Advertisement

ಬಾಲ ಯೇಸುವಿನ ಆರಾಧನೆಯಲಿ ಮಿಂದೆದ್ದ ಭಕ್ತರು

06:39 AM Jan 15, 2019 | |

ಬೆಂಗಳೂರು: ನಕ್ಷತ್ರಗಳ ಮಿಂಚು, ಬಲೂನ್‌ಗಳ ಚಿತ್ತಾರ, ಶುಭ ಸಂಕೇತದ ಗಂಟೆ ನಾದ, ವಿದ್ಯುತ್‌ ದೀಪಾಲಂಕಾರಗಳಿಂದ ವರ್ಣರಂಜಿತವಾಗಿ ಸಿಂಗಾರಗೊಂಡಿರುವ ಬಾಲ ಯೇಸುವಿನ ದೇವಾಲಯ. ಒಳಗಿನ ಸಭಾಂಗಣದಲ್ಲಿ ಧರ್ಮ ಗುರುಗಳಿಂದ ಬಲಿಪೂಜೆ, ಹೊರಭಾಗದ ಮೈದಾನದಲ್ಲಿ ಸಾವಿರಾರು ಭಕ್ತರಿಂದ ಶಾಂತಿ ಪ್ರಾರ್ಥನೆ – ಇದು ಸೋಮವಾರ ಸಂಜೆ ವಿವೇಕ ನಗರದ ಇನಾ#ಂಟ್‌ ಜೀಸಸ್‌ ಚರ್ಚ್‌ನ 48ನೇ ವಾರ್ಷಿಕೋತ್ಸವದಲ್ಲಿ ಕಂಡುಬಂದ ದೃಶ್ಯ.

Advertisement

ನಗರದ ಪುರಾತನ ಚರ್ಚ್‌ಗಳಲ್ಲಿ ಒಂದಾಗಿರುವ ವಿವೇಕ ನಗರದ ಇನ್ಫಾಂಟ್ ಜೀಸಸ್‌ ಚರ್ಚ್‌ನಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಜ.5ರಿಂದ ಜ.14ರವರೆಗೆ ವಾರ್ಷಿಕೋತ್ಸವ ಸಮಾರಂಭ (ಬಾಲ ಯೇಸುವಿನ ಹಬ್ಬ) ಆಯೋಜಿಸಲಾಗಿತ್ತು. ಕೊನೆ ದಿನವಾದ ಸೋಮವಾರ ಸಂಜೆ 6 ಗಂಟೆಗೆ ಬಾಲ ಯೇಸುವಿನ ತೇರನ್ನು ಏಳೆಯುವ ಮೂಲಕ ಹಬ್ಬಕ್ಕೆ ತೆರೆ ಏಳೆಯಲಾಯಿತು.

ಹಬ್ಬದ ಹಿನ್ನೆಲೆ ಸುತ್ತಮುತ್ತಲ ಬಡಾವಣೆಗಳ  ಕ್ರೈಸ್ತ ಬಾಂಧವರು ಬಡವರಿಗೆ ಬಟ್ಟೆ, ಆಹಾರ ಇತ್ಯಾದಿ ದಾನ ಮಾಡಿ, ಸ್ನೇಹಿತರೊಂದಿಗೆ ಉಡುಗೊರೆಗಳನ್ನು ಪರಸ್ಪರ ವಿನಿಮಯ ಮಾಡಿಕೊಂಡರು. ತಮ್ಮ ಮನೆಗಳಲ್ಲಿ ಸಿಹಿ ತಿಂಡಿಗಳು, ವಿಶೇಷ ಖಾದ್ಯಗಳನ್ನು ತಯಾರಿಸಿ ಬಂಧು ಮಿತ್ರರೊಂದಿಗೆ ಸವಿದು ಸಡಗರ ಸಂಭ್ರಮದಿಂದ ಬಾಲ ಏಸುವಿನ ಹಬ್ಬವನ್ನು ಆಚರಿಸಿದರು.

ಡಿ.4 ರಂದು ಬೆಂಗಳೂರು ಮಾಹಾಧರ್ಮಾಧ್ಯಕ್ಷ ಪೀಟರ್‌ ಮಚಾದೋ ಅವರು ಧ್ವಜಾರೋಹಣ ಮಾಡುವ ಮೂಲಕ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದ್ದರು. ಆ ನಂತರ ನಿತ್ಯ ಚರ್ಚ್‌ನಲ್ಲಿ ವಿಶೇಷ ಪೂಜೆ, ಕನ್ನಡ, ತಮಿಳು, ಕೊಂಕಣಿ ಹಾಗೂ ಇಂಗ್ಲೀಷ್‌ನಲ್ಲಿ ಪ್ರಾರ್ಥನೆಗಳು ಜರುಗಿದವು. ವಿಶೇಷವಾಗಿ ಡಿ.5ರಂದು ವ್ಯಾದಿಷ್ಠರಿಗಾಗಿ ಬಲಿಪೂಜೆ, ಡಿ.6ರಂದು ಸಾಮೂಹಿಕ ವಿವಾಹ, ದಂಪತಿಗಳ ಬಲಿ ಪೂಜೆಗಳು ನಡೆಸಲಾಗಿತ್ತು ಎಂದು ಚರ್ಚ್‌ನ ಅಧಿಕಾರಿಗಳು ತಿಳಿಸಿದರು.

ಇನ್ನು ವಾರ್ಷಿಕೊತ್ಸವದ ಕೊನೆಯ ದಿನವೂ ಮುಂಜಾನೆ 5 ಗಂಟೆಯಿಂದಲೇ ಪ್ರಾರ್ಥನೆಗಳು ನಡೆದವು. ಸಂಜೆ 7 ಗಂಟೆಗೆ ಮಾಜಿ ಬೆಂಗಳೂರು ಮಹಾಧರ್ಮಾಧ್ಯಕ್ಷ ಡಾ.ಬರ್ನಾಡ್‌ ಮೋರಸ್‌ ತೇರಿಗೆ ಆಶೀರ್ವಾದ ಮಾಡಿದರು. ಆನಂತರ ತೇರು ಎಲ್‌.ಆರ್‌.ನಗರ, ವಿವೇಕ ನಗರ, ಆನೇಪಾಳ್ಯ, ಈಜೀಪುರ, ನೀಲಸಂದ್ರ, ಹಲಸೂರಿನ ಸುತ್ತಮುತ್ತ ಸಾಗಿತು. ಅಪಾರ ಭಕ್ತರು ಭಾಗವಹಿಸಿದ್ದರು. ರಾತ್ರಿ 12 ಗಂಟೆಗೆ ತೇರು ಚರ್ಚ್‌ಗೆ ಹಿಂದಿರುಗಿತು.

Advertisement

ಕ್ರೈಸ್ತರು ಮೃದು ಸ್ವಭಾವ ಸರಳ ವ್ಯಕ್ತಿತ್ವದವರು – ಸಿಎಂ: ನಾನು ಚಿಕ್ಕವಯಸ್ಸಿನಿಂದ ಗಮನಿಸಿದಂತೆ ಕ್ರೈಸ್ತ ಸಮಯದಾಯವು ಅತ್ಯಂತ ಮೃದು ಸ್ವಾಭಾವದ, ಸರಳ ವ್ಯಕ್ತಿತ್ವದವರು. ಅಲ್ಲದೇ ಕ್ರೈಸ್ತರು ತಮ್ಮೊಡನೆ ಇತರೆ ಸಮುದಾಯವನ್ನು ಅತೀ ಹೆಚ್ಚು ಗೌರವಿಸುವ ಗುಣವನ್ನು ಹೊಂದಿದ್ದಾರೆಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.

ವಾರ್ಷಿಕೋತ್ಸವ ಕೊನೆಯ ದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಹಿಂದಿನ ಬಾರಿ ಸಿಎಂ ಆಗಿದ್ದಾಗ ಜನತಾದರ್ಶನದಲ್ಲಿ ಸ್ವಾಭಿಮಾನದ ಜೀವನ ನಡೆಸಬೇಕು ಎಂದು ಮಹತ್ವಾಕಾಂಕ್ಷೆಯುಳ್ಳ ವಿದ್ಯಾವಂತ 600 ವಿಕಲಚೇತನರಿಗೆ ಕೆಪಿಟಿಸಿಎಲ್‌ನಲ್ಲಿ ತಾತ್ಕಾಲಿಕ ಹುದ್ದೆಯನ್ನು ಕೊಡಿಸಿದ್ದೆ. ಆನಂತರ ದಿನಗಳಲ್ಲಿ ಹುದ್ದೆಯ ಖಾಯಂ ಮಾಡಿಕೊಡಲು ಸಾಕಷ್ಟು ಮನವಿ ಬಂದಿದ್ದವು ಎಂದು ಹೇಳಿದರು.

ಕುಮಾರಸ್ವಾಮಿ ಕೇವಲ ರೈತರ ಸಿಎಂ ಎನ್ನುವುದು ಬೇಡ. ಬೆಂಗಳೂರಿನಲ್ಲಿ 42 ಸಾವಿರ ಕೋಟಿ ರೂ ವೆಚ್ಚದಲ್ಲಿ ಫೆರಿಫೆರಲ್‌ ರಿಂಗ್‌ ರಸ್ತೆ ಹಾಗೂ ಎಲಿವೇಟೆಡ್‌ ಕಾರಿಡಾರ್‌ ರಸ್ತೆ, 36 ಸಾವಿರ ಕೋಟಿ ರೂ. ವೆಚ್ಚದಲ್ಲಿ ಉಪನಗರ ರೈಲು ಯೋಜನೆಗೆ ಚಾಲನೆ ನೀಡಿ ನಗರ ವಾಸಿಗಳ ಸಂಚಾರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುಲು ಮುಂದಾಗಿದ್ದೇವೆ.

ಇನ್ನು ಕ್ರೈಸ್ತರಿಗೆ ಸ್ಮಶಾನದ ಕೊರತೆ ಇದೆ ಎಂದು ಧರ್ಮಾಧ್ಯಕ್ಷರು ಗಮನಕ್ಕೆ ತಂದಿದ್ದು, ಅದನ್ನು ನಿವಾರಿಸಲು ನಿಟ್ಟಿನಲ್ಲಿ ಈಗಾಗಲೇ ಮೈತ್ರಿ ಸರ್ಕಾರ ಕ್ರಮಕೈಗೊಳ್ಳತ್ತಿದೆ ಎಂದರು. ಮಾಜಿ ಬೆಂಗಳೂರು ಮಹಾಧರ್ಮಾಧ್ಯಕ್ಷ ಡಾ.ಬರ್ನಾಡ್‌ ಮೋರಸ್‌ ಮಾತನಾಡಿದರು.

ಈ ವೇಳೆ ಬೆಂಗಳೂರಿನ ಕ್ಯಾಥೋಲಿಕ್‌ ಚರ್ಚ್‌ಗಳಿಗೆ ಸಂಬಂಧಿಸಿದಂತೆ www.bangalorearchdiocese.org ನೂತನ ವೆಬ್‌ಸೈಟ್‌ಗೆ ಚಾಲನೆ ನೀಡಲಾಯಿತು. ಶಾಸಕ ಎನ್‌.ಎ.ಹ್ಯಾರಿಸ್‌, ಜಯನಗರ ಶಾಸಕಿ ಸೌಮ್ಯರೆಡ್ಡಿ, ಶಾಸಕಿ ವಿನೇಶಾ, ರೆವೆರಂಡ್‌ ಫಾದರ್‌ ಜಯನಾಥನ್‌, ಫಾದರ್‌ ಅಂಥೋನಿಸ್ವಾಮಿ, ಫಾದರ್‌ ಜೋಸೆಪ್‌ ಮಿನಾನ್ಸ್‌, ಸ್ಥಳೀಯ ಬಿಬಿಎಂಪಿ ಸದಸ್ಯ ಶಿವಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next