Advertisement

ಅನಕ್ಷರತೆಯಿಂದ ಅಪರಾಧ ಹೆಚ್ಚಳ

04:52 PM Dec 14, 2019 | Naveen |

ಬಳ್ಳಾರಿ: ಕಾನೂನು ಉಲ್ಲಂಘಿಸುವುದೇ ಅಪರಾಧವಾಗಿದ್ದು, ಪ್ರಾಣ ಉಳಿಸಲೆಂದೇ ಇರುವ ಸಂಚಾರಿ ನಿಯಮಗಳನ್ನು ಸಾರ್ವಜನಿಕರು ಪಾಲಿಸಬೇಕು ಎಂದು ಹೆಚ್ಚುವರಿ ಎಸ್‌ಪಿ ಬಿ.ಎಸ್‌.ಲಾವಣ್ಯ ಹೇಳಿದರು.

Advertisement

ನಗರದ ಬಿಪಿಎಸ್‌ಸಿ ಪಬ್ಲಿಕ್‌ ಶಾಲೆಯಲ್ಲಿ ಜಿಲ್ಲಾ ಪೊಲೀಸ್‌ ಇಲಾಖೆ, ಗ್ರಾಮಾಂತರ ಪೊಲೀಸ್‌ ಠಾಣೆ, ಸನ್ಮಾರ್ಗ ಗೆಳೆಯರ ಬಳಗದಿಂದ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಅಪರಾಧ ತಡೆ ಮಾಸಾಚರಣೆ ನಿಮಿತ್ತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕಾನೂನಿಗೆ ವಿರುದ್ಧವಾಗಿ ನಡೆಯುವುದೇ ಅಪರಾಧವಾಗಿದೆ. ಪೊಲೀಸರು ಸಂಚಾರಿ ನಿಯಮಗಳು ಹಾಕಿರುತ್ತಾರೆ. ಈ ನಿಯಮಗಳು ಸಾರ್ವಜನಿಕರ ಪ್ರಾಣ ಉಳಿಸುವುದಕ್ಕಾಗಿ ಇವೆ. ಆದರೆ ನಿಯಮಗಳನ್ನು ಪಾಲಿಸದ ಸಾರ್ವಜನಿಕರು ವಾಮ ಮಾರ್ಗಗಳನ್ನು ಅನುಸರಿಸುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜನಸಂಖ್ಯೆ ಇದೆ. ಎಲ್ಲರನ್ನು ರಕ್ಷಣೆ ಮಾಡುವುದು ಕೇವಲ ಪೊಲೀಸರಿಂದಲೇ ಸಾಧ್ಯವಾಗಲ್ಲ. ಸಾರ್ವಜನಿಕರು ಸಹ ತಮ್ಮ ಜವಾಬ್ದಾರಿಯನ್ನು ಅರಿತು ಕಾನೂನು ಪಾಲಿಸಬೇಕು. ಒಂದುವೇಳೆ ತೊಂದರೆ ಪೊಲೀಸ್‌ ಇಲಾಖೆಗೆ ಮಾಹಿತಿ ನೀಸಿ ಸಹಕರಿಸಬೇಕು. ಕಡ್ಡಾಯವಾಗಿ ಹೆಲ್ಮೆಟ್‌ ಬಳಸಬೇಕು. ಅಪರಾದಗಳನ್ನು ತಡೆಗಟ್ಟುವುದು ಹಾಗೂ ಆಗದೇ ಇರುವಂತೆ ನೋಡಿಕೊಳ್ಳುವುದು ಎಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು. ಇತ್ತೀಚಿನ ದಿನಗಳಲ್ಲಿ ಸೈಬರ್‌ ಕ್ರೈಂ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಯುವಜನರು ಇಂಟರ್‌ನೆಟ್‌ ಬಳಕೆ ಹಾಗೂ ಸೋಷಿಯಲ್‌ ಮೀಡಿಯಾ ಬಳಕೆ ಮಾಡುವಾಗ ತುಂಬಾ ಮುನ್ನೆಚ್ಚರಿಕೆ ವಹಿಸಬೇಕು. ನಿಮಗೆ ತಿಳಿಯದೇ ನಿಮ್ಮ ಖಾಸಗಿ ಮಾಹಿತಿಯನ್ನು ಗೌಪ್ಯವಾಗಿ ಕದಿಯುವವರಿದ್ದಾರೆ ಅನಾಮಧೇಯ ವ್ಯಕ್ತಿ ಹಾಗೂ ವಿಚಾರಗಳಿಗೆ ಸ್ಪಂದಿಸುವಾಗ ಎಚ್ಚರ ವಹಿಸಬೇಕು. ಅಪರಿಚಿತರ ಸಂದೇಶಗಳಿಗೆ ಕಿವಿಗೊಡಬಾರದು ಎಂದು ಸಲಹೆ ನೀಡಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾನೂನು ಅಧಿಕಾರಿ ಅನುರಾಧ ಪೋಕ್ಸೋ ಕಾಯಿದೆ ಬಗ್ಗೆ ಮಾಹಿತಿ ನೀಡಿದರು. ಗ್ರಾಮೀಣ ಡಿವೈಎಸ್‌ಪಿ ಅರುಣ್‌ಕುಮಾರ್‌ ಜಿ.ಕೊಳೂರು, ಶಾಲೆಯ ಅಧ್ಯಕ್ಷ ಎಸ್‌. ಜೆ.ವಿ.ಮಹಿಪಾಲ್‌ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಾಸ್ಯ ಕಲಾವಿದ ಎ.ಎರ್ರಿಸ್ವಾಮಿ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಾಮೀಣ ಠಾಣೆ ಸಿಪಿಐ ಶ್ರೀನಿವಾಸ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಿಎಸ್‌ಐ ವೈ.ಎಸ್‌.
ಹನುಮಂತಪ್ಪ ವಂದಿಸಿದರು. ಸನ್ಮಾರ್ಗ ಗೆಳೆಯರ ಬಳಗದ ಚಂದ್ರಶೇಖರ ಆಚಾರ್‌, ಎಸ್‌.ಸತ್ಯನಾರಾಯಣ, ಕೆ.ಬಸವರಾಜ್‌, ಲಕ್ಷ್ಮಣ, ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next