ಸಾಗರ: ಸಮಾಜದ ಉನ್ನತಿಗೆ ಸಮಯ ನೀಡುವ ಸಂಘಟನೆಯ ಕಾರ್ಯಕರ್ತ ಹಾಗೂ ದುಡಿಯುವ ರೈತರು ಕೂಡ ದೇಶದ ಸೈನಿಕರು ಎಂದು ಜಿಲ್ಲಾ ವಿಚಕ್ಷಣಾದಳ ಅಬಕಾರಿ ಉಪನಿರೀಕ್ಷಕ ಪಿ.ಜೆ. ಜಾನ್ ಹೇಳಿದರು.
ತಾಲೂಕಿನ ತ್ಯಾಗರ್ತಿಯ ಸಮೀಪದ ಬೆಳಂದೂರು ಗ್ರಾಮದಲ್ಲಿ ಗುರುವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್, ತ್ಯಾಗರ್ತಿ ಗ್ರಾಮ ಪಂಚಾಯ್ತಿ, ಬೆಳಂದೂರು ಅಂಗಳಕೆರೆ ಅಭಿವೃದ್ಧಿ ಸಮಿತಿಯ ಸಹಯೋಗದಲ್ಲಿ 271ನೇ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಪುನಶ್ಚೇತನಗೊಳಿಸಿದ ಅಂಗಳಕೆರೆ ಹಸ್ತಾಂತರ ಕೆರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಒಳಿತಿಗಾಗಿ ಶ್ರೀಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಕೈಗೊಂಡ ಅನೇಕ ಕಾರ್ಯಕ್ರಮಗಳು ಗ್ರಾಮೀಣ ಭಾಗದ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಬದಲಾವಣೆ ಕಾರಣವಾಗಿದೆ. ಇದರ ಪದಾಧಿಕಾರಿಗಳು ಯೋದರಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಯೋಜನೆಯ ಉಡುಪಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ವಸಂತ್ ಸಾಲಿಯಾನ್ ಮಾತನಾಡಿ, ಸಮುದಾಯದ ಸಹಭಾಗಿತ್ವ ಇದ್ದರೆ ಯಾವುದೇ ಕೆಲಸ ಬೇಕಾದರೂ ಕಡಿಮೆ ವೆಚ್ಚದಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತದೆ. ಸುಮಾರು ಎಂಟು ಲಕ್ಷ ರೂಪಾಯಿ ಯೋಜನೆಯ ವತಿಯಿಂದ ನೀಡಲಾಗಿದ್ದು ಇನ್ನೂ ಆರು ಲಕ್ಷ ರೂಪಾಯಿ ಗ್ರಾಮದ ಕೆರೆ ಅಭಿವೃದ್ಧಿಗೆ ಗ್ರಾಮಸ್ಥರು ಶ್ರಮದಾನ ಮಾಡುವ ಮುಖಾಂತರ ಸುಂದರ ಕೆರೆ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ ಎಂದು ಹೇಳಿದರು.
ತ್ಯಾಗರ್ತಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಿ ಲಿಂಗಪ್ಪ ನಾಮಫಲಕ ಅನಾವರಣಗೊಳಿಸಿದರು. ಜಿಲ್ಲಾ ನಿರ್ದೇಶಕ ಬಾಬು ನಾಯ್ಕ್, ತಾಲೂಕು ಯೋಜನಾಧಿಕಾರಿ ಶಾಂತ ನಾಯಕ್, ಅಂಗಳಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ಗಣಪತಿ, ಗ್ರಾಪಂ ಸದಸ್ಯ ಸುಭಾಷ್ ಕಲ್ಲನ್, ಗ್ರಾಮ ಸಮಿತಿ ಅಧ್ಯಕ್ಷ ಆರ್.ಕೆ. ಕೆರಿಯಪ್ಪ, ಕೃಷಿ ಅಧಿಕಾರಿ ಮಲ್ಲಿಕಾರ್ಜುನ, ಮೇಲ್ವಿಚಾರಕ ಗಿರೀಶ್ ತೇಜಪ್ಪ ಬಂಗೇರ್, ಕೆ.ಜಿ. ಮಂಜುನಾಥ, ಸೇವಾ ಪ್ರತಿನಿಧಿಗಳಾದ ಟಿ. ಮೋಹನ್, ಭಾರತಿ, ಶ್ವೇತಾ ರಾಯ್ಕರ್, ಜಗದೀಶ್, ಗಾಯಿತ್ರಿ, ಗುತ್ಯಮ್ಮ, ತೀರ್ಥೇಶ್ ಮತ್ತಿತರರು ಇದ್ದರು.