Advertisement

ಉತ್ತಮವಾಗಿ ಕಾರ್ಯನಿರ್ವಹಿಸಿ ಕನಸು ಸಾಕಾರಗೊಳಿಸಿ

03:27 PM Jul 19, 2019 | Naveen |

ಬಳ್ಳಾರಿ: ಗಣಿಬಾಧಿತ ಪ್ರದೇಶಗಳ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನದಡಿ ಪ್ರಸಕ್ತ ಸಾಲಿಗೆ 872 ಕೋಟಿ ರೂ. ಮೊತ್ತದ ಕ್ರಿಯಾಯೋಜನೆಗೆ ಅನುಮೋದನೆ ನೀಡಲಾಗಿದ್ದು, ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಬೇಕು ಎಂದು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್ ತಾಕೀತು ಮಾಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಖನಿಜ ನಿಧಿ ಪ್ರತಿಷ್ಠಾನ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಗಣಿಬಾಧಿತ ಪ್ರದೇಶಗಳಲ್ಲಿ ಕುಡಿಯುವ ನೀರನ್ನು ಕಲ್ಪಿಸಲು ಉದ್ದೇಶಿಸಲಾಗಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆ, ಶುದ್ಧ ನೀರಿನ ಘಟಕಗಳು ಸೇರಿದಂತೆ ಕುಡಿಯುವ ನೀರಿನ ಯೋಜನೆಗಾಗಿ 200 ಕೋಟಿ ರೂ.ಗಳನ್ನು ತೆಗೆದಿರಿಸಲಾಗಿದೆ. ಅಲ್ಲದೇ, ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿ ಹೈಮಾಸ್ಟ್‌ ದೀಪ, ಶೌಚಾಲಯ ಮತ್ತು ಸ್ನಾನಗೃಹ ಹಾಗೂ ಇನ್ನಿತರೆ ಸೌಕರ್ಯಗಳ ಕಲ್ಪನೆ, ಹಂಪಿಯ ಪುಷ್ಕರ ಸ್ನಾನಘಟ್ಟ ಬಳಿ ಸೌಕರ್ಯ ಕಲ್ಪಿಸುವಿಕೆಯೂ ಅನುದಾನ ಕಾಯ್ದಿರಿಸಲಾಗಿದ್ದು, ಪ್ರವಾಸೋದ್ಯಮ ಇಲಾಖೆ ಅಥವಾ ಧಾರ್ಮಿಕ ಇಲಾಖೆ ಮೂಲಕ ಅನುಷ್ಠಾನಗೊಳಿಸಲಾಗುವುದು ಎಂದು ಅವರು ತಿಳಿಸಿದರು.

ಸ್ವಾಮಿಹಳ್ಳಿ ಬಳಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ, ದರೋಜಿಯಲ್ಲಿ 10 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ, ಕುಡಿತಿನಿಯಲ್ಲಿ ಹೆರಿಗೆ ಆಸ್ಪತ್ರೆ ನಿರ್ಮಾಣ, ಬಳ್ಳಾರಿ ಮಹಾನಗರ ಪಾಲಿಕೆಗೆ ಫಾಗಿಂಗ್‌ ಯಂತ್ರಗಳ ಖರೀದಿ, ಸಂಗನಕಲ್ಲು ಆಸ್ಪತ್ರೆಗೆ ಸೌಕರ್ಯ ಕಲ್ಪಿಸುವಿಕೆ, ಜಿಲ್ಲಾಸ್ಪತ್ರೆಯಲ್ಲಿ ಡ್ರಗ್‌ ಸ್ಟೋರೆಜ್‌ ಯೂನಿಟ್, ರೂಪನಗುಡಿ ಆಸ್ಪತ್ರೆಗೆ ವೈದ್ಯಕೀಯ ಸಲಕರಣೆ ಒದಗಿಸುವಿಕೆ, ಕೊಟ್ಟೂರು ಆಸ್ಪತ್ರೆ ಮೇಲ್ದರ್ಜೆಗೇರಿಸುವಿಕೆ ಸೇರಿದಂತೆ ವಿವಿಧ ರೀತಿಯ ಆರೋಗ್ಯ ಇಲಾಖೆಗೆ ಸಂಬಂಧಿತ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಡಿಎಂಎಫ್‌ ಲೋಗೋ ಅಳವಡಿಸಿ: ಜಿಲ್ಲಾ ಖನಿಜ ಪ್ರತಿಷ್ಠಾನದ ಮೂಲಕ ಕೈಗೊಂಡ ಕಾಮಗಾರಿಗಳ ಹತ್ತಿರ ಡಿಎಂಎಫ್‌ ಲೋಗೋ ಮತ್ತು ಅದಕ್ಕೆ ಸಂಬಂಧಿಸಿದ ವಿವರಣೆಯುಳ್ಳ ನಾಮಫಲಕಗಳನ್ನು ಕಡ್ಡಾಯವಾಗಿ ಅಧಿಕಾರಿಗಳು ಅಳವಡಿಸಲು ಮುಂದಾಗಬೇಕು ಎಂದ ಡಿಸಿ ನಕುಲ್, ಇದರಿಂದ ಡಿಎಂಎಫ್‌ ಅಡಿ ಕೆಲಸಗಳು ಆಗಿವೆ ಎಂಬುದು ಜನರಿಗೆ ತಿಳಿಯಲಿದೆ. ಖನಿಜ ಬಳಕೆಗೆ ಸಂಬಂಧಿಸಿದಂತೆ ಪ್ರಧಾನ ಮಂತ್ರಿಗಳು ಮಾಹಿತಿ ಪಡೆದುಕೊಳ್ಳುತ್ತಿದ್ದು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಇದಕ್ಕೆ ಸಂಬಂಧಿಸಿದಂತೆ ಆಗಾಗ ಸಭೆ ನಡೆಸುತ್ತಿದ್ದಾರೆ. ಆದ್ದರಿಂದ ಡಿಎಂಎಫ್‌ ಚೆಕ್‌ಲಿಸ್ಟ್‌ ಅನುಸಾರ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೈಗಾರಿಕಾ ಕೇಂದ್ರಕ್ಕೆ ಹೆಚ್ಚು ಹಣ: ಕೌಶಲ್ಯ ಅಭಿವೃದ್ಧಿ, ಮಹಿಳಾ ಕೌಶಲ್ಯ ತರಬೇತಿ, ಮಹಿಳಾ ಉದ್ಯಮಶೀಲತಾ ಪಾರ್ಕ್‌ ಮತ್ತು ವಿವಿಧ ಉದ್ದೇಶಗಳ ಪಾರ್ಕ್‌ಗಳು, ವಿವಿಧ ರೀತಿಯ ತರಬೇತಿಗಳಿಗಾಗಿ ಜಿಲ್ಲಾ ಖನಿಜ ಅಡಿ ಕಳೆದ ಎರಡು ವರ್ಷಗಳಿಂದ ಜಿಲ್ಲಾ ಕೈಗಾರಿಕಾ ಕೇಂದ್ರಕ್ಕೆ ಹೆಚ್ಚೆಚ್ಚು ಅನುದಾನವನ್ನು ಒದಗಿಸಲಾಗಿದೆ. ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳು ಹೆಚ್ಚೆಚ್ಚು ಮುತುವರ್ಜಿ ವಹಿಸಿ ಕ್ರಿಯಾತ್ಮಕ ಆಲೋಚನೆಗಳೊಂದಿಗೆ ಕೆಲಸ ಮಾಡುವುದರ ಮೂಲಕ ಜಿಲ್ಲಾಡಳಿತದ ಕನಸನ್ನು ಸಾಕಾರಗೊಳಿಸಬೇಕು ಎಂದು ತಿಳಿಸಿದರು.

Advertisement

ಡಿಎಂಎಫ್‌ ಅನುದಾನದಡಿ ಇದುವರೆಗೆ ಕೈಗೊಳ್ಳಲಾಗಿರುವ ಕಾಮಗಾರಿಗಳ ಪ್ರಗತಿಯನ್ನು ಜಿಲ್ಲಾಧಿಕಾರಿ ನಕುಲ್ ಪರಿಶೀಲಿಸಿದರು. ಜಿಪಂ ಸಿಇಒ ಕೆ. ನಿತೀಶ್‌ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರೊಬೇಷನರಿ ಐಎಎಸ್‌ ಅಧಿಕಾರಿ ಈಶ್ವರ್‌ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next