ಬಳ್ಳಾರಿ: ಬೀದಿ ಬದಿ ವ್ಯಾಪಾರಿಗಳ ಸಬಲೀಕರಣಕ್ಕಾಗಿ ಮೈತ್ರಿ ಸರ್ಕಾರ ಜಾರಿಗೆ ತಂದಿರುವ ‘ಬಡವರ ಬಂಧು’ ಯೋಜನೆಗೆ ಜಿಲ್ಲೆಯಲ್ಲಿ ಆರಂಭಿಕ ವಿಘ್ನ ಎದುರಾಗಿದೆ. ಸಾಲ ಹಂಚಿಕೆಯಲ್ಲಿ ಜಿಲ್ಲೆ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ. ಆದರೆ ಸಾಲವಸೂಲಿಯಲ್ಲಿ ಹಿಂದೆ ಬಿದ್ದಿದೆ.
Advertisement
ವ್ಯಾಪಾರಿಗಳ ಅನುಕೂಲಕ್ಕಾಗಿ ಮೊದಲ ಮೂರು ತಿಂಗಳ ಅವಧಿಯಲ್ಲಿ ನೀಡಿದ್ದ ಬಡ್ಡಿರಹಿತ ಸಾಲದಲ್ಲಿ ಶೇ.60 ರಷ್ಟು ಮರುಪಾವತಿಯಾಗಿಲ್ಲ. ಇದು ಸಹಕಾರಿ ಬ್ಯಾಂಕ್‌ಗಳ ಚಿಂತೆಗೆ ಕಾರಣವಾಗಿದೆ. ಯೋಜನೆಯಡಿ ಅತಿ ಹೆಚ್ಚು ವ್ಯಾಪಾರಿಗಳಿಗೆ ಸಾಲ ನೀಡುವ ಮೂಲಕ ರಾಜ್ಯದಲ್ಲೇ ಬಳ್ಳಾರಿ ಪ್ರಥಮ ಸ್ಥಾನದಲ್ಲಿದೆ ಎಂಬುದು ಸಮಾಧಾನದ ಸಂಗತಿಯಾದರೂ ನಿರೀಕ್ಷಿತ ಮಟ್ಟದಲ್ಲಿ ಸಾಲ ವಸೂಲಿಯಾಗದಿರುವುದು ಯೋಜನೆಗೆ ಹಿನ್ನಡೆಯಾಗಿದೆ.
Related Articles
Advertisement
3 ರಿಂದ ಹತ್ತು ಸಾವಿರವರೆಗೆ ಸಾಲ: ಬಳ್ಳಾರಿ ನಗರದ 711, ಸಂಡೂರು 103, ಸಿರುಗುಪ್ಪ 171, ಕೊಟ್ಟೂರು 154, ಹಡಗಲಿ 167, ಹ.ಬೊ.ಹಳ್ಳಿ 241, ಕಂಪ್ಲಿ 210, ಹೊಸಪೇಟೆ 636, ಕೂಡ್ಲಿಗಿ 148, ಕುರುಗೋಡಿನ 90 ಮಂದಿ ಸೇರಿ ಒಟ್ಟು 2868 ಬೀದಿ ವ್ಯಾಪಾರಿಗಳಿಗೆ ಸಾಲ ನೀಡಲಾಗಿದೆ. ಇದರಲ್ಲಿ ಶೇ.40 ರಷ್ಟು ವ್ಯಾಪಾರಿಗಳಿಗೆ 10 ಸಾವಿರ ರೂ.ಗಳವರೆಗೆ, ಶೇ.60 ರಷ್ಟು ವ್ಯಾಪಾರಿಗಳಿಗೆ 3000-5000 ರೂ.ಗಳವರೆಗೆ ಸಾಲ ನೀಡಲಾಗಿದೆ. ಸಾಲ ಪಡೆದ ವ್ಯಾಪಾರಿಗಳ ಹೆಸರಲ್ಲಿ ಆಯಾ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆ ಆರಂಭಿಸಲಾಗಿದೆ. ಸಾಲ ಪಡೆದವರು ಅಂದಿನ ಆದಾಯವನ್ನು ತಮ್ಮ ಖಾತೆಗಳಿಗೆ ಜಮಾಗೊಳಿಸಿದಲ್ಲಿ ಮೂರು ತಿಂಗಳಲ್ಲಿ ಬಡ್ಡಿರಹಿತವಾಗಿ ಸಾಲ ಮರು ಪಾವತಿಯಾಗಲಿದೆ. ನಂತರ ಖಾತೆಯಲ್ಲಿ ಉಳಿದ ಹಣಕ್ಕೂ ಬ್ಯಾಂಕ್‌ನಿಂದ ವರ್ಷಕ್ಕೆ ಶೇ.4ರಷ್ಟು ಬಡ್ಡಿ ನೀಡಲಾಗುತ್ತದೆ. ವ್ಯಾಪಾರಿಗಳಿಗೆ ಇಷ್ಟೆಲ್ಲ ಸೌಲಭ್ಯ ಕಲ್ಪಿಸಿದರೂ, ಸಾಲ ಮರುಪಾವತಿ ಮಾಡುತ್ತಿಲ್ಲ. ಕೇವಲ ಶೇ.40 ರಷ್ಟು ಮಾತ್ರ ಮರುಪಾವತಿಯಾಗಿದ್ದು, ಶೇ.60 ರಷ್ಟು ಬಾಕಿ ಉಳಿದಿರುವುದು ಸಹಕಾರಿ ಇಲಾಖೆ ಅಧಿಕಾರಿಗಳ ಬೇಸರಕ್ಕೆ ಕಾರಣವಾಗಿದೆ.
ಸಾಲಮನ್ನಾ ಭೀತಿ: ‘ಬಡವರ ಬಂಧು’ ಯೋಜನೆ ಘೋಷಿಸಿರುವ ಮೈತ್ರಿ ಸರ್ಕಾರ ಅದಕ್ಕೆ ಯಾವುದೇ ಅನುದಾನವನ್ನೂ ನೀಡಿಲ್ಲ. ಸ್ಥಳೀಯ ಬಿಡಿಸಿಸಿ ಬ್ಯಾಂಕ್ ಮತ್ತು ಬಳ್ಳಾರಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ವತಿಯಿಂದ ಸ್ಥಳೀಯ ಪಾಲಿಕೆ, ನಗರಸಭೆ, ಪಪಂ, ಪುರಸಭೆಯಲ್ಲಿ ಪರವಾನಗಿ ಪಡೆದ ವ್ಯಾಪಾರಿಗಳಿಗೆ ಮಾತ್ರ ಸಾಲ ನೀಡುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ನಿಗದಿತ 3 ಸಾವಿರ ವ್ಯಾಪಾರಿಗಳ ಗುರಿಯಲ್ಲಿ ಬಳ್ಳಾರಿ ಜಿಲ್ಲೆ ಶೇ.95 ರಷ್ಟು ಗುರಿ ತಲುಪಿದೆ. ಆದರೆ, ಸಮರ್ಪಕವಾಗಿ ಸಾಲ ಮರುಪಾವತಿಯಾಗದ ಹಿನ್ನೆಲೆಯಲ್ಲಿ ಈ ಸಾಲವನ್ನೂ ಮನ್ನಾ ಮಾಡಲಾಗುತ್ತದೆಯೇ ಎಂಬ ಆತಂಕ ಬ್ಯಾಂಕ್‌ಗಳ ನಿರ್ದೇಶಕರನ್ನು ಕಾಡುತ್ತಿದೆ. ಹಾಗಾಗಿ ಮರುಪಾವತಿಸದ ವ್ಯಾಪಾರಿಗಳನ್ನು ಕೈಬಿಟ್ಟು, ನಿಗದಿತ ಅವಧಿಯಲ್ಲಿ ಮರುಪಾವತಿಸುವ ವ್ಯಾಪಾರಿಗಳಿಗಷ್ಟೇ ಎರಡನೇ ಹಂತದಲ್ಲಿ ಸಾಲ ನೀಡಲು ಚಿಂತನೆ ನಡೆಸಲಾಗುತ್ತಿದೆ.
ರಾಜ್ಯ ಸರ್ಕಾರ ಬೀದಿಬದಿ ವ್ಯಾಪಾರಿಗಳ ಆರ್ಥಿಕಾಭಿವೃದ್ಧಿ ಮತ್ತು ಖಾಸಗಿ ಲೇವಾದೇವಿದಾರರ ಬಡ್ಡಿಯಿಂದ ಮುಕ್ತಗೊಳಿಸುವ ಸಲುವಾಗಿ ಬಡವರ ಬಂಧು ಯೋಜನೆ ಜಾರಿಗೆ ತರಲಾಯಿತು. ಯೋಜನೆಯಡಿ ಕಳೆದ ಮಾರ್ಚ್ ತಿಂಗಳಲ್ಲಿ ಜಿಲ್ಲೆಯಲ್ಲಿ ಒಟ್ಟು 2861 ವ್ಯಾಪಾರಿಗಳಿಗೆ ಒಟ್ಟು 82,96,500 ರೂ.ಗಳನ್ನು ಸ್ಥಳೀಯ ಡಿಸಿಸಿ, ಬಳ್ಳಾರಿ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಿಂದ ಕೊಡಿಸಲಾಗಿದೆ. ಸಾಲ ಪಡೆದವರ ಪೈಕಿ ಶೇ.40 ರಷ್ಟು ಮಾತ್ರ ಮರುಪಾವತಿಯಾಗಿದೆ. ಬಳ್ಳಾರಿ ಜಿಲ್ಲೆಯ ಶೇ.95 ರಷ್ಟು ಗುರಿ ಸಾಧಿಸಿದ್ದು, ರಾಜ್ಯದಲ್ಲೇ ಪ್ರಥಮ ಸ್ಥಾನದಲ್ಲಿದೆ.•ಸುನೀತಾ ಸಿದ್ರಾಮ್
ನಿಬಂಧಕರು, ಸಹಕಾರಿ ಇಲಾಖೆ, ಬಳ್ಳಾರಿ.