Advertisement

ವರ್ಷಕ್ಕೆ 722 ಕೊಳವೆಬಾವಿ ಕೊರೆಸಿದ್ರು

11:23 AM May 09, 2019 | Naveen |

ಬಳ್ಳಾರಿ: ಬಿಸಿಲನಾಡು ಬಳ್ಳಾರಿ ಜಿಲ್ಲೆಯಲ್ಲಿ ತುಂಗಭದ್ರಾ ಜಲಾಶಯವಿದ್ದರೂ, ಬಹುತೇಕ ಗ್ರಾಮಗಳಲ್ಲಿ ಸಮರ್ಪಕ ಕುಡಿವ ನೀರಿನ ಸೌಲಭ್ಯವಿಲ್ಲ. ಇದನ್ನು ನೀಗಿಸಲು ಪರ್ಯಾಯ ವ್ಯವಸ್ಥೆ ಕಂಡುಕೊಂಡಿರುವ ಜಿಲ್ಲಾಡಳಿತ ಕಳೆದ ಒಂದು ವರ್ಷದಲ್ಲಿ ಜಿಲ್ಲೆಯಾದ್ಯಂತ ಹೊಸದಾಗಿ 722 ಬೋರ್‌ವೆಲ್ಗಳನ್ನು ಕೊರೆಸಿದೆ. ಇದರಲ್ಲಿ 167 ಬೋರ್‌ವೆಲ್ಗಳು ನಿಷ್ಕ್ರಿಯವಾಗಿವೆ.

Advertisement

ಜಿಲ್ಲೆಯ ಎಲ್ಲ ತಾಲೂಕುಗಳ ಬಹುತೇಕ ಗ್ರಾಮಗಳಲ್ಲಿ ಇಂದಿಗೂ ಸಮರ್ಪಕ ಕುಡಿವ ನೀರಿನ ವ್ಯವಸ್ಥೆ ಇಲ್ಲ. ಕೆಲ ಗ್ರಾಮಗಳಿಗೆ ಕೆರೆ, ಶುದ್ಧ ಕುಡಿಯುವ ನೀರಿನ ಘಟಕಗಳ ಮೂಲಕ ಕುಡಿವ ನೀರು ಸರಬರಾಜು ಮಾಡಲಾಗುತ್ತಿದೆ. ಕೆರೆಗಳು ಬತ್ತಿ ಹೋಗಿ ನೀರಿನ ಕೊರತೆಯುಳ್ಳ ಗ್ರಾಮಗಳಲ್ಲಿ ಪರ್ಯಾಯವಾಗಿ ಬೋರ್‌ವೆಲ್ ಕೊರೆಸಿ ನೀರು ಪೂರೈಸುವುದು ಅಥವಾ ಖಾಸಗಿಯವರಿಂದ ಬೋರ್‌ವೆಲ್ಗಳನ್ನು ಬಾಡಿಗೆಗೆ ಪಡೆದು ಅಲ್ಲಿನ ಜನರಿಗೆ ಕುಡಿಯಲು ನೀರು ಪೂರೈಕೆ ಮಾಡಲಾಗುತ್ತಿದೆ. ಹೀಗೆ ಜಿಲ್ಲೆಯಾದ್ಯಂತ ಒಟ್ಟು 191 ಹಳ್ಳಿಗಳಲ್ಲಿ 281 ಬೋರ್‌ವೆಲ್ಗಳನ್ನು ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ. ಜತೆಗೆ ಜಿಲ್ಲೆಯಾದ್ಯಂತ ಕಳೆದ 2018 ಮಾರ್ಚ್‌ ತಿಂಗಳಿಂದ 2019 ಏಪ್ರಿಲ್ವರೆಗೆ ಹೊಸದಾಗಿ ಒಟ್ಟು 722 ಬೋರ್‌ವೆಲ್ಗಳನ್ನು ಕೊರೆಸಲಾಗಿದ್ದು, ಇದರಲ್ಲಿ 565 ಯಶಸ್ವಿಯಾಗಿ, 167 ಬೋರ್‌ವೆಲ್ಗಳು ನಿಷ್ಕ್ರಿಯ (ಫೇಲ್)ವಾಗಿವೆ.

ಬಳ್ಳಾರಿ ತಾಲೂಕಿನಲ್ಲಿ ಕೊರೆಸಲಾದ 77 ಬೋರ್‌ವೆಲ್ಗಳ ಪೈಕಿ 64 ಯಶಸ್ವಿಯಾಗಿದ್ದು, 13 ಫೇಲ್ ಆಗಿವೆ. ಹಡಗಲಿಯಲ್ಲಿ 108 ಬೋರ್‌ವೆಲ್ ಪೈಕಿ 104 ಯಶಸ್ವಿಯಾಗಿದ್ದು, ಕೇವಲ 4 ಬೋರ್‌ವೆಲ್ಗಳು ಮಾತ್ರ ಫೇಲ್ ಆಗಿವೆ. ಇನ್ನುಳಿದಂತೆ ಹ.ಬೊ.ಹಳ್ಳಿಯಲ್ಲಿ 49ರಲ್ಲಿ 24 ಯಶಸ್ವಿ, 25 ಫೇಲ್, ಹೊಸಪೇಟೆ 85ರಲ್ಲಿ 67 ಯಶಸ್ವಿ, 18 ಫೇಲ್, ಕೂಡ್ಲಿಗಿ 144ರಲ್ಲಿ 115 ಯಶಸ್ವಿ, 29 ಫೇಲ್, ಸಂಡೂರು 194ರಲ್ಲಿ 126 ಯಶಸ್ವಿಯಾಗಿದ್ದು, 68 ಫೇಲ್ ಆಗಿವೆ. ಸಿರುಗುಪ್ಪ ತಾಲೂಕಿನಲ್ಲಿ ಕೊರೆಸಲಾಗಿದ್ದ 65 ಬೋರ್‌ವೆಲ್ಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿವೆ. ಪ್ರತಿಯೊಂದು ಬೋರ್‌ವೆಲ್ ಕೊರೆಸಲು ಅಂದಾಜು 45 ಸಾವಿರ ರೂ.ಗಳಿಂದ 60 ಸಾವಿರ ರೂ.ಗಳವರೆಗೆ ವೆಚ್ಚವಾಗಲಿದ್ದು, ಕುಡಿಯುವ ನೀರಿನ ಸಲುವಾಗಿ ಬೋರ್‌ವೆಲ್ ಕೊರೆಸಲು ಅಂದಾಜು ಮೂರ್‍ನಾಲ್ಕು ಕೋಟಿ ರೂ. ವೆಚ್ಚವಾಗಿದೆ ಎಂದು ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆಯ ಅಂಕಿ ಅಂಶಗಳು ಸ್ಪಷ್ಟಪಡಿಸುತ್ತವೆ.

ಟ್ಯಾಂಕರ್‌ ನೀರು ಪೂರೈಕೆ: ಬೇಸಿಗೆಯಲ್ಲಿ ಜಿಲ್ಲೆಯಾದ್ಯಂತ ಕುಡಿವ ನೀರಿನ ಸಮಸ್ಯೆ ಉಲ್ಬಣಿಸಿದ ಪರಿಣಾಮ 51 ಗ್ರಾಮಗಳಲ್ಲಿ ಸರ್ಕಾರಿ ಮತ್ತು ಖಾಸಗಿ ಟ್ಯಾಂಕರ್‌ಗಳಿಂದ ನೀರು ಪೂರೈಸಲಾಗುತ್ತಿದೆ. ಬಳ್ಳಾರಿ ತಾಲೂಕು 6 ಗ್ರಾಮಗಳು, ಕೂಡ್ಲಿಗಿ 25, ಸಂಡೂರು 4, ಹರಪನಹಳ್ಳಿ 15 ಸೇರಿ ಒಟ್ಟು 51 ಗ್ರಾಮಗಳಲ್ಲಿ ಟ್ಯಾಂಕರ್‌ಗಳಿಂದ ನೀರು ಸರಬರಾಜು ಮಾಡಲಾಗುತ್ತಿದೆ. ನಾಲ್ಕು ಸರ್ಕಾರಿ ಟ್ಯಾಂಕರ್‌, 78 ಖಾಸಗಿ ಸೇರಿ ಒಟ್ಟು 82 ಟ್ಯಾಂಕರ್‌ಗಳು ನೆರೆಹೊರೆಯಲ್ಲಿ ಖಾಸಗಿಯವರಿಂದ ಬಾಡಿಗೆಗೆ ಪಡೆದಿರುವ ಬೋರ್‌ವೆಲ್ಗಳಿಂದ ನೀರು ಪಡೆದು ದಿನಕ್ಕೆ 334 ಟ್ರಿಪ್‌ ನೀರನ್ನು ಗ್ರಾಮಗಳಿಗೆ ಸರಬರಾಜು ಮಾಡಲಾಗುತ್ತಿದೆ. ಬೇಸಿಗೆ ದಿನಗಳಲ್ಲಿ ಕುಡಿವ ನೀರಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಕುಡಿವ ನೀರಿನ ಸಮಸ್ಯೆಯುಳ್ಳ ಗ್ರಾಮಗಳಲ್ಲಿ ಮೊದಲು ಬೋರ್‌ವೆಲ್ ಕೊರೆಸುವುದು, ನೀರು ಬೀಳದಿದ್ದಲ್ಲಿ ಪರ್ಯಾಯವಾಗಿ ಖಾಸಗಿಯವರಿಂದ ಬೋರ್‌ವೆಲ್ ಬಾಡಿಗೆಗೆ ಪಡೆದು ನೀರು ಪೂರೈಸಲು ಅವಕಾಶ ಕಲ್ಪಿಸಿಕೊಡಲು ಮೊದಲು ಕ್ರಮಕೈಗೊಳ್ಳಲಾಗುವುದು ಎನ್ನುತ್ತಾರೆ ಇಲಾಖೆಯ ಅಧಿಕಾರಿಗಳು.

ಕುಡಿಯುವ ನೀರಿನ ಸಮಸ್ಯೆಯುಳ್ಳ ಗ್ರಾಮಗಳಲ್ಲಿ ನೀರು ಪೂರೈಸುವುದು ಮೊದಲ ಆದ್ಯತೆಯಾಗಿದೆ. ಅದಕ್ಕಾಗಿ ನೀರಿನ ಸಮಸ್ಯೆಯುಳ್ಳ ಗ್ರಾಮಗಳಲ್ಲಿ ಕಳದ ಒಂದು ವರ್ಷದಲ್ಲಿ ಜಿಲ್ಲೆಯಾದ್ಯಂತ ಹೊಸದಾಗಿ ಒಟ್ಟು 722 ಬೋರ್‌ವೆಲ್ ಕೊರೆಸಲಾಗಿದೆ. ಇದರಲ್ಲಿ 565 ಯಶಸ್ವಿಯಾಗಿದ್ದು, 167 ಫೇಲ್ ಆಗಿವೆ. ಬೋರ್‌ವೆಲ್ ಫೇಲ್ ಆಗಿರುವ ಕಡೆ ಪರ್ಯಾಯವಾಗಿ ಖಾಸಗಿಯವರಿಂದ ಬಾಡಿಗೆಗೆ ಪಡೆದ ಬೋರ್‌ವೆಲ್ಗಳ ಮೂಲಕ ಗ್ರಾಮಗಳಿಗೆ ಕುಡಿವ ನೀರು ಪೂರೈಕೆ ಮಾಡಲಾಗುತ್ತಿದೆ.
•ಶಶಿಧರ್‌, ಕಾರ್ಯನಿರ್ವಾಹಕ ಅಭಿಯಂತರು,
ಗ್ರಾಮೀಣ ಕುಡಿವ ನೀರು ಸರಬರಾಜು ಇಲಾಖೆ, ಬಳ್ಳಾರಿ.

Advertisement

ವೆಂಕೋಬಿ ಸಂಗನಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next