಭವಾದ ಯಾತ್ರೆ ಹತ್ತಿರದ ದೊಡ್ಡನಗೌಡರ ಸಮಾ ತಲುಪಿತು. ಬಳಿಕ ಅಲ್ಲಿ ದೊಡ್ಡನಗೌಡ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜೋಳದರಾಶಿ ಗ್ರಾಮದ ಅವರ ನಿವಾಸಕ್ಕೆ ತರಲಾಯಿತು. ಅಲ್ಲಿ ದೊಡ್ಡನಗೌಡರ ಕುಟುಂಬದವರು ರಂಗಜ್ಯೋತಿಯನ್ನು ಭಕ್ತಿ ಗೌರವಗಳಿಂದ ಬರಮಾಡಿಕೊಂಡರು. ಅಲ್ಲಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಕ್ಕಳು ಸಾಲಾಗಿ ನಿಂತು ಪುಷ್ಪಾರ್ಚನೆ ಸಲ್ಲಿಸಿದ್ದು ವಿಶೇಷವಾಗಿತ್ತು. ಪರಮದೇವನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು, ಗ್ರಾಮಸ್ಥರು ಪೂಜೆ ಪುಷ್ಪಗಳೊಂದಿಗೆ ಸ್ವಾಗತಿಸಿ ಜ್ಯೋತಿಯನ್ನು ಬೀಳ್ಕೊಟ್ಟರು. ಗೋಡೆಹಾಳು, ಅಮರಾಪುರ, ಕಕ್ಕಬೇವಿನಹಳ್ಳಿ, ಬಿಸಲಹಳ್ಳಿಗಳಲ್ಲೂ ಎಲ್ಲ ಗ್ರಾಮಸ್ಥರು, ಶಾಲಾ ಮಕ್ಕಳು ದೊಡ್ಡನಗೌಡರ ರಂಗಜ್ಯೋತಿ ದರ್ಶನ ಮಾಡಿ ಕೆಲ ಹೊತ್ತು ಭಜನೆ ಮಾಡಿ ಬಳ್ಳಾರಿಗೆ ಬೀಳ್ಕೊಟ್ಟರು.
ಬಳ್ಳಾರಿಯ ಡಾ| ರಾಜಕುಮಾರ ರಸ್ತೆಯ ರಾಘವ ಕಲಾಮಂದಿರಕ್ಕೆ ಆಗಮಿಸಿದ ಜ್ಯೋತಿಯನ್ನು ಕಲಾಮಂದಿರದ ಕೆ. ಚೆನ್ನಪ್ಪ, ರಮೇಶಗೌಡ ಪಾಟೀಲ, ಎನ್. ಬಸವರಾಜ, ರಮಣಪ್ಪ ಭಜಂತ್ರಿ ಸೇರಿದಂತೆ ಸದಸ್ಯರು ಸ್ವಾಗತಿಸಿ ಕಲಾಮಂದಿರದ ಆವರಣದಲ್ಲಿರುವ ದೊಡ್ಡನಗೌಡರ ನಾಟಕಗುರು ಬಳ್ಳಾರಿ ರಾಘವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.
ನಂತರ ಜ್ಯೋತಿಯನ್ನು ದೊಡ್ಡನಗೌಡರ ನೆನಪಿನ ಅಂಚೆ ಲಕೋಟೆ ಬಿಡುಗಡೆಯ ಪ್ರದರ್ಶನ ಸ್ಥಳಕ್ಕೆ ಕೊಂಡೊಯ್ಯಲಾಯಿತು. ಅಲ್ಲಿ ನೆರೆದಿದ್ದ ಜಿಲ್ಲಾ ಕಲಾವಿದರ ಸಮೂಹ ಜೋಳದರಾಶಿ ದೊಡ್ಡನಗೌಡರನ್ನು ಕಂಡಷ್ಟೇ ಸಂತೋಷದಿಂದ ರಂಗಜ್ಯೋತಿ ಯಾತ್ರೆಯನ್ನು ಭಕ್ತಿ, ಗೌರವಪೂರ್ವಕ ವೇದಿಕೆಗೆ ಕೊಂಡೊಯ್ಯಲಾಯಿತು.
ಹಿರಿಯ ರಂಗಮಾತೆ ಸುಭದ್ರಮ್ಮ ಮನ್ಸೂರು, ವಿ.ವಿ. ಸಂಘದ ಚೋರನೂರು ಕೊಟ್ರಪ್ಪ, ವೈ.ಸತೀಶ, ಅಂಚೆ ಅಧಿಕಾರಿ ಕೆ. ಮಹಾದೇವಪ್ಪ, ವೈ. ನಾಗೇಶಶಾಸ್ತ್ರಿ ಸಾಹಿತ್ಯ ಸಂಘದ ಡಾ| ಮಲ್ಲಿಕಾರ್ಜುನಗೌಡ ಮತ್ತಿತರು ಹಾಜರಿದ್ದು ರಂಗಜ್ಯೋತಿ ಯಾತ್ರೆಗೆ ಪುಷ್ಪ ನಮನ ಸಲ್ಲಿಸಿದರು.