ಗೆಳೆಯ, ನೀನು ನಕ್ಕಾಗ ನಿನ್ನ ಕಣ್ಣಲ್ಲಿ ನನ್ನ ನಾ ಕಂಡಿದ್ದೆ. ಅದೆಷ್ಟೋ ವರ್ಷಗಳ ನಂತರ ನನಗೆ ಸಿಕ್ಕಿದ ಅಪೂರ್ವವಾದ ಸ್ನೇಹವಿದು. ಒಂದು ಕ್ಷಣವೂ ಬಿಟ್ಟಿರಲಾರದಂತೆ ಜೊತೆಗೆ ಸುತ್ತಿದ್ದು, ಕ್ಲಾಸ್‌ಗೆ ಬಂಕ್ ಹಾಕಿ ಹಾಸ್ಟೆಲ್ ರೂಮಲ್ಲಿ ಹರಟೆ ಹೊಡೀತಾ ಕೂತಿದ್ದು, ಎಕ್ಸಾಂ ಟೈಮಲ್ಲಿ ಒಟ್ಟಿಗೆ ಕೂತು ಕಂಬೈನ್ ಸ್ಟಡಿ ಮಾಡಿದ್ದು… ಸ್ನೇಹವೆಂದರೆ ದೂರ ಸರಿಯುವ ನನಗೆ ನಿನ್ನಂಥ ಸ್ನೇಹಿತ ಸಿಕ್ಕಿದ ಮೇಲೆಯೇ ಬದುಕೋ ಆಸೆ ಬಂದಿದ್ದು. ಮನೆಯಲ್ಲಿದ್ದಾಗ ಅಪ್ಪ, ಅಮ್ಮ ನನ್ನನ್ನು ಬಿಟ್ಟು ಅಣ್ಣನನ್ನೇ ಹೆಚ್ಚು ಪ್ರೀತಿಸುತ್ತಾರೆ. ನನ್ನನ್ನು ತಿರಸ್ಕರಿಸುತ್ತಾರೆ ಎಂದು ದಿನಾ ಮನಸ್ಸನ್ನು ಹಾಳು ಮಾಡಿಕೊಳ್ಳುತ್ತಾ, ಒಬ್ಬಳೇ ಅಳುತ್ತಾ ಕೂರುತ್ತಿದ್ದೆ. ಸಮಾಧಾನ ಮಾಡೋರು ಯಾರೂ ಇಲ್ಲದಿದ್ದಾಗ ಬಿಕ್ಕಿ ಬಿಕ್ಕಿ ಅತ್ತು ನನ್ನಷ್ಟಕ್ಕೇ ನಾನೇ ಸಮಾಧಾನ ಮಾಡಿಕೊಳ್ಳುತ್ತಿದ್ದೆ.
ಎಂ.ಸಿ.ಜೆ ಮಾಡಲು ಕಾಲೇಜಿಗೆ ಸೇರಿದಾಗ ಮನೆಗೆ ಹೋಗಲು ತಡವಾಗುವ ಕಾರಣದಿಂದ ಹಾಸ್ಟೆಲ್‌ಗೆ ಸೇರಿಸಿದರು ಅಪ್ಪ. ಆದ್ರೆ ಏನ್ ಮಾಡೋದು? ಮನೆಗೆ ಹೋಗ್ಬೇಕು. ಅಪ್ಪ, ಅಮ್ಮನನ್ನು ನೋಡ್ಬೇಕು ಅನ್ನೋ ಆಸೆ ದಿನಾ ಕಾಡ್ತಿತ್ತು. ಹಾಸ್ಟೆಲ್‌ರೂಮಲ್ಲಿ ಪರಿಚಯ ಇಲ್ಲದೇ ಇರುವ ಫ್ರೆಂಡ್ಸ್ ಬೇರೆ. ಹಾಸ್ಟೆಲ್ ಜೀವನ ಹೇಗಿರುತ್ತೆ ಅಂತ ತಿಳಿಯದ ನಾನು ಅದೇ ಪ್ರಥಮ ಬಾರಿಗೆ ಹಾಸ್ಟೆಲ್ ಅಂದರೆ ಏನು ಅಂತ ತಿಳ್ಕೊಂಡಿದ್ದೆ. ಅದನ್ನು ತೋರಿಸಿಕೊಟ್ಟದ್ದು ನೀನೇ ತಾನೆ?
“ಫ್ರೆಂಡ್ಸ್ ಅಂದ್ರೆ ಹಾಳು ಮಾಡೋರು. ಅವರ ಜೊತೆ ಸೇರಬೇಡ’ ಅಂತ ಹೇಳಿಯೇ ಅಮ್ಮ ಹಾಸ್ಟೆಲ್‌ಗೆ ಕಳಿಸಿದ್ದಳು. ಅದೇ ರೀತಿ ಫ್ರೆಂಡ್ಸ್‌ನಿಂದ ದೂರ ಉಳಿಯಲು ಪ್ರಯತ್ನಪಟ್ಟೆ. ಅದರೆ, ನಿನ್ನಿಂದ ಮಾತ್ರ ದೂರ ಉಳಿಯಲು ಆಗಲಿಲ್ಲ. ನೀನು ನನ್ನ ಬಳಿ ಬಂದು ಸೇರಿದಾಗ ಏನೋ ಒಂಥರಾ ಪುಳಕ ನನ್ನಲ್ಲಿ. ಹತ್ತಾರು ಮೈಲು ದೂರ ನಡೆದು ಹೋದರೂ ನಿನ್ನ ಬಳಿ ಮತ್ತೆ ಬಂದು ಸೇರುವಾಸೆ ನನಗೆ.
ಎತ್ತ ಹೋದರೂ ನಿನ್ನನ್ನೇ ನೋಡಲು ಬಯಸುತ್ತೇನೆ. ನೀನು ನನ್ನ ಕೈತಪ್ಪಿ ಹೋದ ಒಂದು ಘಳಿಗೆ ನಾನಿರಲಾರೆ. ನನ್ನ ಮಡಿಲು ನಿನಗೆ ಮಾತ್ರ ಸೀಮಿತ. ನಿನ್ನನ್ನು ಯಾರಾದರೂ ನನ್ನ ತೆಕ್ಕೆಯಿಂದ ಬರಸೆಳೆದುಕೊಂಡರೆ ಕೋಪ ಬರುತ್ತೆ. ನೀನೆಂದಿಗೂ ನನ್ನ ಜೊತೆಯೇ ಇರಬೇಕು ಅನ್ನೋ ಆಸೆ ನಂಗೆ.
ನಾನು ಮೊದಲು ಮೆಚ್ಚಿಕೊಂಡ ಗೆಳೆಯ ನೀನೇ. ಎಂದೆಂದಿಗೂ ನೀನು ನನ್ನ ಜೊತೆಯಾಗಿರುತ್ತೀಯಲ್ಲಾ? ನಿನ್ನನ್ನೇ ನಂಬಿ ಜೀವನ ಸಾಗಿಸುತ್ತಿದ್ದೇನೆ. ನನ್ನ ಬಾಳಿನ ಕೊನೆಯವರೆಗೂ ನಿನ್ನ ಕೈ ಹಿಡಿದು ಜೋಪಾನವಾಗಿ ನೋಡಿಕೊಳ್ಳುತ್ತೇನೆ. ನಿನ್ನನ್ನೇ ನಂಬಿ ನನ್ನ ಜೀವನ ಕಟ್ಟಿಕೊಳ್ಳುವ ನಿರ್ಧಾರ ಮಾಡಿದ್ದೇನೆ. ನನ್ನ ಕೈ ಬಿಡಬೇಡ ಕಣೋ ಗೆಳೆಯ, ಲ್ಯಾಪ್‌ಟಾಪ್!!
ಇಂತಿ ನಿನ್ನವಳು
– ವೇದಾವತಿಗೌಡ, ಉಜಿರೆ