Advertisement

ಬೆಳ್ಳಂದೂರು ಕೆರೆ: ಸರ್ಕಾರಕ್ಕೆ ಚಾಟಿ ಬೀಸಿದ ಎನ್‌ಜಿಟಿ

12:35 AM Dec 19, 2019 | Lakshmi GovindaRaj |

ಬೆಂಗಳೂರು: ನಗರದ ಬೆಳ್ಳಂದೂರು ಕೆರೆಗೆ ದಿನಂಪ್ರತಿ 256.7 ಮಿಲಿಯನ್‌ ಲೀಟರ್‌ಗಳಷ್ಟು ಸಂಸ್ಕರಿಸದ ತ್ಯಾಜ್ಯ ನೀರು ಸೇರ್ಪಡೆಯಾಗುತ್ತಿರುವುದು ಕ್ರಿಮಿನಲ್‌ ಅಪರಾಧವೆಂದು ಹೇಳಿರುವ ನವದೆಹಲಿಯ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ (ಎನ್‌ಜಿಟಿ), ಕೆರೆಗೆ ಸೇರುತ್ತಿರುವ ಈ ವಿಷವನ್ನು ತಡೆಯಲು ಸಮರೋಪಾದಿಯಲ್ಲಿ ಕ್ರಮಗಳನ್ನು ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ತಾಕೀತು ಮಾಡಿದೆ.

Advertisement

ಅಲ್ಲದೆ, ಕೆರೆಗೆ ಸೇರುವ ಕೊಳಚೆ ನೀರನ್ನು ಸಂಸ್ಕರಿಸಲು ಘಟಕಗಳನ್ನು ಸ್ಥಾಪಿಸಲು ಹಾಗೂ ಕೊಳಚೆ ನೀರಿಗಾಗಿ ಪ್ರತ್ಯೇಕ ಚರಂಡಿಗಳನ್ನು ನಿರ್ಮಿಸಲು ಈಗಾಗಲೇ ವಿಧಿಸಲಾಗಿರುವ 2020ರ ಸೆ. 30ರ ಗಡುವನ್ನು ಯಾವುದೇ ಕಾರಣಕ್ಕೂ ವಿಸ್ತರಿಸಲಾಗದು ಎಂದು ಎನ್‌ಜಿಟಿಯ ಮುಖ್ಯಸ್ಥರಾದ ನ್ಯಾ. ಆದರ್ಶ ಕುಮಾರ್‌ ಗೋಯೆಲ್‌ ನೇತೃತ್ವದ ನ್ಯಾಯಪೀಠ ಚಾಟಿ ಬೀಸಿದೆ. ಈ ನಿಟ್ಟಿನಲ್ಲಿ ಕೆಲವಾರು ಸೂಚನೆಗಳನ್ನು ಹಾಗೂ ಸೂಚನೆಗಳನ್ನು ಪಾಲಿಸದಿದ್ದರೆ ಅಧಿಕಾರಿಗಳ ವಿರುದ್ಧ ಜಾರಿಗೊಳಿಸಬಹುದಾದ ಕ್ರಮಗಳ ಬಗ್ಗೆಯೂ ನ್ಯಾಯಪೀಠ ಎಚ್ಚರಿಸಿದೆ.

ಅಧಿಕಾರಿಗಳಿಗೆ ಖಡಕ್‌ ಎಚ್ಚರಿಕೆ: ತನ್ನ ಸೂಚನೆಗಳನ್ನು ಯಥಾವತ್ತಾಗಿ ನಿಗದಿತ ಗಡುವಿನಲ್ಲಿ ಪೂರ್ಣಗೊಳಿಸಲೇಬೇಕು ಎಂದು ತಾಕೀತು ಮಾಡಿರುವ ನ್ಯಾಯಪೀಠ, ಈ ಸೂಚನೆಗಳನ್ನು ನಿರ್ಲಕ್ಷಿಸಿದರೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಅಧಿಕಾರಿಗಳನ್ನು ಎಚ್ಚರಿಸಿದೆ.

1.ನಿಗದಿತ ಗಡುವಿನೊಳಗೆ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕ ಸ್ಥಾಪನೆ ಪೂರ್ತಿಯಾಗದಿದ್ದರೆ, ಅಂಥ ಅಪೂರ್ಣವಾದ ಪ್ರತಿ ಘಟಕಕ್ಕೆ ಮಾಸಿಕ 10 ಲಕ್ಷ ರೂ.ಗಳ ದಂಡ ವಿಧಿಸಲಾಗುತ್ತದೆ. ಆ ದಂಡವನ್ನು, ಈ ಘಟಕಗಳ ನಿರ್ಮಾಣದ ಹೊಣೆ ಹೊತ್ತಿರುವ ಅಧಿಕಾರಿಗಳಿಂದಲೇ ವಸೂಲಿ.

2.ಸಂಸ್ಕರಣಾ ಘಟಕಗಳನ್ನು ಸ್ಥಾಪಿಸದ ಅಧಿಕಾರಿಗಳ ಸೇವಾ ರಿಜಿಸ್ಟರ್‌ನಲ್ಲಿ ನ್ಯಾಯಾಲಯದ ಆದೇಶ ಪಾಲನೆ ಮಾಡದೇ ಚ್ಯುತಿ ತಂದಿದ್ದಾರೆ ಎಂದು ನಮೂದಿಸಲಾಗುತ್ತದೆ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಪೀಠ ಹೇಳಿದೆ.

Advertisement

3.ಸಂಸ್ಕರಣಾ ಘಟಕಗಳ ನಿರ್ಮಾಣವಾಗುವವರೆಗೆ ಕೆರೆಗೆ ಕಲುಷಿತ ನೀರು ಸೇರ್ಪಡೆಯಾಗದಿರುವ ಬಗ್ಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲೂಎಸ್‌ಎಸ್‌ಬಿ) ಖಾತ್ರಿಪಡಿಸಬೇಕು.

4.ಕೊಳಚೆ ನೀರು ಕೆರೆಗೆ ಸೇರುವುದನ್ನು ತಡೆಯಲು ಜಲಮಂಡಳಿ ತಕ್ಷಣವೇ ಕಾರ್ಯಪ್ರವೃತ್ತವಾಗಿ, ಈ ನಿಟ್ಟಿನಲ್ಲಿ ಪರ್ಯಾಯ ಮಾರ್ಗಗಳನ್ನು ಹುಡುಕಬೇಕು. ಇದಕ್ಕೆ ತಪ್ಪಿದರೆ, ಕೆರೆಗೆ ಕಲುಷಿತ ನೀರು ಸೇರುವ ಪ್ರತಿಯೊಂದು ಮಾರ್ಗವೊಂದರ ಮೇಲೆ 5 ಲಕ್ಷ ರೂ.ಗಳಂತೆ ಜಲಮಂಡಳಿ ಮೇಲೆ ದಂಡ ವಿಧಿಸಲಾಗುತ್ತದೆ. 2020ರ ಫೆ. 1ರಿಂದ ಈ ದಂಡ ಜಾರಿಗೆ ಬರಲಿದ್ದು, ಅಷ್ಟರೊಳಗೆ ಕಲುಷಿತ ನೀರನ್ನು ಜಲಮಂಡಳಿ ತಡೆಯಲೇಬೇಕು. ಕಲುಷಿತ ನೀರು ಕೆರೆಗೆ ಸೇರ್ಪಡೆ ವಿಚಾರದಲ್ಲಿ ತಪ್ಪಿತಸ್ಥರ ಮೇಲೆ ಜಲಮಂಡಳಿ ಕಠಿಣ ಕ್ರಮ ಕೈಗೊಳ್ಳಬಹುದು.

ಸರ್ಕಾರಕ್ಕೆ ಸೂಚನೆಗಳು
* ಕೆರೆಯ ಅಂಗಳವನ್ನು ಒತ್ತುವರಿ ಮಾಡಿರುವವರನ್ನು ಅಲ್ಲಿಂದ ತೆರವುಗೊಳಿಸುವಲ್ಲಿ ಯಾವುದೇ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದರೆ, ಅದರ ವಿರುದ್ಧ ಮೇಲ್ಮನವಿ ಸಲ್ಲಿಸಿ ಕಾನೂನಾತ್ಮಕ ಹೋರಾಟ ನಡೆಸಬೇಕು.

* ಅಧಿಕಾರಿಗಳು ಒತ್ತುವರಿಗಾರರ ಜೊತೆಗೆ ಶಾಮೀಲಾಗಿದ್ದರೆ ನ್ಯಾಯಪೀಠವು ಈ ಹಿಂದೆಯೇ ಆದೇಶಿಸಿದಂತೆ ಅಂಥವರ ವಿರುದ್ಧ ತಕ್ಷಣಕ್ಕೆ ಜಾರಿಯಾಗುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು.

* ಕೆರೆಯಲ್ಲಿನ ಹೂಳು ಹಾಗೂ ಕಳೆಯ ನಿರ್ಮೂಲನೆಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು.

* ಕೆರೆಯ ಸುತ್ತಲಿನ ಪ್ರಾಂತ್ಯಗಳಲ್ಲಿ ಜೌಗು ಪ್ರದೇಶಗಳು ಹಾಗೂ ಜೀವವೈವಿಧ್ಯ ಪಾರ್ಕ್‌ಗಳ ಅಭಿವೃದ್ಧಿಗೆ ಸರ್ಕಾರ ಮುಂದಾಗಿ, ಆ ಮೂಲಕ ರಾಜ್ಯ ಸರ್ಕಾರ ಪರಿಸರ ಮಾಲಿನ್ಯ ತಡೆಗಟ್ಟಬೇಕು.

* ಕೆರೆಯ ಸುತ್ತಲಿನ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಕಾರ್ಯಗಳು, ಕಟ್ಟಡಗಳ ಅವಶೇಷಗಳ ನಿರ್ವಹಣೆ ವ್ಯವಸ್ಥೆಗಳ ಮೇಲೆ ತಕ್ಷಣದಿಂದ ತೀವ್ರ ನಿಗಾ ವಹಿಸಬೇಕು. ಈ ಹಿಂದೆ ವಿಧಿಸಲಾಗಿರುವ ವೇಳಾಪಟ್ಟಿಗೆ ಅನುಗುಣವಾಗಿ ಇವುಗಳ ನಿರ್ವಹಣೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

* ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಬೆಳ್ಳಂದೂರು ಕೆರೆಗೆ ಸೇರುವ ಕೊಳಚೆ ನೀರಿನ ಮಾಲಿನ್ಯ ಪ್ರಮಾಣ ನಿಗದಿಗೊಳಿಸಲು ಒಂದು ಸಿದ್ಧ ಮಾದರಿಯನ್ನು ಅನುಸರಿಸಬೇಕು. ಅಲ್ಲದೆ, ಕೆರೆಯ ನೀರಿನ ನೈರ್ಮಲ್ಯತೆಯನ್ನು ಕಾಲಾನುಕ್ರಮಕ್ಕೆ ಪರೀಕ್ಷಿಸಬೇಕು.

Advertisement

Udayavani is now on Telegram. Click here to join our channel and stay updated with the latest news.

Next