ಬಳ್ಳಾರಿ: ರಾಜ್ಯ ಸರ್ಕಾರವು ವಿವಿಧ ಇಲಾಖೆಗಳ ಮೂಲಕ ಹಲವಾರು ಯೋಜನೆಗಳು ಜಾರಿಗೆ ತರುತ್ತಿದ್ದು, ಯುವಕರು ಯೋಜನೆಗಳ ಬಗ್ಗೆ ಮಾಹಿತಿ ತಿಳಿದುಕೊಂಡು ಸದುಪಯೋಗ ಪಡೆದುಕೊಂಡಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದು ಸಿರುಗುಪ್ಪ ಶಾಸಕ ಎಂ.ಎಸ್. ಸೋಮಲಿಂಗಪ್ಪ ಹೇಳಿದರು.
ನಗರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಗಿರಿಜನ ಉಪಯೋಜನೆಯಡಿ ಮೀಸಲು ಕ್ಷೇತ್ರದ ಪರಿಶಿಷ್ಟ ಪಂಗಡದ ನಿರುದ್ಯೋಗಿ ಯುವಕ-ಯುವತಿಯರಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ಯೋಜನೆಗಳ ಕುರಿತು 2 ದಿನಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸರ್ಕಾರವು ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗಾಗಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಸಣ್ಣ ಕೈಗಾರಿಕೆಗಳ ಸ್ಥಾಪನೆಗೆ ಸುಮಾರು 1 ಕೋಟಿ ರೂವರೆಗೂ ಆರ್ಥಿಕ ನೆರವು ಹಾಗೂ ಸಹಾಯಧನ ನೀಡುತ್ತಿದೆ. ಬ್ಯಾಂಕ್‌ಗಳ ಮೂಲಕ ಸಾಲ ಪಡೆದು ಉದ್ದಿಮೆಗಳನ್ನು ಸ್ಥಾಪಿಸಿಕೊಂಡು ಸಕಾಲದಲ್ಲಿ ಸಾಲ ಮರುಪಾವತಿ, ಸರ್ಕಾರದ ಸಹಾಯಧನವನ್ನು ಕೂಡ ಪಡೆದುಕೊಂಡು ಯಶಸ್ವಿಯಾಗಿ ಜವಳಿ ಕ್ಷೇತ್ರದಲ್ಲಿ ಜೀನ್ಸ್ ಉದ್ಯಮ, ಸಿದ್ಧ ಉಡುಪುಗಳ ಘಟಕ ಸ್ಥಾಪಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ರಫ್ತು ಮಾಡುವ ಅವಕಾಶವನ್ನು ಒದಗಿಸಿದೆ ಎಂದು ಅವರು ತಿಳಿಸಿದರು.
ಉತ್ತರ ವಲಯ ಕೈಮಗ್ಗ ಮತ್ತು ಜವಳಿ ಇಲಾಖೆಯ ಜಂಟಿ ನಿರ್ದೇಶಕ ಬಿ.ಶ್ರೀಧರ ನಾಯಕ ಮಾತನಾಡಿ, ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ಕ್ಷೇತ್ರವೆಂದರೆ ಜವಳಿ ಕ್ಷೇತ್ರವಾಗಿದ್ದು, ಜೀನ್ಸ್ ಉದ್ಯಮದಲ್ಲಿ ಬಳ್ಳಾರಿ ಜಿಲ್ಲೆಯು ರಾಜ್ಯದಲ್ಲಿ 2ನೇ ಸ್ಥಾನವನ್ನು ಪಡೆದಿದ್ದು, ಜಿಲ್ಲೆಯಲ್ಲಿ ಜವಳಿ ಕ್ಷೇತ್ರಕ್ಕೆ ಅಗತ್ಯವಿರುವ ಕಚ್ಚಾವಸ್ತು ಹತ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ ಎಂದರು.
ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ರೈತರು ಬೆಳೆದ ಹತ್ತಿಯನ್ನು ಸಂಸ್ಕರಿಸಿ ಬಟ್ಟೆ ನೇಯಲು ಅಗತ್ಯವಿರುವಂತೆ ಸಂಸ್ಕರಿಸುವ ಕಾರ್ಖಾನೆಗಳ ಸ್ಥಾಪನೆಗೆ ಹಾಗೂ ಸಿದ್ಧವಾದ ಬಟ್ಟೆಗಳನ್ನು ಉಡುಪುಗಳನ್ನಾಗಿ ಹೊಲಿಯುವ ಟೈಲರಿಂಗ್ ಘಟಕಗಳ ಸ್ಥಾಪನೆಗೆ ಅನೇಕ ಯೋಜನೆಗಳನ್ನು ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಕೈಗೊಳ್ಳಲಾಗುತ್ತಿದ್ದು, ಕೈಮಗ್ಗ ನೇಕಾರರಿಗೆ ತರಬೇತಿ, ನೇಕಾರರ ಸಾಲಮನ್ನಾ ಕೈಮಗ್ಗ ವಿಕಾಸ ಯೋಜನೆ, ಕಚ್ಚಾಮಾಲು ಖರೀದಿಗೆ ಸಹಾಯಧನ, ಮಾರುಕಟ್ಟೆ, ವಿದ್ಯುತ್ ಮಗ್ಗ ಖರೀದಿಗೆ ಸಹಾಯಧನ, ವಸತಿ ಸೌಲಭ್ಯ, ವಿದ್ಯುತ್ ರಿಯಾಯಿತಿ ಸಹಾಯಧನ, ಸ್ಯಾನಿಟರಿ ನ್ಯಾಪ್‌ಕಿನ್ ತಯಾರಿಕಾ ಘಟಕ ಸೇರಿದಂತೆ ವಿಶೇಷ ಬೊಟಿಕ್ ತರಬೇತಿ, ಮುಂದುವರೆದ ಹೊಲಿಗೆ ತರಬೇತಿ ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಿದ್ದು, ಪ.ಜಾತಿ. ಪ.ಪಂಗಡದ ಫಲಾನುಭವಿಗಳಿಗೆ ಶೇ. 90ರಷ್ಟು ಸಹಾಯಧನ ಯೋಜನೆಗಳನ್ನು ಇಲಾಖೆಯು ನೀಡುತ್ತಿದೆ ಎಂದು ಅವರು ವಿವರಿಸಿದರು.
ಈ ಸಂದರ್ಭದಲ್ಲಿ ಸಿರುಗುಪ್ಪ ತಾಲೂಕಿನ ತಾ.ಪಂ ಅಧ್ಯಕ್ಷೆ ಕೆ.ದೇವಮ್ಮ ಪಕ್ಕೀರಪ್ಪ, ಜಿ.ಪಂ. ಸದಸ್ಯರಾದ ಹೆಚ್.ಸಿ.ರಾಧ ಧರಪ್ಪನಾಯಕ ಮತ್ತು ಕೋಟೆಶ್ವರರೆಡ್ಡಿ, ತಾಪಂ ಇ.ಒ. ಶಿವಪ್ಪ ಸುಬೇದಾರ್, ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ವಿ.ವಿಠ್ಠಲ ರಾಜು, ಶಿಶು ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ ನಾಯಕ, ತಾ.ಪಂ ಸದಸ್ಯ ಕೊರಿ ಪಿಡ್ಡಯ್ಯ ಮುಖಂಡರಾದ ಪಕ್ಕೀರಪ್ಪ, ನಾಗೇಶಪ್ಪ, ಶಂಕ್ರಪ್ಪ, ಶೇಷಯ್ಯ ಸೇರಿದಂತೆ ಪ.ಜಾತಿ. ಪ.ಪಂಗಡದ ಯುವಕ-ಯುವತಿಯರು ತರಬೇತಿಯಲ್ಲಿ ಭಾಗವಹಿಸಿದ್ದರು.