ವೆಂಕೋಬಿ ಸಂಗನಕಲ್ಲು
ಬಳ್ಳಾರಿ: ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ 150ನೇ ಜಯಂತಿಯನ್ನು ವಿಶೇಷವಾಗಿ ಆಚರಿಸಲು ಮುಂದಾಗಿರುವ ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ ಇಲಾಖೆ, ಗಾಂಧಿಧೀಜಿಯವರು ಭೇಟಿ ನೀಡಿರುವ ಸ್ಥಳಗಳನ್ನು ಗುರುತಿಸಿ, ಅಭಿವೃದ್ಧಿ ಪಡಿಸಿ, ಪ್ರವಾಸಿ ವೃತ್ತಗಳನ್ನಾಗಿ ರೂಪಿಸಿ, ದೇಶ-ವಿದೇಶ ಪ್ರವಾಸಿಗರಿಗೆ ಪರಿಚಯಿಸಲು ಮುಂದಾಗುತ್ತಿದೆ.
ಸ್ಥಳಗಳ ಅಭಿವೃದ್ಧಿ: ಗಾಂಧೀಜಿಯವರು ರಾಜ್ಯದ ಯಾವ ಜಿಲ್ಲೆಗಳಿಗೆ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಕಲೆ ಹಾಕಲಾಗುತ್ತಿದ್ದು, ಅಂತಹ ಸ್ಥಳಗಳನ್ನು ಗುರುತಿಸಿ ವರದಿ ನೀಡುವಂತೆ ಆಯಾ ಜಿಲ್ಲಾಡಳಿತಕ್ಕೆ ಕೋರಿದ್ದಾರೆ. ಈ ನಿಟ್ಟಿನಲ್ಲಿ ಗಾಂಧೀಜಿಯವರು ಭೇಟಿ ನೀಡಿದ್ದ ಸ್ಥಳ, ವಾಸ್ತವ್ಯ ಮಾಡಿದ್ದ ಸ್ಥಳ, ಚಳವಳಿ ಆರಂಭಿಸಿದ್ದ ಸ್ಥಳ, ವಿಶ್ರಾಂತಿ ಪಡೆದಿದ್ದ ಸ್ಥಳಗಳನ್ನು ಗುರುತಿಸಲಾಗುತ್ತಿದೆ. ಈ ಎಲ್ಲ ಸ್ಥಳಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸಲಾಗುತ್ತದೆ. ಇದಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸ್ಥಳೀಯ ಹೋಂ ಸ್ಟೇ, ಆಶ್ರಮ, ವಸತಿ ಸೌಲಭ್ಯಗಳೊಂದಿಗೆ ಪ್ರವಾಸಿ ವೃತ್ತವನ್ನಾಗಿ ನಿರ್ಮಿಸಿ ದೇಶ-ವಿದೇಶ ಪ್ರವಾಸಿಗಳ ವೀಕ್ಷಣೆಗೆ ಅನುಕೂಲ ಕಲ್ಪಿಸಲಾಗುತ್ತದೆ.
ಬಳ್ಳಾರಿಗೂ ಭೇಟಿ ನೀಡಿದ್ದ ಗಾಂಧಿ: ಮಹಾತ್ಮಾ ಗಾಂಧೀಜಿಯವರು ಬಳ್ಳಾರಿಗೂ ಭೇಟಿ ನೀಡಿದ್ದು, ಈ ಕುರಿತ ಕುರುಹುಗಳು ಬಳ್ಳಾರಿಯಲ್ಲೂ ಇವೆ. ಸ್ವಾತಂತ್ರ ಪೂರ್ವದಲ್ಲಿ ಬಳ್ಳಾರಿಗೆ ಭೇಟಿ ನೀಡಿದ್ದ ಅವರು ಬಳ್ಳಾರಿಯಿಂದ ಬೇರೆಡೆ ತೆರಳಲು ರೈಲು ನಿಲ್ದಾಣಕ್ಕೆ ಹೋಗಿದ್ದರು. ಆಗ ರೈಲು ತಡವಾದ ಹಿನ್ನೆಲೆಯಲ್ಲಿ ಕೆಲ ಹೊತ್ತು ನಿಲ್ದಾಣದಲ್ಲೇ ವಿಶ್ರಾಂತಿ ಪಡೆದಿದ್ದರು. ಅದರ ನೆನಪಿಗಾಗಿ ರೈಲ್ವೆಯವರು ಅಲ್ಲೊಂದು ಸ್ಮಾರಕ ನಿರ್ಮಿಸಿದ್ದಾರೆ. ಕಳೆದ ವರ್ಷ ಕಲಾವಿದರಿಂದ ಗಾಂಧಿಧೀಜಿಯವರು ಚಿತ್ರವನ್ನೂ ಬರೆಸಿದ್ದಾರೆ. ಇದು ನಿತ್ಯ ನಿಲ್ದಾಣಕ್ಕೆ ಆಗಮಿಸುವ ಪ್ರಯಾಣಿಕರಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ. ಅಲ್ಲದೇ, ಗಾಂಧಿಧೀಜಿಯವರು ಮುನ್ಸಿಪಲ್ ಕಾಲೇಜು ಮೈದಾನಕ್ಕೆ ಮತ್ತು ಕೂಡ್ಲಿಗಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಜತೆಗೆ ಗಾಂಧಿಧೀಜಿಯವರ ಚಿತಾಭಸ್ಮವೂ ಬಳ್ಳಾರಿಯಲ್ಲಿದೆ. ಗಾಂಧೀ ಭೇಟಿ ನೀಡಿದ್ದ ಸ್ಥಳಗಳು ಅಭಿವೃದ್ಧಿಯಾದಲ್ಲಿ ಉಳಿದ ಸ್ಥಳಗಳ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಲು ಸಹಕಾರಿಯಾಗಲಿದೆ.
ಕೇಂದ್ರ ಪ್ರವಾಸೋದ್ಯಮ ಮಂತ್ರಾಲಯ ಮಹಾತ್ಮಾ ಗಾಂಧೀಜಿಯವರು ಎಲ್ಲೆಲ್ಲಿ ಭೇಟಿ ನೀಡಿದ್ದಾರೆ ಎಂಬ ಮಾಹಿತಿ ಕೇಳಿದ್ದಾರೆ. ಅವುಗಳನ್ನು ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲೆಯ ಕೂಡ್ಲಿಗಿ, ಬಳ್ಳಾರಿ ರೈಲು ನಿಲ್ದಾಣ, ಕೊಪ್ಪಳ ಜಿಲ್ಲೆಯ ಬಾಣಾಪುರಕ್ಕೆ ಭೇಟಿ ನೀಡಿದ್ದರು ಎಂಬ ಮಾಹಿತಿಯಿದ್ದು, ಈ ಕುರಿತು ವರದಿ ಕಳುಹಿಸಲಾಗುವುದು. ಜತೆಗೆ ಆಯಾ ಜಿಲ್ಲಾ ಕಂದಾಯ ಇಲಾಖೆಗೂ ಸಂಪರ್ಕಿಸಿ ಈ ಕುರಿತು ಮಾಹಿತಿ ನೀಡುವಂತೆ ಕೋರಲಾಗುವುದು.
•
ಮೋತಿಲಾಲ್ ಲಮಾಣಿ,
ಉಪ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ, ಬಳ್ಳಾರಿ