ಬಳ್ಳಾರಿ: ಸಮರ್ಪಕ ಮಳೆಯಾಗದೆ ಸತತ ಬರಗಾಲ ಆವರಿಸುತ್ತಿರುವ ಗಣಿನಾಡು ಬಳ್ಳಾರಿ ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಮೊದಲಬಾರಿಗೆ ಮೋಡ ಬಿತ್ತನೆ ಕಾರ್ಯ ಕೈಗೊಂಡಿದ್ದು, ಮೂರು ದಿನಗಳಾದರೂ ಮಳೆಯಾಗದೆ ವಿಫಲವಾಗಿದೆ.
ರಾಜ್ಯದೆಲ್ಲೆಡೆ ಮಳೆ ಅಬ್ಬರ, ನೆರೆ ಅಬ್ಬರ ಇದ್ದರೆ ಬಳ್ಳಾರಿ ಜಿಲ್ಲೆಗೆ ಮಾತ್ರ ಸಾಧಾರಣ ಮಳೆ ಸಹ ಆಗುತ್ತಿಲ್ಲ. ಈ ಮಧ್ಯೆ ಮಳೆ ಸುರಿಯಲಿ ಎಂದು ರಾಜ್ಯ ಸರ್ಕಾರ ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಮೋಡ ಬಿತ್ತನೆ ಕಾರ್ಯ ಕೈಗೆತ್ತಿಕೊಂಡಿದೆ. ಮೋಡಬಿತ್ತನೆ ಕಾರ್ಯನಿರ್ವಹಿಸುವ ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಕಳೆದ ಆ.6 ರಂದು ಮಂಗಳವಾರ ಜಿಲ್ಲೆಯ ಸಂಡೂರು, ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಮೋಡ ಬಿತ್ತನೆ ಕಾರ್ಯ ಮಾಡಲಾಗಿದ್ದು, ಅಂದು ಯಾವುದೇ ಮಳೆಯಾಗಿಲ್ಲ. ವಾರದಿಂದ ಇರುವ ಜಿಟಿಜಿಟಿ ಮಳೆಯೇ ಮಂಗಳವಾರವೂ ಮುಂದುವರೆದಿದ್ದು, ಮಳೆಗಾಗಿ ಮಾಡಿದ ಮೋಡಬಿತ್ತನೆ ಕಾರ್ಯ ಕೈಕೊಟ್ಟಿದೆ ಎನ್ನಲಾಗಿದೆ.
ಆ.6 ರಂದು ಮಂಗಳವಾರ ಮಧ್ಯಾಹ್ನ 2.24ರಿಂದ ಸಂಜೆ 5.50 ನಿಮಿಷದವರೆಗೆ ಹಗರಿಬೊಮ್ಮನಹಳ್ಳಿ ತಾಲೂಕಿನ ಕೋಗಳಿ, ಬ್ಯಾಸಿಗೇರಿ, ಹಂಪಸಾಗರ, ಹಳೆ ಹಗರಿಬೊಮ್ಮನಹಳ್ಳಿ, ಉಲುವತ್ತಿ ಮತ್ತು ಸಂಡೂರು ತಾಲೂಕಿನ ಸಂಡೂರು, ಮುರಾರಿಪುರ, ಉಬ್ಬಳಗುಂಡಿ, ವಿಠuಲಾಪುರ, ದೋಣಿಮಲೈ ಗ್ರಾಮಗಳಲ್ಲಿ ಮೋಡ ಬಿತ್ತನೆ ಮಾಡಲಾಗಿದೆ. ಆದರೆ, ಎಲ್ಲೂ ಸಹ ನಿರೀಕ್ಷಿತ ಮಳೆ ಆಗಿಲ್ಲ.
ಮೋಡಬಿತ್ತನೆ ಕಾರ್ಯ ಜವಾಬ್ದಾರಿ ಹೊತ್ತ ಅಧಿಕಾರಿಗಳೇ ಹೇಳುವಂತೆ ಬಿತ್ತನೆ ಮಾಡಿದ 15 ನಿಮಿಷದಲ್ಲಿ ಅಥವಾ 30 ರಿಂದ 40 ನಿಮಿಷಗಳಲ್ಲಿ ಉತ್ತಮ ಮಳೆಯಾಗಬೇಕು. ಜೆಟ್ ವಿಮಾನದ ಮೂಲಕ ರಾಕೆಟ್ ರೂಪದ ಫ್ಲೇರ್ಗಳನ್ನು ಆಕಾಶಕ್ಕೆ ಕೊಂಡೊಯ್ದು, ಬೀಜಗಟ್ಟಿದ, ಮಳೆಯಾಗಿ ಭೂಮಿಗೆ ಇಳಿಯಬಲ್ಲ ಮೋಡಗಳ ಮೇಲೆ ಬಿಡಲಾಗುತ್ತದೆ. ಆಗ ಫ್ಲೇರ್ನಲ್ಲಿನ ರಾಸಾಯನಿಕ ಪದಾರ್ಥಗಳು ಬಿಡುಗಡೆಯಾಗಿ ಮಂಜುಗಡ್ಡೆ ರೂಪದ ಮೋಡಗಳು ಕರಗಿ ಮಳೆಯಾಗಿ ಪರಿವರ್ತನೆಯಾಗುತ್ತದೆ. ಆದರೆ, ಜಿಲ್ಲೆಯ ಸಂಡೂರು, ಹಗರಿಬೊಮ್ಮನಹಳ್ಳಿ ತಾಲೂಕಿನ ಆಯ್ದ ಗ್ರಾಮಗಳಲ್ಲಿ ಮೋಡಬಿತ್ತನೆ ಮಾಡಿ ಮೂರು ದಿನಗಳು ಕಳೆದರೂ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ವಿಫಲಾಗಿದೆ.
ಎಂದಿನಂತೆ ಜಿಟಿಜಿಟಿ ಮಳೆ: ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ಆಗದಿದ್ದರೂ, ಆಗೊಮ್ಮೆ ಈಗೊಮ್ಮೆ ಜಿಟಿಜಿಟಿ ಮಳೆಯಾಗುತ್ತಿದೆ. ಮೋಡ ಬಿತ್ತನೆ ಮಾಡಿದ ಕಳೆದ ಆ.6 ರಂದು ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ 6 ಮಿಮೀ ಮಳೆಯಾಗಿದೆ. ಇದು ಈ ತಿಂಗಳ ಆರಂಭದಿಂದಲೂ ಸುರಿಯುತ್ತಿರುವ ಮಳೆಯ ಪ್ರಮಾಣವೂ ಆಗಿದೆ. ಹಾಗೆ ನೋಡಿದರೆ ಮೋಡಬಿತ್ತನೆಯ ಹಿಂದಿನ ದಿನ ಆ.5ರಂದು 4.8 ಮಿಮಿ ಮಳೆಯಾಗಿದ್ದು, ಎಂದಿನಂತೆ ವಾಡಿಕೆ ಮಳೆಯಾಗುತ್ತಿದೆ ಎಂಬುದು ಜಿಲ್ಲಾಡಳಿತದ ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ.
ಇನ್ನು ಸಂಡೂರು ತಾಲೂಕಿನಲ್ಲಿ ಮೋಡಬಿತ್ತನೆಯಾದ ಆ.6 ರಂದು 1.4 ಮಿಮಿ ಮಳೆಯಾಗಿದೆ. ದುರಂತವೆಂದರೆ ಮಾರನೇದಿನ ಆ.7 ರಂದು ತಾಲೂಕಿನಲ್ಲಿ 6 ಮಿಮಿ ಮಳೆಯಾಗಿದೆ. ಈ ತಾಲೂಕಿನಲ್ಲಿ ಮಳೆ ಸುರಿಯುವಿಕೆಯ ಪ್ರಮಾಣ ಆಗಾಗ ಏರುಪೇರು ಆಗುತ್ತಲೇ ಇರುತ್ತದೆ. ಇದರಿಂದ ಜಿಲ್ಲೆಯನ್ನು ಸತತ ಬರ ಪರಿಸ್ಥಿತಿಯಿಂದ ಮುಕ್ತಗೊಳಿಸುವ ಸಲುವಾಗಿ ರಾಜ್ಯ ಸರ್ಕಾರ ಕೈಗೆತ್ತಿಕೊಂಡಿರುವ ಮೋಡಬಿತ್ತನೆಯ ಮೊದಲ ಪ್ರಯತ್ನ ವಿಫಲವಾಗಿದೆ ಎಂಬುದು ಸ್ಪಷ್ಟವಾಗುತ್ತಿದೆ.
ಜಿಲ್ಲೆಯ ಅಧಿಕಾರಿಗಳಿಗಿಲ್ಲ ಮಾಹಿತಿ: ಜಿಲ್ಲೆಯಲ್ಲಿ ಮೋಡ ಬಿತ್ತನೆ ಮಾಡುತ್ತಿರುವ ಕುರಿತು ಜಿಲ್ಲೆಯ ಯಾವ ಅಧಿಕಾರಿಗಳಿಗೂ ಮಾಹಿತಿ ಇಲ್ಲ. ಕೃಷಿ ಇಲಾಖೆ, ತಾಲೂಕು ಆಡಳಿತ ಯಾರನ್ನೇ ಕೇಳಿದರೂ ಈ ಕುರಿತು ಮಾಹಿತಿ ಇಲ್ಲ ಎಂದಷ್ಟೇ ಹೇಳುತ್ತಿದ್ದಾರೆ. ಕೋಟ್ಯಂತರ ರೂಪಾಯಿ ಖರ್ಚುಮಾಡಿ ಕೈಗೊಳ್ಳುವ ಇಂತಹ ಯೋಜನೆ ಬಗ್ಗೆ ಜಿಲ್ಲೆ, ತಾಲೂಕು ಆಡಳಿತಕ್ಕೆ, ಕೃಷಿ ಇಲಾಖೆಗೆ ಮಾಹಿತಿ ನೀಡದೇ ಇರುವುದು ಅಚ್ಚರಿಗೆ ಕಾರಣವಾಗಿದೆ.