Advertisement

ಬೆಳ್ಳಂದೂರು ಕೆರೆಯಲ್ಲಿ ಮತ್ತೆ ಉಕ್ಕಿದ ನೊರೆ

06:10 PM Apr 22, 2019 | Lakshmi GovindaRaju |

ಮಹದೇವಪುರ: ಬೆಳ್ಳಂದೂರು ಕೆರೆ ಕೊಡಿಯಲ್ಲಿ ಭಾನುವಾರ ಮತ್ತೆ ನೊರೆ ಕಾಣಿಸಿಕೊಂಡಿದೆ. ಕೆರೆ ಸಂರಕ್ಷಿಸುವಂತೆ ಜಲ ತಜ್ಞರು, ಪರಿಸರ ಪ್ರೇಮಿಗಳು ಹಾಗೂ ಸಾರ್ವಜನಿಕರು ಸರ್ಕಾರ ಮತ್ತು ಬಿಡಿಎಗೆ ಹಲವು ಬಾರಿ ಮನವಿ ಮಾಡಿದ್ದಾರೆ. ಆದರೆ, ಸ್ಪಂದನೆ ಮೂತ್ರ ಶೂನ್ಯ.

Advertisement

ಬೆಳ್ಳಂದೂರು ಅಮಾನಿ ಕೆರೆಗೆ ನಗರದ ಹಲವು ಕಾರ್ಖಾನೆ ಮತ್ತು ಬಹುಮಹಡಿ ಕಟ್ಟಡಗಳ ರಾಸಾಯನಿಕಯುಕ್ತ ತ್ಯಾಜ್ಯ ನೀರನ್ನು ಅವೈಜ್ಞಾನಿಕವಾಗಿ ಹರಿಬಿಡಲಾಗಿದೆ. ಇದರಿಂದಾಗಿ ಕೆರೆಯಲ್ಲಿ ಮತ್ತೆ ಮತ್ತೆ ವಿಷಕಾರಿ ನೊರೆ ಕಾಣಿಸಿಕೊಳ್ಳುತ್ತಿದೆ. ಇದು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ.

ಕೆರೆಗೆ ವಿಷಕಾರಿ ತ್ಯಾಜ್ಯ ಹರಿಬಿಡುವುದನ್ನು ತಡೆದು, ಸಂರಕ್ಷಣೆ ಮಾಡುವಂತೆ ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಕೆರೆ ಉಳಿವಿಗಾಗಿ ಆಗ್ರಹಿಸಿ ಹತ್ತಾರು ಬಾರಿ ಪ್ರತಿಭಟನೆಗಳನ್ನೂ ನಡೆಸಲಾಗಿದೆ.

ಹೀಗೆ ಮಾಡಿದ ಪ್ರತಿ ಬಾರಿಯೂ ಕೇವಲ ಆಶ್ವಾಸನೆ ದೊರೆಯುತ್ತಿದೆಯೇ ಹೊರತು, ರಾಜ್ಯ ಸರ್ಕಾರವಾಗಲಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಲಿ (ಬಿಡಿಎ) ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಹಾಗೂ ಪರಿಸರ ಪ್ರೇಮಿಯೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಬಹುತೇಕ ಕೈಗಾರಿಕಾ ಮತ್ತು ಬಹುಮಹಡಿ ಕಟ್ಟಡಗಳ ತ್ಯಾಜ್ಯ, ಕೊಳಚೆ ನೀರು ನೇರವಾಗಿ ಬೆಳ್ಳಂದೂರು ಕೆರೆ ಸೇರುತ್ತಿದೆ. ಇದರಿಂದ ಕೆರೆ ಸಂಪೂರ್ಣ ಕಲುಷಿತಗೊಂಡಿದೆ. ಇದರೊಂದಿಗೆ ನಿರ್ವಹಣೆಯೂ ಇಲ್ಲದೆ ನೊರೆ ಸಮಸ್ಯೆ ಮರುಕಳಿಸುತ್ತಲೇ ಇದೆ.

Advertisement

ಮಳೆ ಬಂದಾಗ ಹೆಚ್ಚುವ ನೊರೆ: ಇನ್ನೊಂದೆಡೆ ನಗರದಲ್ಲಿ ಮಳೆ ಬಂದಾಗ ನೊರೆ ಸಮಸ್ಯೆ ಹೆಚ್ಚಾಗುತ್ತದೆ. ನೊರೆಯೊಂದಿಗೆ ಸಹಿಸಲು ಅಸಾಧ್ಯವಾದ ದುರ್ವಾಸನೆ ಕೆರೆ ಸುತ್ತಲ ಪ್ರದೇಶದಲ್ಲಿ ಹರಡುತ್ತಿದೆ. ಈ ದುರ್ವಾಸನೆ ಬೆಳ್ಳಂದೂರು, ಕರಿಯಮ್ಮ ಅಗ್ರಹಾರ, ಯಮಲೂರು, ಕೆಂಪಾಪುರ, ಚಲಘಟ್ಟ ನಾಗಸಂದ್ರ, ಇಬ್ಬಲೂರು, ದೇವರಬೀಸನಹಳ್ಳಿ, ಕಾಡುಬೀಸನಹಳ್ಳಿ ನಿವಾಸಿಗಳ ನೆಮ್ಮದಿ ಕೆಡಸಿದೆ. ಸಮಸ್ಯೆ ಹೀಗೇ ಮುಂದುವರಿದೆರೆ ನಾವು ಬದುಕುವುದಾದರೂ ಹೇಗೆ ಎಂದು ಸ್ಥಳೀಯ ನಿವಾಸಿಗಳು ಪ್ರಶ್ನಿಸುತ್ತಿದ್ದಾರೆ.

ಎನ್‌ಜಿಟಿ ಛೀಮಾರಿ: ಕೆರೆಯಲ್ಲಿ ನೊರೆ ಸಮಸ್ಯೆ ಹೆಚ್ಚಾದ ಪರಿಣಾಮ ಸ್ಥಳೀಯ ನಾಗರಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿರುವುದನ್ನು ಗಮನಿಸಿದ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ (ಎನ್‌ಜಿಟಿ), ಕೆರೆ ಸಂರಕ್ಷಣೆ ಮರೆತ ಸರ್ಕಾರಕ್ಕೆ ಛೀಮಾರಿ ಹಾಕಿತ್ತು. ಅಲ್ಲದೆ, ಬೆಳ್ಳಂದೂರು ಕೆರೆ ಸ್ವತ್ಛಗೊಳಿಸಲು ಅಗತ್ಯವಿರುವ ಕ್ರಮಗಳನ್ನು ಕೂಗೊಳ್ಳಲು ಗಡುವು ಕೂಡ ನೀಡಿತ್ತು.

ಎನ್‌ಜಿಟಿ ಛೀಮಾರಿ ಹಾಕಿದ ನಂತರ ಎಚ್ಚೆತ್ತುಕೊಂಡಂತೆ ಕಂಡ ರಾಜ್ಯ ಸರ್ಕಾರ, ಕೋಟ್ಯಂತರ ರೂ.ಗಳ ವೆಚ್ಚದಲ್ಲಿ ಬೆಳ್ಳಂದೂರು ಕೆರೆ ಸ್ವತ್ಛಗೊಳಿಸುವ ಕಾರ್ಯಕ್ಕೆ ಕೈಹಾಕಿತು. ಆದರೆ ಇದರಿಂದ ಸಾರ್ವಜನಿಕರ ಹಣ ಪೋಲಾಯಿತೇ ಹೊರತು, ಕೆರೆಯಿಂದ ನೊರೆ ಉಕ್ಕುವುದು ಮಾತ್ರ ನಿಲ್ಲಲಿಲ್ಲ.

ಬೆಳ್ಳಂದೂರು ಕೆರೆಯ ಕೊಡಿಯಲ್ಲಿ ನೊರೆಯನ್ನು ತಡೆಗಟ್ಟಲು ಬಿಬಿಎಂಪಿ ಸ್ಪ್ರಿಂಕ್ಲರ್‌ ವ್ಯವಸ್ಥೆ ಮಾಡಿದೆ. ಜತೆಗೆ, ನೊರೆ ರಸ್ತೆ ಹಾಗೂ ಸ್ಥಳೀಯ ಕಟ್ಟಡಗಳ ಮೇಲೆ ಬೀಳದಂತೆ ಕಾಲುವೆ ಸುತ್ತ ಮೆಶ್‌ ಕೂಡ ಅಳವಡಿಸಿದೆ.

ಆದರೆ, ಇತ್ತೀಚೆಗೆ ನಗರದಲ್ಲಿ ಮಳೆ ಸುರಿದು, ಕೆರೆಗೆ ನೀರು ಹರಿದು ಬಂದಿದ್ದು, ವಿಷಕಾರಿ ರಾಸಾಯನಿಕಗಳ ಪ್ರಭಾವದಿಂದ ಭಾನುವಾರ ಮತ್ತೂಮ್ಮೆ ನೊರೆ ಉಕ್ಕಿದೆ. ಸ್ಪ್ರಿಂಕ್ಲರ್‌ ಕೆಲಸ ಮಾಡದಿರುವ ಕಾರಣ, ಕೆರೆಯಲ್ಲಿ ಉಕ್ಕಿರುವ ನೊರೆ, ಗಾಳಿ ಬಂದರೆ ಮೆಶ್‌ ದಾಟಿ ವಾಹನಗಳು, ಸವಾರರು ಹಾಗೂ ಪಾದಚಾರಿಗಳ ಮೇಲೆ ಬೀಳುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next