ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಬಿಳಿಗಿರಿರಂಗನ ಬೆಟ್ಟದಲ್ಲಿ ಬಿಳಿಗಿರಿ ರಂಗನಾಥಸ್ವಾಮಿಅವರ ಬ್ರಹ್ಮರಥೋತ್ಸವ, ಜಾತ್ರಾ ಮಹೋತ್ಸವ ಕಾರ್ಯಕ್ರಮವು ಅದ್ಧೂರಿಯಿಂದ ನಡೆಯಲುಅಗತ್ಯವಿರುವ ಸಕಲ ಸಿದ್ಧತೆ ಕೈಗೊಳ್ಳುವಂತೆ ವಸತಿ,ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಸೂಚನೆ ನೀಡಿದರು.
ಬುಧವಾರ, ಬೆಂಗಳೂರಿನ ವಿಧಾನಸೌಧದ ಕೊಠಡಿ ಸಮಿತಿ ಸಭಾಂಗಣದಲ್ಲಿ ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ಬ್ರಹ್ಮ ರಥೋತ್ಸವ ಜಾತ್ರಾಕಾರ್ಯಕ್ರಮಗಳ ಪೂರ್ವ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
6 ವರ್ಷಗಳಿಂದ ರಥೋತ್ಸವ ನಡೆದಿಲ್ಲ: ಬಿಳಿಗಿರಿ ರಂಗನಾಥಸ್ವಾಮಿ ಅವರ ರಥವು ಸುಮಾರು 100ವರ್ಷಗಳಿಗಿಂತ ಹಳೆಯದಾಗಿದ್ದರಿಂದ 2016 ರಲ್ಲಿರಥವು ತುಂಬಾ ಶಿಥಿಲವಾದ ಕಾರಣ, ಕಳೆದ 6ವರ್ಷಗಳಿಂದ ರಥೋತ್ಸವ ನಡೆದಿರಲಿಲ್ಲ. ನೂತನ ರಥವನ್ನು ನಿರ್ಮಾಣ ಮಾಡಲಾಗಿದೆ. ಹೀಗಾಗಿ ಏ.16 ರಂದು ಬ್ರಹ್ಮರಥೋತ್ಸವವನ್ನು ಎಲ್ಲಾ ಭಕ್ತಾದಿಗಳು ಪಾಲ್ಗೊಳ್ಳಲು ಅವಕಾಶವಾಗುಂತೆ ಬ್ರಹ್ಮರಥೋತ್ಸವವನ್ನು ಯಶಸ್ವಿಯಾಗಿ ನಡೆಸಲು ಎಲ್ಲಾ ವ್ಯವಸ್ಥೆಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಭಕ್ತಾದಿಗಳಿಗೆ ಸೌಕರ್ಯ ಕಲ್ಪಿಸಿ: ಬಿಳಿಗಿರಿರಂಗನಾಥ ಸ್ವಾಮಿ ಜಾತ್ರೆ ಹಾಗೂ ಬ್ರಹ್ಮ ರಥೋತ್ಸವಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಕಲ್ಪಿಸಬೇಕು. ರಸ್ತೆಗಳನ್ನು ಸರಿಪಡಿಸಿ ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು. ರಥ ಚಲಿಸುವ ರಥದ ಬೀದಿಯಲ್ಲೂ ರಥದ ಚಲನೆ ವ್ಯವಸ್ಥೆಗೆ ಅನುವು ಮಾಡಿಕೊಡಬೇಕು. ರಥೋತ್ಸವಕ್ಕೂ ಮೊದಲು ಕೈಗೊಳ್ಳಬೇಕಿರುವ ರಥದ ಮೊದಲ ಚಲನೆ ಪ್ರಕ್ರಿಯೆಗೆ ಸಾಂಪ್ರದಾಯದಂತೆ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಸಚಿವರು ತಿಳಿಸಿದರು.
ನೆಲಹಾಸು ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು: ಶಾಸಕ ಎನ್. ಮಹೇಶ್ ಮಾತನಾಡಿ, ಪ್ರವಾಸೋದ್ಯಮ ಇಲಾಖೆಯ ಅನುದಾನದಲ್ಲಿ ರಾಜ್ಯ ಪುರಾತತ್ವ ಇಲಾಖೆ ದೇವಾಲಯದ ಆವರಣದಲ್ಲಿಕೈಗೊಂಡಿರುವ ನೆಲಹಾಸು ಕಾಮಗಾರಿಯನ್ನು ಶೀಘ್ರಪೂರ್ಣಗೊಳಿಸಬೇಕು. ರಥೋತ್ಸವಕ್ಕೂ ಮೊದಲುಸಂಪ್ರದಾಯದಂತೆ ನಡೆಸಬೇಕಿರುವ ರಥದ ಮೊದಲಚಲನೆಯ ಮಟತೇರು ಕಾರ್ಯವನ್ನು ನೆರವೇರಿಸಲು ಸಿದ್ದತೆ ಕೈಗೊಳ್ಳಬೇಕೆಂದು ಸೂಚಿಸಿದರು.
ಇದೇ ಮಾ.18 ರಂದು ತಾವು ಶಾಸಕ ಎನ್. ಮಹೇಶ್ ಅವರೊಂದಿಗೆ ಬಿಳಿಗಿರಿ ರಂಗನ ಬೆಟ್ಟಕ್ಕೆ ಭೇಟಿ ನೀಡಿ ಬ್ರಹ್ಮ ರಥೋತ್ಸವ, ಜಾತ್ರಾ ಮಹೋತ್ಸವ ಪೂರ್ವ ಸಿದ್ಧತೆಗಳನ್ನು ವೀಕ್ಷಿಸುವುದಾಗಿ ಸೋಮಣ್ಣ ತಿಳಿಸಿದರು.
ಜಿಲ್ಲಾಧಿಕಾರಿ ಚಾರುಲತಾ ಸೋಮಲ್, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕ ಸಿಂಧೂ ರೂಪೇಶ್,ಜಿ ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎನ್. ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ್, ಉಪವಿಭಾಗಾಧಿಕಾರಿ ಡಾ.ಗಿರೀಶ್‌ದಿಲೀಪ್ ಬಡೋಲೆ, ತಹಶೀಲ್ದಾರ್ ಆನಂದಪ್ಪನಾಯಕ, ದೇವಾಲಯದ ಪ್ರಧಾನ ಅರ್ಚಕ ರವಿಕುಮಾರ್,ಅರ್ಚಕ ನಾಗೇಂದ್ರಭಟ್, ಆಗಮಿಕ ನಾಗರಾಜ ಭಟ್, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ವಿನಯ್, ಕೆ.ಎಸ್.ಆರ್.ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.