ಬಳ್ಳಾರಿ: ನಗರದ ಎಲ್ಲ ಬಡಾವಣೆಗಳಿಗೆ ಪಾಲಿಕೆಯಿಂದ ಪೂರೈಕೆಯಾಗುತ್ತಿರುವ ಕಲುಷಿತ ನೀರನ್ನು ತಡೆಹಿಡಿದು ಶುದ್ಧ ಕುಡಿವ ನೀರನ್ನು ಸರಬರಾಜು ಮಾಡುವಂತೆ ಒತ್ತಾಯಿಸಿ ಯುವಸೇನಾ ಸೋಷಿಯಲ್ ಆಕ್ಷನ್ ಕ್ಲಬ್ ವತಿಯಿಂದ ಪಾಲಿಕೆ ಅಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿದರು.
ನಗರದ ಬಹುತೇಕ ಬಡಾವಣೆಗಳಿಗೆ ಮಹಾನಗರ ಪಾಲಿಕೆಯಿಂದ ಪೂರೈಸಲಾಗುತ್ತಿರುವ ಕುಡಿವ ನೀರು ಕಲುಷಿತದಿಂದ ಕೂಡಿದೆ. ಸಂಪೂರ್ಣವಾಗಿ ಶುದ್ಧಗೊಂಡಿಲ್ಲ. ಇಷ್ಟು ದಿನಗಳ ಕಾಲ ನೀರಿನ ಸಮಸ್ಯೆ ಇದ್ದ ಕಾರಣ ನಗರದ ಜನರು ಸಹ ಬಳಸಿದ್ದಾರೆ. ಇದರಿಂದ ಸಾರ್ವಜನಿಕರು ನಾನಾ ಸಮಸ್ಯೆಗಳನ್ನು ಎದುರಿಸುವಂತಾಗಿದ್ದು, ಸಂಬಂಧಪಟ್ಟ ಪಾಲಿಕೆ ಅಧಿಕಾರಿಗಳು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯ ಹೀಗೆ ಮುಂದುವರೆದರೇ ಹೊರಾಟದ ಸ್ವರೂಪ ಬದಲಾಗಲಿದೆ ಎಂದು ಕ್ಲಬ್‌ನ ಅಧ್ಯಕ್ಷ ಮೇಕಲ ಈಶ್ವರರೆಡ್ಡಿ ಮನವಿಯಲ್ಲಿ ಎಚ್ಚರಿಸಿದ್ದಾರೆ.
ಪಾಲಿಕೆಯಿಂದ ನಗರಕ್ಕೆ ಸರಬರಾಜು ಮಾಡುವ ನೀರನ್ನು ಶುದ್ಧೀಕರಣಗೊಳಿಸಿ ಸರಬರಾಜು ಮಾಡಲು ಅಧಿಕಾರಿಗಳು ಮುಂದಾಗಬೇಕು. ಯಾವುದೇ ಕಾರಣಕ್ಕೂ ಕಲುಷಿತ ನೀರು ಸರಬರಾಜು ಆಗದಂತೆ ಎಚ್ಚರ ವಹಿಸಬೇಕು. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಬ್ಲೀಚಿಂಗ್ ಪೌಡರ್ ಹಾಕುವುದರಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ. ಸಾರ್ವಜನಿಕರ ಆರೋಗ್ಯದ ವಿಚಾರದಲ್ಲಿ ಅಧಿಕಾರಿಗಳು ಯಾವುದೇ ಕಾರಣಕ್ಕೂ ಚೆಲ್ಲಾಟ ಆಡಬಾರದು. ಜನರಿಗೆ ಕೈಲಾದಷ್ಟು ಸ್ಪಂದಿಸುವ ಕೆಲಸ ಮಾಡಲು ಮುಂದಾಗಬೇಕು. ನಿರ್ಲಕ್ಷಿಸಿದರೇ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.
ಕಳೆದ ಚುನಾವಣೆಯಲ್ಲಿ ನಗರದ ನಾಗರಿಕರಿಗೆ ನೀಡಿದ ಭರವಸೆಯನ್ನು ಚುನಾಯಿತ ಜನಪ್ರತಿನಿಧಿಗಳು ಮರೆತಿದ್ದು, ನಗರದ ನಾಗರಿಕರಿಗೆ ಕಲುಷಿತ ನೀರೇ ಗತಿಯಾಗಿದೆ. ಚುನಾವಣೆ ವೇಳೆ ಕನಿಷ್ಠ ನಾಲ್ಕು ದಿನಕ್ಕೊಮ್ಮೆ ಶುದ್ಧ ನೀರು ಸರಬರಾಜು ಮಾಡಲಾಗುವುದು. ಹಂತಹಂತವಾಗಿ ಅದನ್ನು ಎರಡು ದಿನಕ್ಕೊಮ್ಮೆ ಮಾಡಲಾಗುವುದು. 24/7 ನೀರು ಸರಬರಾಜು ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಚಾಲನೆ ನೀಡಲಾಗುವುದು ಎಂಧು ನಾಗರಿಕರಿಗೆ ಭರವಸೆ ನೀಡಿದ್ದರು. ಆದರೇ ಚುನಾಯಿಸಿದ ಬಳಿಕ ಎಲ್ಲವನ್ನೂ ಮರೆತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ವಿವಿಧ ಬಡಾವಣೆ ಮುಖಂಡರಾದ ಎಸ್.ಕೃಷ್ಣ, ಜಿ.ಎಂ.ಬಾಷಾ, ಸಲಾವುದ್ದೀನ್ ಎಸ್. ಆರ್, ಉಗಮ್‌ರಾವ್, ಶಿವಕುಮಾರ್, ಶಿವಾನಂದ, ಎಂ.ಕೆ. ಜಗನ್ನಾಥ, ಪಿ.ನಾರಾಯಣ, ಶ್ರೀನಿವಾಸ, ಕರಣಂ ವೆಂಕಟೇಶ, ಶ್ರೀಧರ್, ಎಂ.ಎರ್ರಿಸ್ವಾಮಿ ಮತ್ತಿತರರಿದ್ದರು.