Advertisement
ಒಂದು ಕಾಲದಲ್ಲಿ ಗಣಿಗಾರಿಕೆಯಿಂದ ರಾಜ್ಯ-ರಾಷ್ಟ್ರದ ಗಮನ ಸೆಳೆದಿದ್ದ ಬಳ್ಳಾರಿ ಮೊದಲಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆ. ಇಲ್ಲಿ ಬಿಜೆಪಿ ಭದ್ರವಾಗಿ ನೆಲೆಯೂರುವಲ್ಲಿ ಸುಷ್ಮಾ ಅವರ ಕೊಡುಗೆಯೂ ಇದೆ ಎಂದರೆ ತಪ್ಪಲ್ಲ. ಸತತ ಐದು ದಶಕಗಳ ಕಾಲ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬಳ್ಳಾರಿ ಲೋಕಸಭೆ ಕ್ಷೇತ್ರದಿಂದ 1999ರಲ್ಲಿ ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಸ್ಪರ್ಧಿಸಿದ್ದರು. ಅವರ ವಿರುದ್ಧ ಬಿಜೆಪಿಯಿಂದ ಸುಷ್ಮಾ ಸ್ವರಾಜ್ ಕಣಕ್ಕಿಳಿದಿದ್ದರು. ಶಾಸಕ ಬಿ.ಶ್ರೀರಾಮುಲು ಸೇರಿ ಆಗತಾನೆ ರಾಜಕೀಯಕ್ಕೆ ಪ್ರವೇಶ ನೀಡಿದ್ದ ರೆಡ್ಡಿ ಸಹೋದರರು ಸುಷ್ಮಾ ಅವರ ಬೆನ್ನಿಗೆ ನಿಂತು ಜಿಲ್ಲಾದ್ಯಂತ ಪ್ರಚಾರ ನಡೆಸಿದ್ದರು. ಚುನಾವಣೆಯಲ್ಲಿ ಕಡಿಮೆ ಅಂತರದಲ್ಲಿ ಪರಾಭವಗೊಂಡರೂ ಸೋನಿಯಾ ಅವರಿಗೆ ಸಾಕಷ್ಟು ಪೈಪೋಟಿ ನೀಡಿದ್ದರು. ಆದರೆ, ಜಿಲ್ಲೆಯಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆ ಕಂಡುಕೊಳ್ಳಲು ಕಾರಣರಾದರು. ಸೋನಿಯಾ-ಸುಷ್ಮಾ ಅವರ ಸ್ಪರ್ಧೆಯಿಂದಾಗಿ ದೇಶವೇ ಬಳ್ಳಾರಿಯತ್ತ ತಿರುಗಿ ನೋಡುವಂತಾಗಿತ್ತು.
Related Articles
Advertisement
ಕನ್ನಡ ಕಲಿತು ಮಾತನಾಡಿದ್ದರುಬಳ್ಳಾರಿಯಲ್ಲಿ ಸೋನಿಯಾ ವಿರುದ್ಧ ಸ್ಪರ್ಧಿಸಿ ಸೋತಿದ್ದ ಅವರು ಪ್ರಚಾರ ನಡೆಸಿದ್ದು ಕೇವಲ 12 ದಿನಗಳು. ಸಂದರ್ಭದಲ್ಲಿ ಅವರು ಕನ್ನಡವನ್ನು ಕಲಿತು ಚುನಾವಣಾ ಪ್ರಚಾರ ಭಾಷಣ ನಡೆಸಿದ್ದು ಅವರ ಹೆಗ್ಗಳಿಕೆ. ಕೊಟ್ಟ ಮಾತು ತಪ್ಪಲಿಲ್ಲ
ಜನಾರ್ಧನ ರೆಡ್ಡಿ, ಮಾಜಿ ಸಚಿವ 1999ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ನಿಂದ ಸೋನಿಯಾ ಗಾಂಧಿಯವರು ಕಣಕ್ಕಿಳಿದಿದ್ದ ಸಂದರ್ಭದಲ್ಲಿ ಬಿಜೆಪಿಯಿಂದ ಸುಷ್ಮಾ ಸ್ವರಾಜ್ ಸ್ಪರ್ಧಿಸಿದ್ದರು. ಅಷ್ಟು ಮಾತ್ರವಲ್ಲದೆ, ತಾವೇ ರಚಿಸಿದ್ದ ವಿದೇಶಿ ಎದುರು ಸ್ವದೇಶಿ ಎಂಬ ಸ್ಲೋಗನ್ ಅಡಿಯಲ್ಲಿ ಚುನಾವಣೆ ಎದುರಿಸಿದರು. 18 ದಿನಗಳ ಕಾಲ ಬಳ್ಳಾರಿಯಲ್ಲೇ ಇದ್ದು, ಅಂತಿಮವಾಗಿ ಸೋಲು ಕಂಡರೂ, ಅವರು ಧೃತಿಗೆಡಲಿಲ್ಲ. ಚುನಾವಣೆ ಮುಗಿಸಿ ವಾಪಾಸ್ ಹೋಗುವ ಸಂದರ್ಭದಲ್ಲಿ ಜನಾರ್ಧನ್ ರೆಡ್ಡಿ ಹಾಗೂ ಶ್ರೀರಾಮು ಅವರು ಹೆಲಿಪ್ಯಾಡ್ ಹತ್ತಿರ ಅಳುತ್ತಿದ್ದನ್ನು ಕಂಡು ಹೆಲಿಕಾಪ್ಟರ್ ಹತ್ತಿದವರು ವಾಪಾಸ್ ಬಂದು ಅವರಿಬ್ಬರಲ್ಲೂ ಧೈರ್ಯ ತುಂಬಿದ್ದರು. ಅಷ್ಟು ಮಾತ್ರವಲ್ಲದೆ ಪ್ರತಿ ವರ್ಷ ಬಳ್ಳಾರಿಗೆ ಬರುವುದಾಗಿ ಮಾತು ಕೊಟ್ಟಿದ್ದರು. ಅದರಂತೆ ಮುಂದಿನ 13 ವರ್ಷಗಳ ಕಾಲ ವರಮಹಾಲಕ್ಷ್ಮೀ ಪೂಜೆಯ ದಿನ ಬಳ್ಳಾರಿಗೆ ಬಂದು ಪೂಜೆ ನಡೆಸುತ್ತಿದ್ದರು. ಕೊಟ್ಟ ಮಾತನ್ನು ತಪ್ಪಿದವರಲ್ಲ. ಜನ್ಮ ಕೊಟ್ಟ ತಾಯಿಯ ನಂತರ ಪ್ರೀತಿ, ಮಮತೆ ಕೊಟ್ಟವರು ಸುಷ್ಮಾ ಸ್ವರಾಜ್, 13 ವರ್ಷ ನಮ್ಮ ಕುಟುಂಬದ ಒಡನಾಡ ಹೊಂದಿದ್ದರು. ರಾಜಕೀಯದಲ್ಲಿದ್ದರೂ ರಾಜಕಾರಣಿಯಂತೆ ಇರಲಿಲ್ಲ. ಮಾನವೀಯತೆಯಲ್ಲಿ ದೇವರ ನಂತರದ ಸ್ಥಾನ ಪಡೆದವರಾಗಿದ್ದರು. ಮೋಸ, ಸುಳ್ಳು, ವಂಚನೆ ಇಲ್ಲದ ನಿರ್ಮಲ ಮನಸ್ಸು ಅವರದ್ದಾಗಿತ್ತು. ಅವರ ಹೋರಾಟ, ದೇಶಭಕ್ತಿ ಪ್ರೇರಣೆಯಾಗಿತ್ತು. ಅವರು ಇಂದು ನಮ್ಮೊಂದಿಗೆ ಇಲ್ಲ ಎಂಬುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.