ಮಹದೇವಪುರ: ಇಬ್ಬಲೂರು ಸಮೀಪದ ಬೆಳ್ಳಂದೂರು ಕೆರೆಯಲ್ಲಿ ಗುರುವಾರ ಸಂಜೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಹೀಗಾಗಿ ಸ್ಥಳೀಯ ನಾಗಕರಿಕರು ಗಾಬರಿಗೊಂಡಿದ್ದಾರೆ. ಎರಡು ವರ್ಷದ ಹಿಂದೆ ಬೆಳ್ಳಂದೂರು ಕೆರೆ ಕೋಡಿಯ ಬಳಿ ನೊರೆಯಲ್ಲಿ ಬೆಂಕಿ ಕಾಣಿಸಿಕೊಂಡು ಜನರಲ್ಲಿ ಆತಂಕ ಉಂಟಾಗಿತ್ತು. ಈಗ ಮತ್ತೂಮ್ಮೆ ಕೆರೆಯಲ್ಲಿ ಬೆಂಕಿ ಆವರಿಸಿರುವುದು ಸ್ಥಳೀಯರು ಗಾಬರಿಗೊಳ್ಳುವಂತೆ ಮಾಡಿದೆ.
ಸುಮಾರು 919 ಎಕರೆಯಷ್ಟು ವಿಸ್ತಾರದ ಬೆಳ್ಳಂದೂರು ಕೆರೆಯಲ್ಲಿ ಜೊಂಡು ಹುಲ್ಲು ಮತ್ತು ನೊರೆ ತುಂಬಿದೆ. ರಾಸಾಯನಿಕಯುಕ್ತವಾಗಿರುವ ನೊರೆಗೆ ಬೆಂಕಿ ತಗುಲಿರುವು ದರಿಂದ ಕೆರೆಯ ಸುತ್ತಮುತ್ತಲ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿದೆ. ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿರುವ ಸುದ್ದಿ ತಿಳಿಯುತ್ತಲೇ ಕೆರೆಯ ಬಳಿ ನೂರಾರು ಮಂದಿ ಜಮಾಯಿಸಿದ್ದರು.
ಕೆರೆಗೆ ನೇರವಾಗಿ ರಾಸಾಯನಿಕಗಳು ಮತ್ತು ಒಳಚರಂಡಿ ನೀರು ಸೇರುತ್ತಿರುವುದರಿಂದ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದೆ. ಕಳೆದ ಎರಡು ವರ್ಷಗಳಿಂದ ನೊರೆ ಸಮಸ್ಯೆ ಕಾಣಿಸುತ್ತಿದ್ದು, ಮೂರು ಬಾರಿ ನೊರೆಗೆ ಬೆಂಕಿ ಬಿದ್ದಿದೆ. ಸಾಂಕ್ರಾಮಿಕ ರೋಗಗಳ ತಾಣವಾಗಿ ಮಾರ್ಪಟ್ಟಿರುವ ಈ ಕೆರೆ ಸ್ಥಳೀಯರಿಗೆ ನರಕ ಸದೃಶವಾಗಿ ಪರಿಣಮಿಸಿದೆ.
ಈಗಾಗಲೇ ಈ ಕೆರೆಯಿಂದ ನಾನಾ ರೋಗಗಳಿಗೆ ತುತ್ತಾಗಿರುವ ಸ್ಥಳೀಯರು ಕೆರೆಯ ಅಭಿವೃದ್ಧಿಗೆ ಎಲ್ಲಾ ಜನಪ್ರತಿನಿಧಿಗಳ ಮೊರೆ ಹೋಗಿದ್ದಾರೆ. ಆದರೆ ಇಂದಿಗೂ ಅವರ ಸಮಸ್ಯೆ ಮಾತ್ರ ದೂರವಾಗಿಲ್ಲ. ಕೇಂದ್ರ ಹಾಗೂ ರಾಜ್ಯದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಯನ ತಂಡಗಳು ಇಲ್ಲಿಗೆ ಬಂದು ಹಲವು ಬಾರಿ ಪರಿಶೀಲನೆ ನಡೆಸಿ ಹೋಗಿವೆ. ಆದರೆ ಸಮಸ್ಯೆಗೆ ಶಾಶ್ವತ ಪರಿಹಾರ ಮಾತ್ರ ಸಿಕ್ಕಿಲ್ಲ.
ಎಚ್‌ಎಎಲ್, ಕೋರಮಂಗಲ, ದೊಮ್ಮಲೂರು, ಶಿವಾಜಿನಗರ, ಮತ್ತು ಹೆಚ್‌ಎಸ್‌ಆರ್ ಲೇಔಟ್ ಸೇರಿದಂತೆ ಸುತ್ತಮುತ್ತಲ ಒಳಚರಂಡಿ ನೀರು ಸೇರಿದಂತೆ ಕಾರ್ಖಾನೆಗಳ ತ್ಯಾಜ್ಯಗಳು ನೇರವಾಗಿ ಕೆರೆಗೆ ಸೇರುತ್ತಿರುವುದೇ ಕೆರೆಯ ಮಾಲಿನ್ಯಕ್ಕೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಗುರುವಾರ ಸಂಜೆಯ ಹೊತ್ತಿಗೆ ಕೆರೆಯಲ್ಲಿ ಬೆಂಕಿಯಿಂದ ದಟ್ಟ ಹೊಗೆ ಆವರಿಸಿತ್ತು. ಆದರೆ ಬಿಬಿಎಂಪಿಯ ಯಾವೊಬ್ಬ ಅಧಿಕಾರಿಯೂ ಸ್ಥಳಕ್ಕೆ ಬಂದಿರಲಿಲ್ಲ.
ಹೈನುಗಾರರ ಕೈವಾಡ?: ಬೇಸಿಗೆಯಾದ ಕಾರಣ ಕೆರೆಯಲ್ಲಿ ಹೊಸ ಹುಲ್ಲು ಚಿಗುರುತ್ತದೆ. ಇದೇ ಕಾರಣಕ್ಕಾಗಿಯೇ ಸ್ಥಳೀಯ ಹೈನುಗಾರರು ಕೆರೆಯ ಒಣಹುಲ್ಲಿಗೆ ಬೆಂಕಿ ಇಟ್ಟಿರುವ ಸಾದ್ಯತೆಗಳೂ ಇವೆ. ಕೆರೆಯಲ್ಲಿ ರಾಸಾಯನಿಕ ಮಿಶ್ರಿತ ನೊರೆ ಇರುವುದರಿಂದ ಬೆಂಕಿ ತೀವ್ರ ಗೊಂಡಿದೆ ಎಂದು ಪರಿಸರ ಪ್ರೇಮಿ ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.
ಕೆರೆಯಲ್ಲಿ ಆಗಾಗ ಬೆಂಕಿ ಕಾಣಿಸಿಕೊಳ್ಳುತ್ತಿದೆ. ಇದರಿಂದ ನಾಗರಿಕರು ಭಯಭೀತರಾಗಿದ್ದಾರೆ. ಇನ್ನು ದುರ್ವಾಸನೆಯಂತೂ ಸಹಿಸಲಸಾಧ್ಯ. ಇಷ್ಟಾದರೂ ಸರ್ಕಾರ ಮಾತ್ರ ಈವರೆಗೆ ಶಾಶ್ವತ ಪರಿಹಾರ ಕೈಗೊಂಡಿಲ್ಲ.
-ವೆಂಕಟೇಶ್, ಸ್ಥಳೀಯ ನಿವಾಸಿ
ಈ ಕೆರೆಯ ಪರಿಸ್ಥಿತಿ ಹೇಗಿದೆ ಎಂದರೆ, ಮಳೆ ಬಿದ್ದರೆ ದಟ್ಟ ನೊರೆ ಸಮಸ್ಯೆ ಕಾಡುತ್ತದೆ. ಅದು ರಸ್ತೆಯಲ್ಲಿ ಓಡಾಡುವ ಜನರ ಮುಖಕ್ಕೆ ಬೀಳುತ್ತದೆ. ಮಳೆ ಬೀಳದೆ ಬಿಸಿಲು ಹೆಚ್ಚಾದರೆ ನೊರೆಗೆ ಬೆಂಕಿ ತಗುಲಿ ಆತಂಕ ಸೃಷ್ಟಿಸುತ್ತದೆ.
-ಹರೀಶ್, ಸ್ಥಳೀಯ ನಿವಾಸಿ