Advertisement

ಬೆಳ್ಳಾರೆ: ಪದವಿಪೂರ್ವ ಕಾಲೇಜಿನ ಎಲ್ಲ ಉಪನ್ಯಾಸಕರೂ ವರ್ಗಾವಣೆ! ಸಂಕಷ್ಟದಲ್ಲಿ ವಿದ್ಯಾರ್ಥಿಗಳು

09:30 AM Aug 24, 2022 | Team Udayavani |

ಸುಳ್ಯ : ಬೆಳ್ಳಾರೆಯ ಕರ್ನಾಟಕ ಪಬ್ಲಿಕ್‌ ಸ್ಕೂಲ್‌ನ ಪದವಿಪೂರ್ವ ಕಾಲೇಜು ವಿಭಾಗದ ಎಲ್ಲ ಉಪನ್ಯಾಸಕರಿಗೂ ವರ್ಗಾವಣೆಯಾಗಿದೆ. ಉಪನ್ಯಾಸಕರ ಹುದ್ದೆ ಸಂಪೂರ್ಣ ಖಾಲಿಯಾಗಿರುವ ಪರಿಣಾಮ ಕಾಲೇಜಿನ 258 ವಿದ್ಯಾರ್ಥಿಗಳಿಗೆ ಸಂಕಷ್ಟ ತಂದೊಡ್ಡಿದೆ.

Advertisement

ಬೆಳ್ಳಾರೆಯಲ್ಲಿ ಪ್ರಭಾರ ಪ್ರಾಂಶುಪಾಲರಾಗಿದ್ದ ವಿಶ್ವನಾಥ ಗೌಡ ಅವರಿಗೆ ಸುಳ್ಯ ಜೂನಿಯರ್‌ ಕಾಲೇಜಿಗೆ ವರ್ಗಾವಣೆಯಾಗಿದೆ. ಸ್ವಲ್ಪ ಸಮಯ ಬೆಳ್ಳಾರೆಯಲ್ಲಿ ಇರುವಂತೆ ಅವರನ್ನು ವಿನಂತಿಸಲಾಗಿದೆ. ಈ ಹಿಂದೆ ಇದ್ದ 6 ಮಂದಿ ಉಪನ್ಯಾಸಕರಲ್ಲಿ ಹಸೀನಾ ಬಾನು ಸುಳ್ಯ ಜೂನಿಯರ್‌ ಕಾಲೇಜಿಗೆ, ಗೌತಮ್‌ ಕೆ. ಕಾಮತ್‌ ಕೊಂಬೆಟ್ಟು ಕಾಲೇಜಿಗೆ, ಸಬಿತ್‌ ಪಿ. ಸುಳ್ಯ ಗಾಂಧಿನಗರ ಕಾಲೇಜಿಗೆ, ಸಂಧ್ಯಾ ಬಿ. ಕಾಣಿಯೂರು ಜೂನಿಯರ್‌ ಕಾಲೇಜಿಗೆ, ಕುಂದೂರ ನಾಯಕ್‌ ಮತ್ತು ಅನಿಲ್‌ ಜೆ. ಚಾಮರಾಜನಗರಕ್ಕೆ ವರ್ಗವಾಗಿದ್ದಾರೆ.

ಎಲ್ಲ ಹುದ್ದೆ ಖಾಲಿ
ಇಲ್ಲಿ ಪ್ರಥಮ, ದ್ವಿತೀಯ ಪಿಯುಸಿ ತರಗತಿ ಗಳಿಗೆ ಸಂಬಂಧಿಸಿ ದಂತೆ ಈಗ ಎಲ್ಲ ಹುದ್ದೆಗಳು ಖಾಲಿ ಇವೆ. ಪ್ರಾಂಶುಪಾಲರ ಹುದ್ದೆ, ವಿವಿಧ ಐಚ್ಛಿಕ ಭಾಷೆ, ಕಡ್ಡಾಯ ಭಾಷೆ, ಇತರ ವಿಷಯಗಳ ಮೂರು ವಿಭಾಗದ ತರಗತಿ ನಡೆಸುವ ಉಪನ್ಯಾಸಕರ ಹುದ್ದೆ ಖಾಲಿಯಾಗಿದೆ. ಸದ್ಯಕ್ಕೆ ನಾಲ್ವರು ಉಪನ್ಯಾಸಕರು ಕಾಲೇಜು ಅಭಿವೃದ್ಧಿ ಸಮಿತಿ ವತಿಯಿಂದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಪ್ರಸ್ತುತ ಪ.ಪೂ. ಕಾಲೇಜಿನ ಯಾವುದೇ ನೇಮಕಾತಿ ನಡೆಯದೇ ಇರುವುದರಿಂದ ಇಲ್ಲಿನ ಹುದ್ದೆಗಳನ್ನು ಯಾವಾಗ ಭರ್ತಿ ಮಾಡಲಾಗುತ್ತದೆ ಎಂಬ ಬಗ್ಗೆ ಯಾರಿಗೂ ಮಾಹಿತಿ ಲಭ್ಯವಾಗಿಲ್ಲ. ಬೋಧಕೇತರ ಹುದ್ದೆಯೂ ಖಾಲಿ ಇದೆ.

ಸಂಕಷ್ಟದಲ್ಲಿ ವಿದ್ಯಾರ್ಥಿಗಳು
ಇಲ್ಲಿನ ಪಿಯುಸಿ ವಿಭಾಗದ ಪ್ರಥಮ ಪಿಯುಸಿ (ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದಲ್ಲಿ) ಯಲ್ಲಿ 129 ವಿದ್ಯಾರ್ಥಿಗಳು, ದ್ವಿತೀಯ ಪಿಯುಸಿ(ಕಲಾ, ವಾಣಿಜ್ಯ, ವಿಜ್ಞಾನ)ಯಲ್ಲಿ 129 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 258 ಮಂದಿ ಕಲಿಯುತ್ತಿದ್ದಾರೆ. ಇದೀಗ ಉಪನ್ಯಾಸಕರ ಕೊರತೆಯಿಂದ ಎಲ್ಲರೂ ಸಂಕಷ್ಟ ಪಡುವಂತಾಗಿದೆ.
ಹಲವು ವರ್ಷಗಳ ಬಳಿಕ ವರ್ಗಾವಣೆ ಪ್ರಕ್ರಿಯೆಯನ್ನು ಸರಕಾರ ನಡೆಸಿದ್ದು, ವರ್ಗಾವಣೆಗೆ ಕಾಯುತ್ತಿದ್ದ ಉಪನ್ಯಾಸಕರಿಗೆ ಇದು ಅನುಕೂಲವಾಯಿತು. ತಾವು ಬಯಸಿದ್ದ ಊರಿಗೆ ವರ್ಗಾವಣೆ ಪಡೆದುಕೊಂಡಿದ್ದಾರೆ.

ವರ್ಗಾವಣೆಯಿಂದ ಸಮಸ್ಯೆ ಆಗಿರುವ ಬಗ್ಗೆ ಗಮನಕ್ಕೆ ಬಂದಿದೆ. ಅತಿಥಿ ಶಿಕ್ಷಕರನ್ನು ತೆಗೆದುಕೊಳ್ಳಲು ಸೂಚಿಸಲಾಗಿದೆ. ವರ್ಗಾವಣೆಯಾದವರನ್ನೂ ಡೆಪ್ಯೂಟೇಷನ್‌ ಆಧಾರದಲ್ಲಿ ಬೆಳ್ಳಾರೆಯಲ್ಲಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು.
– ಜಯಣ್ಣ , ಡಿಡಿಪಿಯು ಮಂಗಳೂರು

Advertisement
Advertisement

Udayavani is now on Telegram. Click here to join our channel and stay updated with the latest news.

Next