Advertisement

ಜೂ.1ರಿಂದ ವಿಎಸ್‌ಕೆ ವಿವಿ ಎದುರು ಪ್ರತಿಭಟನೆ

12:59 PM May 23, 2019 | Team Udayavani |

ಬಳ್ಳಾರಿ: ಇಲ್ಲಿನ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದಲ್ಲಿ ವಿವಿಧ ಹುದ್ದೆಗಳ ನೇಮಕಾತಿ ಅಕ್ರಮದಿಂದ ಕೂಡಿದ್ದು, ಸಂಬಂಧಪಟ್ಟವರು ಕ್ರಮ ಕೈಗೊಳ್ಳುವವರೆಗೂ ಜೂನ್‌ 1ರಿಂದ ವಿವಿ ಎದುರು ನಿರಂತರ ಪ್ರತಿಭಟನೆ ನಡೆಸಲಾಗುವುದು ಎಂದು ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌ ಜಿಲ್ಲಾ ಕಾರ್ಯದರ್ಶಿ ಯುವರಾಜ್‌ ಹೇಳಿದರು.

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಎಸ್‌ಕೆ ವಿವಿಯಲ್ಲಿ ಖಾಲಿಯಿರುವ ಬೋಧಕ, ಬೋಧಕೇತರ ಹುದ್ದೆಗಳ ನೇಮಕಾತಿಗಾಗಿ 2016ರಿಂದ ಒಟ್ಟು ನಾಲ್ಕು ಬಾರಿ ಜಾಹೀರಾತು ಪ್ರಕಟಿಸಲಾಗಿದೆ. ಆದರೆ, ಈ ನಾಲ್ಕು ಪ್ರಕಟಣೆಗಳಲ್ಲಿ ಹಲವು ವ್ಯತ್ಯಾಸಗಳು ಕಂಡುಬಂದಿದ್ದು, ಒಂದಕ್ಕೊಂದು ಸಾಮ್ಯತೆಯಿಲ್ಲ. ಪ್ರತಿ ಪ್ರಕಟಣೆಯಲ್ಲೂ ಮೀಸಲಾತಿಯಲ್ಲಿ ವ್ಯತ್ಯಾಸ ಕಂಡುಬರುತ್ತಿದೆ. ಈ ಮೊದಲಿನ ಉಪಕುಲಸಚಿವರ ನೇಮಕಾತಿ ಅಧಿಸೂಚನೆಯಲ್ಲಿ ಪರಿಶಿಷ್ಟ ಜಾತಿ ಎಂದಿತ್ತು. ಆದರೆ, ನಂತರ ಪ್ರಕಟಿಸಿದ ಅಧಿಸೂಚನೆಯಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನೀಡಲಾಗಿದೆ. ಹೀಗೆ ಅಧಿಸೂಚನೆಗಳು ಗೊಂದಲದಿಂದ ಕೂಡಿವೆ. ನೇಮಕಾತಿಗೆ ಮಾಡಲು ಸಮಾಜ ಕಲ್ಯಾಣ ಇಲಾಖೆಗೆ ಯಾವುದೇ ಮಾಹಿತಿ ನೀಡದೇ, ಮನಬಂದಂತೆ ತರಾತುರಿಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು.

ಮೇ 6ರಂದು ಹೊರಡಿಸಿದ ಅಧಿಸೂಚನೆಯಲ್ಲಿ ನಾನ್‌ ಹೈಕ ಎಂದು ತಪ್ಪಾಗಿ ಪ್ರಕಟಣೆ ನೀಡಿ ಈ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವೆಸಗಿದ್ದಾರೆ. ಅರ್ಜಿ ಸಲ್ಲಿಕೆಗೆ ಕಾಲಾವಕಾಶವೂ ನೀಡದೇ ವಂಚಿಸಿದ್ದಾರೆ. ಕುಲಪತಿ ಪ್ರೊ| ಸುಭಾಷ್‌ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಕೇಳಲು ಹೋದವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸುವುದಾಗಿ ಬೆದರಿಸುತ್ತಾರೆ. ನಿಮ್ಮ ಭವಿಷ್ಯವನ್ನು ನೀವೇ ಹಾಳು ಮಾಡಿಕೊಳ್ಳಬೇಡಿ ಎಂದು ಬೆದರಿಸುತ್ತಿದ್ದಾರೆ ಎಂದರು.

ಆಡಳಿತ ವಿಭಾಗದ ಕುಲಸಚಿವರನ್ನು ನೇಮಕಾತಿ ಪ್ರಕ್ರಿಯೆಯಿಂದ ಹೊರಗಿಟ್ಟು ಸ್ವತಃ ಗಣಕ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಹುದ್ದೆಗೆ ಅರ್ಜಿ ಸಲ್ಲಿಸಿರುವ ವಿವಿಯ ಮೌಲ್ಯಮಾಪನ ಕುಲಸಚಿವರು ಭಾಗವಹಿಸಿದ್ದಾರೆ. ಇದು ಅಕ್ರಮ ನೇಮಕಾತಿಗೆ ಸಾಕ್ಷಿಯಾಗಿದೆ. ಕುಲಪತಿಗಳ ನಿವೃತ್ತಿ ದಿನಗಳು ಸಮೀಪಿಸುತ್ತಿದ್ದಂತೆ ಈ ರೀತಿಯಲ್ಲಿ ವರ್ತನೆ ಮಾಡುತ್ತಿದ್ದಾರೆ. ಇವೆಲ್ಲವನ್ನು ಬಿಟ್ಟು ಹೈ.ಕ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಯಾವುದೇ ಅನ್ಯಾಯ ಮಾಡದೇ, ನ್ಯಾಯ ಕೋಡಬೇಕು. ಈ ಎಲ್ಲಾ ಬೆಳವಣಿಗೆಗಳ ಬಗ್ಗೆ ರಾಜ್ಯಪಾಲರಿಗೆ ಪತ್ರ ಬರೆಯಲಾಗಿದೆ. ಜೂನ್‌ 1ರೊಳಗಾಗಿ ಉತ್ತರ ಬರದಿದ್ದರೆ, ವಿವಿ ಮುಂದೆ ಧರಣಿ ನಡೆಸಲಾಗುವುದು. ಹೋರಾಟಕ್ಕೆ ಮಣಿಯದಿದ್ದರೆ ಆ ನಂತರ ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು. ಜಿಲ್ಲಾ ಸಂಚಾಲಕ ಶ್ರೀಕಾಂತ್‌ ರೆಡ್ಡಿ, ವೀರನಗೌಡ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next