ಬಳ್ಳಾರಿ: ಪ್ರತಿಯೊಬ್ಬರೂ ಜೀವನದಲ್ಲಿ ತಪ್ಪು ಮಾಡುವುದು ಸಹಜ. ಅದರ ನಡುವೆ ನಾವು ಸತ್ತಮೇಲೂ ನಮ್ಮ ಹೆಸರು ಶಾಶ್ವತವಾಗಿ ಉಳಿಯುವಂತೆ ಜೀವಿಸಬೇಕು ಎಂದು ಸಂಸದ ವೈ.ದೇವೇಂದ್ರಪ್ಪ ಹೇಳಿದರು.
ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಶ್ರಾವಣ ಮಾಸದ ನಿಮಿತ್ತ ಕಮ್ಮರಚೇಡು ಮಠದಿಂದ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಮನಃ ಪರಿವರ್ತನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರಿಗೂ ಹುಟ್ಟಿದಾಗ ಇರುವ ಉಸಿರು ಸತ್ತಾಗ ಇರುವುದಿಲ್ಲ. ಈ ಉಸಿರು ನಿಲ್ಲುವುದರ ನಡುವೆ ಇರುವ ಜೀವನದಲ್ಲಿ ಹೆಸರು ಚಿರಸ್ಥಾಯಿಯಾಗಿ ಉಳಿಯುವಂತೆ ಜೀವನ ಸಾಗಿಸಬೇಕು. ಅಂಥ ಜೀವನವನ್ನು ನಮ್ಮದಾಗಿಸಿಕೊಳ್ಳಬೇಕು ಎಂದ ಅವರು, ಯಾವೂದೋ ಕಾರಣಗಳಿಂದ ಶಿಕ್ಷೆಯನ್ನು ಅನುಭವಿಸುತ್ತಿದ್ದೀರಿ. ತಪ್ಪುಗಳನ್ನು ಅರಿತುಕೊಂಡು ಜೀವನ ನಡೆಸಬೇಕಿದೆ. ಹುಟ್ಟುವಾಗ ಉಸಿರು ಬಿಟ್ಟರೇ, ಹೆಸರು ಇರಲ್ಲ. ಸತ್ತ ಮೇಲೆ ಉಸಿರು ಇರಲ್ಲ ಹೆಸರು ಮಾತ್ರ ಇರುತ್ತದೆ. ಆದ್ದರಿಂದ ಸಮಾಜದಲ್ಲಿ ಹೆಸರು ಮಾಡುವಂತ ಕೆಲಸ ಮಾಡಬೇಕಿದೆ ಎಂದರು.
ಶಾಸಕ ಜಿ. ಸೋಮಶೇಖರ್ ರೆಡ್ಡಿ ಮಾತನಾಡಿದರು. ತಪ್ಪುಗಳು ಸಹಜ, ತಪ್ಪನ್ನು ತಿದ್ದಿಕೊಳ್ಳುವುದೇ ಮನುಜ. ನಿಮ್ಮ ತಪ್ಪುಗಳನ್ನು ತಿದ್ದಿಕೊಂಡು ಶೀಘ್ರದಲ್ಲಿ ಬಿಡುಗಡೆಯಾಗಿ ನಿಮ್ಮ ಕುಟುಂಬದ ಜತೆ ಸುಖದ ಜೀವನ ನಡೆಸಬೇಕು. ಸಮಾಜದಲ್ಲಿ ಇತರರಿಗೆ ಮಾದರಿಯಾಗಿ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು. ಸಾನ್ನಿಧ್ಯ ವಹಿಸಿದ್ದ ಕಮ್ಮರಚೇಡು ಮಠದ ಕಲ್ಯಾಣಸ್ವಾಮೀಜಿ ಮಾತನಾಡಿದರು.
ಅನುರಾಧ ಸಮಿತಿ ವ್ಯಸನ ಮುಕ್ತ ಶಿಬಿರದ ಅಧ್ಯಕ್ಷ ಬಸಂತ ಕುಮಾರ್, ಮುಖಂಡರಾದ ಗೌರಮ್ಮ, ಜಂಬಯ್ಯಸ್ವಾಮಿ, ಶರಬಯ್ಯ, ಕರುಣಾ ಮೂರ್ತಿಶಾಸ್ತ್ರಿ, ಎಂ. ಸಂಗಮೇಶ್, ಲಿಂಗರಾಜ್, ರಾಜಶೇಖರ್, ಶಿಲ್ಪ ಮತ್ತಿತರರಿದ್ದರು.