Advertisement

ನಂಬಿಕೆ: ಸಾಮಾಜಿಕ ನ್ಯಾಯದ ಮಾನದಂಡದಲ್ಲಿ ಅಳೆಯಬೇಕೇ?

04:59 PM Mar 26, 2019 | |

ಸುಪ್ರೀಮ್‌ ಕೋರ್ಟ್‌ ಶಬರಿಮಲೆಯ ಕುರಿತು ನೀಡಿದ ತೀರ್ಪಿನ ಅನಂತರ ಅದರ ಪರ ಹಾಗೂ ವಿರುದ್ಧ ನಾನಾ ರೀತಿಯ ಅಭಿಪ್ರಾಯಗಳು ಕೇಳಿಬರುತ್ತಿವೆ. ಹಿಂದು ಧರ್ಮದಲ್ಲಿ ವಿವಿಧ ರೀತಿಯ ಧಾರ್ಮಿಕ ನಂಬಿಕೆಗಳು, ಶ್ರದ್ಧೆಗಳು, ಆಚರಣೆಗಳಿವೆ. ಆದರೆ ಇಲ್ಲಿ ಗಮನಿಸಬೇಕಾದುದು ಏನೆಂದರೆ ಇಲ್ಲಿ ಎಲ್ಲಾ ನಂಬಿಕೆಗಳು, ಆಚರಣೆಗಳನ್ನು ಅವರವರ ವಿಶ್ವಾಸಕ್ಕೆ, ಶ್ರದ್ಧೆಗೆ ಬಿಟ್ಟಿದ್ದಾರೆ.  ಯಾವುದನ್ನೇ ಆಗಲಿ ಆಚರಿಸಲೇಬೇಕು, ನಂಬಲೇ ಬೇಕು ಎಂದು ಯಾರ ಮೇಲೂ ಯಾವುದೇ ರೀತಿಯ ಕಡ್ಡಾಯವಿಲ್ಲ, ನಿರ್ಬಂಧಗಳಿಲ್ಲ, ಹೇರಿಕೆಗಳು ಇಲ್ಲ.

Advertisement

ಅದೇ ರೀತಿಯಲ್ಲಿ ಋತುಮತಿಯಾದ ಮಹಿಳೆ ದೇವಸ್ಥಾನಕ್ಕೆ ಹೋಗಬಾರದು, ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಬಾರದು ಎಂಬುದು ಒಂದು ನಂಬಿಕೆ. ಇದು ನಿಜವಾಗಿಯೂ ಎಲ್ಲಾ ದೇವಸ್ಥಾನಕ್ಕೆ ಅನ್ವಯಿಸುವಂತಹ ನಂಬಿಕೆ, ಕೇವಲ ಶಬರಿಮಲೆ ದೇವಸ್ಥಾನಕ್ಕೆ ಮಾತ್ರ ಅಲ್ಲ. ಆದರೆ ಮೊದಲೆ ಹೇಳಿದ ಹಾಗೆ ನಮ್ಮ ಹೆಚ್ಚಿನ ಧಾರ್ಮಿಕ ಆಚರಣೆಗಳನ್ನು ಜನರ ಶ್ರದ್ಧೆಗೆ ಬಿಟ್ಟ ಕಾರಣ ಯಾವುದೇ ದೇವಸ್ಥಾನಗಳಲ್ಲಿ ಈ ಬಗ್ಗೆ ಅಂತಹ ಕಠಿಣ ಆಚರಣೆ ಕಾಣುವುದಿಲ್ಲ. ಎಷ್ಟೋ ಜನರು ಈಗಲೂ ಶ್ರದ್ಧೆಯಿಂದ ಅದನ್ನು ಆಚರಿಸುತ್ತಾರೆ. ಆದರೆ ಯಾವ ದೇವಸ್ಥಾನಗಳಲ್ಲೂ ಈ ಬಗ್ಗೆ ಯಾರನ್ನು ಪ್ರಶ್ನೆ ಮಾಡುವುದಿಲ್ಲ. ಆದರೆ ಕೇವಲ ಶಬರಿಮಲೆಯಲ್ಲಿ ಮಾತ್ರ 10 ರಿಂದ 50 ವರ್ಷದವಳಗಿನ ಮಹಿಳೆಯರಿಗೆ ದೇವಸ್ಥಾನದೊಳಗೆ ಪ್ರವೇಶವಿಲ್ಲ ಎಂಬ ಕಠಿಣ ಆಚರಣೆ ಇದೆ. ಹಾಗಾದರೆ ಇದು ಏಕೆ?

ನಮ್ಮ ದೇವಸ್ಥಾನಗಳೆಂದರೆ ಕೇವಲ ಪ್ರಾರ್ಥನ ಸ್ಥಳಗಳಲ್ಲ. ಅವುಗಳು ಧಾರ್ಮಿಕ ಶಕ್ತಿ ಕೇಂದ್ರಗಳು. ಪ್ರತಿಯೊಂದು ದೇವಸ್ಥಾನಗಳಿಗೂ ಅವುಗಳದ್ದೆ ಆದ ಇತಿಹಾಸವಿದೆ, ಸ್ಥಳ ಪುರಾಣವಿದೆ, ಅಲ್ಲಿನ ದೇವರ ಬಗ್ಗೆ ಕಥೆಗಳಿವೆ. ಅವುಗಳಿಗೆ ಅನುಗುಣವಾಗಿ ವರ್ಷಾಂತರಗಳಿಂದ ಬೆಳೆದು ಬಂದ ಆಚರಣೆಗಳು, ಪೂಜಾ ವಿಧಿವಿಧಾನಗಳು ಇವೆ. ದೇವರೊಬ್ಬನೆ ಎಂದರು, ಬೇರೆ ಬೇರೆ ದೇವರುಗಳಿಗೆ ಸಂಬಂಧಪಟ್ಟಂತೆ, ಬೇರೆ ಬೇರೆ ದೇವಸ್ಥಾನಗಳಿಗೆ ಸಂಬಂಧಪಟ್ಟಂತೆ ಜನರ ನಂಬಿಕೆಗಳು ಬೇರೆ ಬೇರೆ ಇವೆ. ಬೇರೆ ಬೇರೆ ರೀತಿಯ ಸಮಸ್ಯೆಗಳಿಗೆ ಜನರು ಬೇರೆ ಬೇರೆ ದೇವಸ್ಥಾನಕ್ಕೆ ಹೋಗುತ್ತಾರೆ. ವಿವಿಧ ರೀತಿಯ ಪೂಜಾಕ್ರಮಗಳ ಮೊರೆ ಹೋಗುತ್ತಾರೆ.

ಹಾಗಾಗಿ ಇಲ್ಲಿ ನಾವು ಶಬರಿಮಲೆಯ ಸ್ಥಳಪುರಾಣ, ಅಯ್ಯಪ್ಪ ದೇವರ ಐತಿಹ್ಯ, ಅಲ್ಲಿಗೆ ಸಂಬಂಧ ಪಟ್ಟ ಕತೆಗಳನ್ನು ತಿಳಿದುಕೊಳ್ಳಬೇಕಾಗುತ್ತದೆ. ಹೆಚ್ಚಿನ ಎಲ್ಲಾ ದೇವಸ್ಥಾನಗಳ ಆಚರಣೆಗಳು ಆ ದೇವಸ್ಥಾನಕ್ಕೆ ಸಂಬಂಧ ಪಟ್ಟಂತೆ ಇರುವ ಕಥೆ, ಸ್ಥಳಪುರಾಣಗಳ ಮೇಲೆ ನಿರ್ಧರಿಸಲ್ಪಡುವುದರಿಂದ ಅಯ್ಯಪ್ಪ ದೇವರ ಕುರಿತು ಇರುವ ಕತೆ, ನಂಬಿಕೆಗಳ ಆಧಾರದ ಮೇಲೆ ಇಂತಹ ಕಠಿಣ ಆಚರಣೆ ಬಂದಿರಬಹುದು. ಕೇವಲ ಹೆಣ್ಣು ಋತುಮತಿಯಾಗುತ್ತಾಳೆ ಎಂಬ ವಿಚಾರದಿಂದ ರೂಪಿತವಾದ ನಿರ್ಬಂಧ ಎನಿಸುವುದಿಲ್ಲ. ಇದು ಹಿಂದು ಧರ್ಮದಲ್ಲಿರುವ ಸಾಮಾನ್ಯ ನಂಬಿಕೆಯಾದ್ದರಿಂದ ಈ ವಿಚಾರಕ್ಕಾಗಿಯೇ ನಿರ್ಬಂಧವಿದ್ದಿದ್ದರೆ ಎಲ್ಲಾ ದೇವಸ್ಥಾನಗಳಲ್ಲಿ ಈ ಕಠಿಣ ಆಚರಣೆ ಕಾಣಬೇಕಾಗುತ್ತಿತ್ತು. ಹಾಗಿಲ್ಲವಲ್ಲ. ಅಯ್ಯಪ್ಪನನ್ನು ದೇವರೆಂದು ಮಣಿಕಂಠನ ಕುರಿತು ಇರುವ ಕತೆಯ ಆಧಾರದ ಮೇಲೆ ನಂಬುತ್ತೇವೆಯಾದರೆ, ಕತೆಯ ಆಧಾರದ ಮೇಲೆ ವರ್ಷಾಂತರಗಳಿಂದ ಬೆಳೆದು ಬಂದ ಅದಕ್ಕೆ ಸಂಬಂಧಪಟ್ಟ ಆಚರಣೆಗಳ ಬಗ್ಗೆಯೂ ವಿಶ್ವಾಸ ಬೇಕಲ್ಲವೇ? ಒಂದೊಂದು ದೇವಸ್ಥಾನಕ್ಕೆ ಒಂದೊಂದು ಸ್ಥಳ ಪುರಾಣ, ಅದರಿಂದಾಗಿ ರೂಪಿತಗೊಂಡ ನಂಬಿಕೆಗಳು, ಆಚರಣೆಗಳು, ಪೂಜಾ ವಿಧಾನಗಳು ಇರುವಾಗ ಅವನ್ನೆಲ್ಲ ಸಾಮಾಜಿಕ ನ್ಯಾಯದ ಮಾನದಂಡದಿಂದ ಅಳೆಯಲು ಸಾಧ್ಯವೇ?

 ರೂಪಾ ಬಿ. 

Advertisement
Advertisement

Udayavani is now on Telegram. Click here to join our channel and stay updated with the latest news.

Next