ಬಳ್ಳಾರಿ: ನಗರದ ವಿಮ್ಸ್ ಆಸ್ಪತ್ರೆಗೆ ಶುಕ್ರವಾರ ಮಧ್ಯರಾತ್ರಿ ದಿಢೀರ್ ಭೇಟಿ ನೀಡಿದ ನಿರ್ದೇಶಕ ಲಕ್ಷ್ಮೀನಾರಾಯಣರೆಡ್ಡಿಯವರು ರಾತ್ರಿ ಪಾಳೆಯದಲ್ಲಿ ಕರ್ತವ್ಯಕ್ಕೆ ಹಾಜರಾಗದ ವೈದ್ಯರು, ಸಿಬ್ಬಂದಿಗಳ ಪರಿಶೀಲನೆ ನಡೆಸಿದ್ದಾರೆ.
ವಿಮ್ಸ್ ಆಸ್ಪತ್ರೆಯಲ್ಲಿ ರಾತ್ರಿ ಪಾಳೆಯದ ವೈದ್ಯರು ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ವಿಮ್ಸ್ ನಿರ್ದೇಶಕ ಲಕ್ಷ್ಮಿನಾರಾಯಣರೆಡ್ಡಿ ಈ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಮ್ಸ್ ಆಸ್ಪತ್ರೆಯ ಐಸಿಯು ವಾರ್ಡ್, ಮಹಿಳಾ ವಾರ್ಡ್, ರಕ್ತಭಂಡಾರ, ಮಕ್ಕಳ ವಿಭಾಗ, ಹೆರಿಗೆ ವಿಭಾಗ, ಸರ್ಜರಿ, ಔಷಧ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಿಗೆ ವಿಮ್ಸ್ ನಿರ್ದೇಶಕ ಡಾ| ಲಕ್ಷ್ಮಿನಾರಾಯಣ ರೆಡ್ಡಿ ಭೇಟಿ ನೀಡಿದರು. ಬಳಿಕ ರೋಗಿಗಳಿಂದ ವೈದ್ಯರ, ಸಿಬ್ಬಂದಿ ಬಗ್ಗೆ ಮಾಹಿತಿ ಪಡೆದರು.
ರಾತ್ರಿ ಪಾಳಯದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡ ವೈದ್ಯರಲ್ಲಿ ಬಹುತೇಕರು ಗೈರಾಗಿರುವುದನ್ನು ಪರಿಶೀಲಿಸಿದರು. ವಾರ್ಡ್‌ಗಳಿಗೆ ಭೇಟಿ ನೀಡಿ ರೋಗಿಗಳಿಗೆ ವೈದ್ಯರು ಚಿಕಿತ್ಸೆ ನೀಡುತ್ತಿರುವ ಬಗ್ಗೆ, ಉಚಿತ ಔಷಧ ವಿತರಣೆ ಕುರಿತು ಮಾಹಿತಿ ಪಡೆದರು. ಈ ವೇಳೆ ಹಲವರು ಆಸ್ಪತ್ರೆಯಲ್ಲಿ ರಾತ್ರಿ ವೇಳೆ ವೈದ್ಯರು ಇರುವುದು ಕಷ್ಟವಾಗಿದೆ. ಅಲ್ಲದೆ, ಔಷಧಗಳನ್ನು ಹೊರಗಡೆ ಖರೀದಿ ಮಾಡುವಂತೆ ಚೀಟಿ ಬರೆದುಕೊಡುತ್ತಿರುವುದರಿಂದ ತೀವ್ರ ತೊಂದರೆ ಉಂಟಾಗಿದ್ದು, ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ರೋಗಿಗಳ ಸಂಬಂಧಿಕರು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಿರ್ದೇಶಕ ಡಾ| ಲಕ್ಷ್ಮಿನಾರಾಯಣ ರೆಡ್ಡಿ, ರಾತ್ರಿ ಪಾಳಯದಲ್ಲಿನ ಕರ್ತವ್ಯಕ್ಕೆ ಗೈರಾದ ವೈದ್ಯರಿಗೆ ನೋಟಿಸ್ ನೀಡಲಾಗುವುದು. ಔಷಧಗಳಿಗಾಗಿ ಹೊರಗಡೆ ಚೀಟಿ ಬರೆದುಕೊಡುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ್ದಾರೆ.