ಬೆಳಗಾಂ: ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ಎಂಬಂತೆ ಹಲವು ಘಟನೆಗಳು ವೈರಲ್ ಆಗುತ್ತಿರುತ್ತವೆ. ಇವುಗಳಲ್ಲಿ ಕೆಲವು ಸ್ಪೂರ್ತಿಯುತ ಘಟನೆಗಳಾಗಿದ್ದರೆ ಇನ್ನು ಕೆಲವು ನಮ್ಮ ವರ್ತನೆಗಳು ಹೇಗಿರಬಾರದು ಎಂಬುದನ್ನು ತಿಳಿಸುವ ರೀತಿಯ ಘಟನೆಗಳಾಗಿರುತ್ತವೆ.
ಇದೀಗ ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಒಂದು ಕುಂದಾ ನಗರಿ ಎಂದೇ ಖ್ಯಾತಿ ಪಡೆದಿರುವ ಬೆಳಗಾಂನಲ್ಲಿ ಸಂಚಾರಿ ಪೊಲೀಸ್ ಒಬ್ಬರ ಮಾದರಿ ಕಾರ್ಯಕ್ಕೆ ಸಂಬಂಧಿಸಿದ್ದಾಗಿದೆ.
ಸಂಚಾರಿ ಪೊಲೀಸ್ ಒಬ್ಬರು ರಸ್ತೆಯಲ್ಲಿ ತುಂಬಿದ್ದ ಮಳೆನೀರನ್ನು ರಸ್ತೆ ಬದಿ ಚರಂಡಿಗೆ ಹರಿದುಹೋಗುವಂತೆ ಮಾಡುವ ಪ್ರಯತ್ನದಲ್ಲಿರುವ ಘಟನೆಯನ್ನು ಸಾರ್ವಜನಿಕರೊಬ್ಬರು ವಿಡಿಯೋ ಚಿತ್ರಣ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ.
‘ಇಂತಹ ಪೊಲೀಸರು ನಮ್ಮ ಸಮಾಜಕ್ಕೆ ಆದರ್ಶ, ಇಂತವರಿಗೆ ಸೆಲ್ಯೂಟ್ ಹೊಡಿಲೇಬೇಕು’ ಎಂದು ಬರೆದು ಈ ವಿಡಿಯೋವನ್ನು ಅಕ್ಷಯ್ ಎಂಬುವವರು ತಮ್ಮ ಅಕೌಂಟ್ ನಲ್ಲಿ ಟ್ವೀಟ್ ಮಾಡಿದ್ದಾರೆ.
Related Articles
ಈ 43 ಸೆಕೆಂಡ್ ಗಳ ವಿಡಿಯೋದಲ್ಲಿ ಆ ಸಂಚಾರಿ ಪೊಲೀಸ್ ರಸ್ತೆಯಲ್ಲಿ ಸಂಗ್ರಹವಾಗಿದ್ದ ನೀರು ಚರಂಡಿಗೆ ಹರಿದು ಹೋಗುವಂತೆ ಅನುಕೂಲವಾಗಲು ಅವರೊಬ್ಬರೇ ಒಂದು ಚಿಕ್ಕ ಹಾರೆ ಹಿಡಿದು ನೀರಿಗೆ ಅಡ್ಡಿಯಾಗಿದ್ದ ಕಸ-ಮಣ್ಣನ್ನು ತೆರವುಗೊಳಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮ್ಮ ತಮ್ಮ ಅಡಿಬರಹವನ್ನು ನೀಡಿ ಈ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ಹೀಗೆ ಶೇರ್ ಮಾಡಿದವರಲ್ಲಿ ಐಪಿಎಸ್ ಅಧಿಕಾರಿ ರೂಪಾ ಡಿ., ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಸಹ ಸೇರಿದ್ದಾರೆ.
ಅಂತೂ ಸಂಚಾರಿ ಪೊಲೀಸ್ ಪೇದೆಯೊಬ್ಬರ ಈ ಸಮಾಜಮುಖಿ ಕಾರ್ಯ ನಮಗೆಲ್ಲರಿಗೂ ಮಾದರಿಯಾದರೆ ಉತ್ತಮವಲ್ಲವೇ?